Latest

Vithalahenahalli Golibar: ವಿಠಲೇನಹಳ್ಳಿ ಗೋಲಿಬಾರ್ ಗೆ ಎರಡು ದಶಕ: ಇನ್ನು ಜಾರಿಯಾಗದ ನೀರಾ ನೀತಿ

ವರದಿ: ರಾಜೇಶ್ ಕೊಂಡಾಪುರ

ರಾಮನಗರ: ನೀರಾ ಚಳವಳಿ ಸಂದರ್ಭದಲ್ಲಿ ಗೋಲಿಬಾರ್ ನಡೆದು ಅಕ್ಟೋಬರ್ 9ಕ್ಕೆ ಎರಡು ದಶಕ. ಆದರೆ ರಾಜ್ಯದಲ್ಲಿ ಇನ್ನೂ ನೀರಾ ನೀತಿ ಮಾತ್ರ ಇನ್ನು ಜಾರಿಯಾಗಿಲ್ಲ! ಇದರಿಂದ ತೆಂಗು ಬೆಳೆಗಾರರ ಕಣ್ಣೀರು ಕಲ್ಪವೃಕ್ಷದ ಬುಡದಲ್ಲಿ ಮಡುಗಟ್ಟಿದೆ‌

ಹೌದು, ಚನ್ನಪಟ್ಟಣ ತಾಲ್ಲೂಕಿನ ವಿಠಲೇನಹಳ್ಳಿಯಲ್ಲಿ ನೀರಾ ಚಳವಳಿ ನಡೆಯುತ್ತಿದ್ದಾಗ 2001ರ ಅಕ್ಟೋಬರ್ 9 ರಂದು ಪೊಲೀಸರು ಲಾಠಿ ಪ್ರಹಾರ ಮತ್ತು ಗೋಲಿಬಾರ್‌ ನಡೆಸಿದ್ದರು. ಈ ದುರ್ಘಟನೆಯಲ್ಲಿ ಇಬ್ಬರು ಅಮಾಯಕ ರೈತರು ಬಲಿಯಾಗಿದ್ದರು. ಈ ಗೋಲಿಬಾರ್ ಘಟನೆಯನ್ನ ಬಳಸಿಕೊಂಡ ಯಾವ ರಾಜಕೀಯ ಪಕ್ಷದ ಮುಖಂಡರು ತಾವು ಅಧಿಕಾರಕ್ಕೇರಿದಾಗ ನೀರಾ ವಿಷಯದಲ್ಲಿ ಜಾಣ ಮೌನ ತಳೆದಿದ್ದು ತೆಂಗು ಬೆಳೆಗಾರರಲ್ಲಿ ಅಸಹನೆ ಮೂಡಿಸಿದೆ.

1999ರಲ್ಲಿ ನುಸಿ ಪೀಡೆ ರಾಜ್ಯದ ಬಹುತೇಕ ತೆಂಗು ಬೆಳೆಯುವ ಜಿಲ್ಲೆಗಳಲ್ಲಿ ಆವರಿಸಿ, ತೆಂಗಿನ ಬೆಳೆಯನ್ನು ನಾಶಪಡಿಸಲಾರಂಭಿಸಿತ್ತು. ಈ ನುಸಿ ಪೀಡೆಯಿಂದ ತೆಂಗಿನ ಮರಗಳನ್ನು ರಕ್ಷಿಸುವ ಹಾಗೂ ತೆಂಗು ಬೆಳೆಗಾರರ ಆರ್ಥಿಕ ಸಬಲೀಕರಣವಾಗಬೇಕಾದರೆ ನೀರಾ ಇಳಿಸುವುದೊಂದೆ ಸೂಕ್ತ ಎನ್ನುವ ನಿರ್ಧಾರಕ್ಕೆ ಬಂದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೀರಾ ಚಳವಳಿಗೆ ಕರೆ ಕೊಟ್ಟಿತ್ತು.

