ಅಲ್ಪಸಂಖ್ಯಾತ ಪಂಗಡಗಳನ್ನು ಗುರಿಯಾಗಿಸಿ ಮಾಡುವ ದಾಳಿಗಳು ಹೇಡಿತನದ್ದು: ವಿಶ್ವಸಂಸ್ಥೆ ಖಂಡನೆ
ಯುಎಸ್ಎ : ಅಫ್ಘಾನಿಸ್ತಾನದ ಕುಂಡುಜ್ ಶಿಯಾ ಮಸೀದಿಯ ಮೇಲೆ ನಡೆದ ಭೀಕರ ಮಾನವ ಬಾಂಬ್ ದಾಳಿಯನ್ನು ಉಲ್ಲೇಖಿಸಿ ಅಲ್ಪಸಂಖ್ಯಾತ ಪಂಗಡಗಳ ಮೇಲೆ ನಡೆಯುವ ದಾಳಿಗಳನ್ನು ವಿಶ್ವಸಂಸ್ಥೆ ಖಂಡಿಸಿದೆ.
ಅಕ್ಟೋಬರ್ 8ರಂದು ಖೋರಾಸನ್ ಪ್ರಾಂತ್ಯದ ಕುಂಡುಜ್ ಶಿಯಾ ಮಸೀದಿಯಲ್ಲಿ ಇರಾಕ್ನ ಇಸ್ಲಾಮಿಕ್ ಸ್ಟೇಟ್ ಎಂದು ಗುರುತಿಸಿಕೊಂಡಿದ್ದ ಉಗ್ರನೊಬ್ಬ ಮಸೀದಿಯ ಒಳಗೆ ಆತ್ಮಾಹುತಿ ದಾಳಿ ನಡೆಸಿದ್ದರಿಂದ 150 ಮಂದಿ ಹತ್ಯೆಯಾಗಿ, ಹಲವಾರು ಮಂದಿ ಗಾಯಗೊಂಡಿದ್ದರು. ದಾಳಿಯ ಹೊಣೆಯನ್ನು ಇಸ್ಲಾಮಿಕ್ಸ್ಟೇಟ್ ಉಗ್ರಗಾಮಿ ಸಂಘಟನೆ ಹೊತ್ತಿತ್ತು.
ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿಸಿ ಮಾಡುವ ದಾಳಿಗಳು ಹೇಡಿತನದ್ದು ಮತ್ತು ಅಮಾನವೀಯವಾದುದು ಎಂದು ವಿಶ್ವಸಂಸ್ಥೆ ಖಂಡಿಸಿದೆ. ಇಂತಹ ದಾಳಿಗಳನ್ನು ಹತ್ತಿಕ್ಕುವುದು ಎಲ್ಲರ ಆದ್ಯ ಕರ್ತವ್ಯ ಇಂತಹ ದುಷ್ಕೃತ್ಯಗಳಿಗೆ ಹಣಕಾಸು ಹಾಗೂ ಇತರ ನೆರವು ನೀಡುವವರನ್ನು ವಿಚಾರಣೆಗೆ ಒಳಪಡಿಸಿ ಶಿಕ್ಷೆಗೆ ಗುರಿಪಡಿಸುವ ಅಗತ್ಯ ಇದೆ ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ಹೇಳಿದೆ.
ಪ್ರತಿಯೊಬ್ಬರಿಗೆ ತಮ್ಮ ನಂಬಿಕೆ, ಆಚರಣೆಗಳನ್ನು ಅನುಸರಿಸಲು ಅವಕಾಶ ಇದೆ. ಧರ್ಮದ ಕಾರಣಕ್ಕೆ, ದಾಳಿ ಮಾಡುವುದನ್ನು ಸಹಿಸಲಾಗದು, ಈ ರೀತಿಯ ಮೂಲ ಭೂತವಾದವನ್ನು ಹತ್ತಿಕ್ಕಬೇಕಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹೇಳಿದೆ.