ವಾಲ್ಮೀಕಿ ಸಮುದಾಯದ ಮೀಸಲು ಹೆಚ್ಚಳ ಬೇಡಿಕೆ ಈಡೇರಿಕೆ ಕುರಿತು ಪರಿಶೀಲನೆ: ಸಿಎಂ ಬೊಮ್ಮಾಯಿ
ಬೆಂಗಳೂರು: ವಾಲ್ಮೀಕಿ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಪ್ರಮಾಣ ಹೆಚ್ಚಿಸಲು ಕಾನೂನು ಚೌಕಟ್ಟಿನಲ್ಲಿ ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದು ಸವಾಲಿನ ಕೆಲಸ, ಆದರೂ ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.
ಜನಸಂಖ್ಯೆಗನುಗುಣವಾಗಿ ಮೀಸಲು ಪ್ರಮಾಣವನ್ನು ಶೇ.50ರ ಮಿತಿಯ ಒಳಗೆ ಹೆಚ್ಚಿಸಬೇಕಿದೆ. ವಾಲ್ಮೀಕಿ ಸಮುದಾಯದ ಶ್ರೀಗಳು ಹಾಗೂ ಸಮುದಾಯದ ಎಲ್ಲರ ಸಹಕಾರ ಇದಕ್ಕೆ ಅತ್ಯಗತ್ಯ. ಕಾನೂನು ಚೌಕಟ್ಟಿನ ಇತಿಮಿತಿಯಲ್ಲಿ ಯಾವ ರೀತಿ ಮೀಸಲಾತಿ ಪ್ರಮಾಣ ಹೆಚ್ಚಿಸಬಹುದು ಎಂಬುದರ ಕುರಿತು ಕಾನೂನು ತಜ್ಞರ ಸಮಿತಿ ಈಗಾಗಲೇ ರಚಿಸಲಾಗಿದೆ. ಸಾಮಾಜಿಕ ತಜ್ಞರೊಂದಿಗೂ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತಾವು ಮುಖ್ಯಮಂತ್ರಿಯಾದ ನಂತರ ಪರಿಶಿಷ್ಟ ವರ್ಗದವರಿಗೆ ಪ್ರತ್ಯೇಕ ಸಚಿವಾಲಯ ರಚಿಸಲಾಗಿದೆ. ಅದಕ್ಕೆ 7600 ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ. ಪ.ಜಾತಿ ಮತ್ತು ಪ.ಪಂಗಡದವರಿಗೆ ಭೂ ಒಡೆತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅದರ ಅನ್ವಯ ಅಧಿಕ ಸಂಖ್ಯೆಯಲ್ಲಿ ಜಮೀನು ಹಂಚಿಕೆ ಮಾಡುವ ಗುರಿಯನ್ನು ಸರ್ಕಾರ ಇರಿಸಿಕೊಂಡಿದೆ. ಈ ಸಂಬಂಧ ಡಿಸಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.
ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣ ಈ ಮೂರು ಸೂತ್ರಗಳಿಂದ ಸಮಾಜ ಕಲ್ಯಾಣ ಇಲಾಖೆಯನ್ನು ನಡೆಸಲು ತೀರ್ಮಾನಿಸಿದ್ದೇನೆ. ‘ಎಸ್ಸಿ, ಎಸ್ಟಿ ಹೆಣ್ಣು ಮಕ್ಕಳಿಗೆ ಸ್ವಯಂ ಉದ್ಯೋಗಕ್ಕೆ ಅವಕಾಶ ಕಲ್ಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಬಾರ್ಡ್ ಜೊತೆ ಮಾತನಾಡಿದ್ದೇನೆ. ಈ ಸಮುದಾಯದ ಹೆಣ್ಣು ಮಕ್ಕಳು ಆರ್ಥಿಕವಾಗಿ ಸ್ವಾವಲಂಬನೆ ಆಗಬೇಕು’ ಎಂದೂ ಹೇಳಿದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ಮೀಸಲಾತಿ ಹೆಚ್ಚಿಸಬೇಕು ಎಂದು ಒತ್ತಾಯಿಸಿ ವಾಲ್ಮೀಕಿ ಸಮುದಾಯ ನಡೆಸಿರುವ ಹೋರಾಟಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಕರಾತ್ಮಕವಾಗಿ ಸ್ಪಂದಿಸುವ ವಿಶ್ವಾಸ ತಮಗಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ವಾಲ್ಮೀಕಿ ಜಯಂತಿ ಆಚರನೆಯನ್ನು ಜಾರಿಗೆ ತರಲಾಯಿತು. ಈಗ ಪರಿಶಿಷ್ಟ ವರ್ಗಕ್ಕೆ ಪ್ರತ್ಯೇಕ ಸಚಿವಾಲಯ ರಚನೆಯಾಗಿದೆ ಎಂದು ಹೇಳಿದರು.
ಪ್ರಶಸ್ತಿ ಪ್ರದಾನ:
ಇದೇ ವೇಳೆ, 2020 ರ ಸಾಲಿಗೆ ಐದು ಸಾಧಕರು ಮತ್ತು 2021 ನೇ ಸಾಲಿಗೆ ಆರು ಸಾಧಕರು ಸೇರಿ ಒಟ್ಟು 11 ಸಾಧಕರಿಗೆ ‘ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿ’ಯನ್ನು ಮುಖ್ಯಮಂತ್ರಿ ಪ್ರದಾನ ಮಾಡಿದರು. ಡಾ.ಕೆ.ಆರ್.ಪಾಟೀಲ, (ಸಾಮಾಜಿಕ ಸೇವೆ), ಬಿ.ಎಲ್.ವೇಣು (ಸಾಹಿತ್ಯ), ಗೌರಿ ಕೊರಗ (ಸಮಾಜ ಸೇವೆ), ಮಾರಪ್ಪ ನಾಯಕ (ಸಂಘಟನೆ), ತಿಪ್ಪೇಸ್ವಾಮಿ.ಎಚ್ (ಸಮಾಜ ಸೇವೆ), ಕೆ. ಸಿ ನಾಗರಾಜು (ಸಮಾಜ ಸೇವೆ), ಲಕ್ಷ್ಮಿ ಗಣಪತಿ ಸಿದ್ದಿ (ಸಮಾಜ ಸೇವೆ), ಪ್ರೊ.ಎಸ್.ಆರ್.ನಿರಂಜನ (ಶಿಕ್ಷಣ ಕ್ಷೇತ್ರ), ಭಟ್ರಹಳ್ಳಿ ಗೂಳಪ್ಪ (ಸಮಾಜ ಸೇವೆ), ಅಶ್ವತ್ಥರಾಮಯ್ಯ (ಸಮಾಜ ಸೇವೆ), ಜಂಬಯ್ಯ ನಾಯಕ (ಸಮಾಜ ಸೇವೆ) ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪುರಸ್ಕೃತರಿಗೆ ₹ 5 ಲಕ್ಷ ನಗದು, 20 ಗ್ರಾಂ ಚಿನ್ನದ ಪದಕದ ಜೊತೆಗೆ ಫಲಕವನ್ನು ನೀಡಲಾಯಿತು.