ಅದರಂತೆ ತೆಂಗು ಬೆಳೆಯುವ ಜಿಲ್ಲೆಗಳಲ್ಲಿ ನೀರಾ ಇಳಿಸುವ ಪ್ರಕ್ರಿಯೆಗೆ ರೈತರು ಚಾಲನೆ ನೀಡಿದ್ದರು. ಆದರೆ ನೀರಾ ಇಳಿಸುವವರನ್ನು ಮತ್ತು ಚಳವಳಿಯನ್ನು ವಿವಿಧ ರೀತಿಯಲ್ಲಿ ಹತ್ತಿಕ್ಕುವ ಕೆಲಸವನ್ನು ಆಗಿನ ರಾಜ್ಯ ಸರ್ಕಾರ ಮತ್ತು ಮದ್ಯದ ಲಾಬಿ ಮಾಡಿತ್ತು.

‘ಇದಕ್ಕೆ ಉತ್ತಮ ನಿದರ್ಶನವೇ ವಿಠಲೇನಹಳ್ಳಿಯಲ್ಲಿ ನಡೆದ ಗೋಲಿಬಾರ್‌. ಈ ದುರ್ಘಟನೆಯಲ್ಲಿ ರೈತರಾದ ಪುಟ್ಟನಂಜಯ್ಯ ಮತ್ತು ತಮ್ಮಯ್ಯ ಪೊಲೀಸರ ಗುಂಡುಗಳಿಗೆ ಬಲಿಯಾದರು. ನಂತರ ನೀರಾ ಚಳವಳಿಯನ್ನು ಬಳಸುಕೊಂಡ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮತ್ತು ಅಂದು ಜೆಡಿಎಸ್ ನ ರಾಜ್ಯಾಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಪಂಚೆ ಎತ್ತಿಕಟ್ಟಿ ವಿಠಲೇನಹಳ್ಳಿಯಿಂದ ಬೆಂಗಳೂರಿನ ವರಗೆ ಪಾದಯಾತ್ರೆ ನಡೆಸಿದರು. ಸೋಲುಂಡು ರಾಜಕೀಯ ಮರು ಹುಟ್ಟಿಗೆ ತವಕಿಸುತ್ತಿದ್ದ ದೇವೇಗೌಡರು ಕೇಂದ್ರದ ಮಾಜಿ ಸಚಿವ ಎಂ.ವಿ. ಚಂದ್ರಶೇಖರಮೂರ್ತಿ ನಿಧನರಾದ ಕನಕಪುರ ಲೋಕಸಭಾ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ ದೇವೇಗೌಡರು ಲೋಕಸಭೆ ಪ್ರವೇಶಿಸಿ ರಾಜಕೀಯ ಮರುಹುಟ್ಟು ಪಡೆದರು.

ಎಚ್.ಡಿ. ಕುಮಾರಸ್ವಾಮಿ, ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ಸೇರಿದಂತೆ ಕೆಲ ರಾಜಕಾರಣಿಗಳು ಆಳುವ ಸರ್ಕಾರದ ವಿರುದ್ಧ ನೀರಾ ಚಳುವಳಿಯನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡು, ತಾವು ಬೆಳೆದರು. ಆದರೆ ಈ ಚಳವಳಿಗೆ ತಾರ್ಕಿಕ ಅಂತ್ಯ ಕಾಣಿಸುವಲ್ಲಿ ಮಾತ್ರ ಅವರೆಲ್ಲ ವಿಫಲರಾಗಿದ್ದಾರು ಎನ್ನುತ್ತಾರೆ ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ಕೆ. ಮಲ್ಲಯ್ಯ.

16 ಜಿಲ್ಲೆಗಳಲ್ಲಿ ನುಸಿ ಪೀಡೆ:

‘ಕರ್ನಾಟಕ ದೇಶದಲ್ಲಿಯೇ ಎರಡನೇ ಅತಿ ಹೆಚ್ಚು ತೆಂಗು ಬೆಳೆಯುವ ರಾಜ್ಯ ಎಂಬ ಹೆಗ್ಗಳಿಕೆ ಹೊಂದಿದೆ. ಇಲ್ಲಿ 1999–2000ದಲ್ಲಿ ತೆಂಗಿನ ಮರಗಳಲ್ಲಿ ನುಸಿಪೀಡೆ ಕಾಣಿಸಿಕೊಂಡಿತು. 2001ರ ವೇಳೆಗೆ ಅದು ರಾಜ್ಯದ 16 ಜಿಲ್ಲೆಗಳ ತೆಂಗಿನ ಮರಗಳಿಗೆ ವ್ಯಾಪಿಸಿತ್ತು. ಇದು ತೆಂಗಿನ ಬೆಳೆಗಾರರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿತ್ತು. ಇದರ ಜತೆಗೆ ಕಪ್ಪುತಲೆ ಹುಳುಗಳು ಮರದ ಗರಿಗಳ ರಸ ಹೀರಿ ಮರವನ್ನು ನಾಶ ಮಾಡಲಾರಂಭಿಸಿದವು’ ಎಂದು ನೆನಪು ಮಾಡಿಕೊಂಡರು.

ನುಸಿ ರೋಗ ಮತ್ತು ಕಪ್ಪುತಲೆ ಹುಳುಗಳ ಕಾಟ ನಿಯಂತ್ರಿಸುವಲ್ಲಿ ತೋಟಗಾರಿಕಾ ಇಲಾಖೆ, ಸಂಶೋಧನಾ ಸಂಸ್ಥೆಗಳು ಮತ್ತು ಸರ್ಕಾರ ವಿಫಲವಾದವು. ಇದರಿಂದ ರೈತರಿಗೆ ಶೇ 65ಕ್ಕೂ ಹೆಚ್ಚು ನಷ್ಟ ಎದುರಾಗಿತ್ತು. ಆಗ ರೈತ ಸಂಘದ ನಾಯಕ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರ ಮಾರ್ಗದರ್ಶನದಲ್ಲಿ ರಾಜ್ಯ ರೈತ ಸಂಘ ನೀರಾ ಇಳಿಸುವ ಕಾರ್ಯಕ್ಕೆ ಚಾಲನೆ ನೀಡಿತ್ತು ಎನ್ನುತ್ತಾರೆ ಚಳುವಳಿಯ ಮುಂಚೂಣಿಯಲ್ಲಿದ್ದ ರೈತ ಮುಖಂಡ, ವಿಚಾರವಾದಿ ಸಿ. ಪುಟ್ಟಸ್ವಾಮಿ.

ದಿನ ಕಳೆದಂತೆ ನೀರಾ ಕುಡಿಯುವವರ ಸಂಖ್ಯೆ ಹೆಚ್ಚಾಗತೊಡಗಿತು. ಮದ್ಯ ಪ್ರಿಯರು ಸಹ ನೀರಾ ಕುಡಿಯುವತ್ತಾ ದಾಪುಗಾಲು ಹಾಕಿದರು. ನಗರ- ಪಟ್ಟಣಗಳತ್ತ ಸಹ ನೀರಾ ಹರಿಯಿತು. ಆದರೂ ಶೇ 3ರಿಂದ 4ರಷ್ಟು ರೈತರು ಮಾತ್ರ ನೀರಾ ಇಳಿಸುತ್ತಿದ್ದರು. ಸೂರ್ಯ ಕಿರಣಗಳ ಸಂಪರ್ಕದಿಂದ ನೀರಾ ಮಜ್ಜಿಗೆ ರೂಪತಾಳಿತು. ಅದು ತಂತಾನೆ ಹುಳಿಯಾಯಿತು. ಹುಳಿ ನೀರಾ ಕೂಡ ಹೆಚ್ಚೆಚ್ಚು ಬಳಕೆಗೆ ಬಂದಿತು ಎಂದು ಪುಟ್ಟಸ್ವಾಮಿ ಅವರು ಹಿಂದಿನ ದಿನಗಳನ್ನು ಸ್ಮರಿಸುತ್ತಾರೆ

ದಿನೇ ದಿನೇ ಸಾರಾಯಿ, ಮದ್ಯ ಮಾರಾಟ- ವಹಿವಾಟು ಕಡಿಮೆಯಾಯ್ತು. ಇದರಿಂದ ಮದ್ಯದ ಲಾಬಿ ಕೂಡ ಆರಂಭವಾಯಿತು. ಈ ನಡುವೆ ಅಬಕಾರಿ ಇಲಾಖೆ ರೈತರ ಮೇಲೆ ಕೆಂಗಣ್ಣು ಬಿಟ್ಟಿತು. ಪೊಲೀಸರು ವಿವಿಧ ರೀತಿಯಲ್ಲಿ ಕಿರುಕುಳ ನೀಡಿ ನೂರಾರು ಮೊಕದ್ದಮೆಗಳನ್ನು ರೈತರ ಹೂಡಿದರು ಎಂದು ಬೇಸರದಿಂದ ಹೇಳಿದರು.

ನೀರಾ ನಮ್ಮ ಹಕ್ಕು:

‘ನೀರಾ ಇಳಿಸಿ ಮಾರಾಟ ಮಾಡುವುದು ನಮ್ಮ ಹಕ್ಕು’ ಎಂದು ರೈತ ಸಂಘ ಕರೆ ನೀಡಿತು. ಪ್ರತಿಭಟನೆ ಜೋರಾಯಿತು. ರೈತರು ಸ್ವ ಪ್ರೇರಣೆಯಿಂದ ದಸ್ತಗೀರಾಗಲು ಮುಂದೆ ಬಂದರು. ಆದರೂ ಸಹ ಆಗಿನ ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ನೀರಾ ಉತ್ಪಾದನೆಗೆ ದೈರ್ಯ ಮಾಡಲಿಲ್ಲ. ಬದಲಿಗೆ ಅಕ್ಟೋಬರ್ 8, 2001ರಂದು ಲಾಠಿ ಚಾರ್ಜ್, ಅಶ್ರುವಾಯು, ಗಾಳಿಯಲ್ಲಿ ಗುಂಡು ಹಾರಿಸಲಾಯಿತು. ನಂತರ ಅಕ್ಟೋಬರ್ 9, 2001ರಂದು ಮುಂಜಾನೆ ವಿಠಲೇನಹಳ್ಳಿಯಲ್ಲಿ ಗೋಲಿಬಾರ್ ನಡೆಯಿತು. ಅದಕ್ಕೆ ಇಬ್ಬರು ರೈತರು ಬಲಿಯಾದರು’.

‘ವಿಠಲೇನಹಳ್ಳಿ ಗೋಲಿಬಾರ್ ಘಟನೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಕೆರಳಿಸಿತು. ವಿಠಲೇನಹಳ್ಳಿಗೆ ಭೇಟಿ ನೀಡಿದ್ದ ದೇವೇಗೌಡರು ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಸುಮಾರು 108 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡರೂ ಮುಖ್ಯಮಂತ್ರಿ ಕೃಷ್ಣ ಅವರು ಸುಮ್ಮನಿದ್ದಾರೆ, ನರಗುಂದ ಹಾಗೂ ನವಲಗುಂದದಲ್ಲಿ ನಡೆದ ರೈತರ ಗೋಲಿಬಾರ್‌ ಪ್ರಕರಣ ಅಂದಿನ ಕಾಂಗ್ರೆಸ್‌ ಸರ್ಕಾರದ ಪತನಕ್ಕೆ ಕಾರಣವಾದಂತೆ, ವಿಠಲೇನಹಳ್ಳಿ ಪ್ರಕರಣದಿಂದ ಕೃಷ್ಣ ಸರ್ಕಾರ ಪತನವಾಗಲಿದೆ ಎಂದು ಗೌಡರು ಗುಡುಗಿದ್ದರು.

ನಂತರ ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ರಾಜ್ಯದಲ್ಲಿ ನೀರಾ ಇಳಿಸಲು ಮತ್ತು ಮಾರಲು ರೈತರಿಗೆ ಅನುಮತಿ ನೀಡುವುದಾಗಿ ಘೋಷಿಸಿದರು’

20 ವರ್ಷವಾದರೂ ಆಗದ ನೀತಿ:

ಆದರೆ 20 ವರ್ಷವಾದರೂ ಈ ಸಂಬಂಧ ಸೂಕ್ತವಾದ ನೀರಾ ನೀತಿ ಜಾರಿಗೆ ಬರಲಿಲ್ಲ. ರೈತರ ಹೋರಾಟಕ್ಕೆ, ಹುತಾತ್ಮರಾದ ರೈತರಿಗೆ ನ್ಯಾಯವೂ ಸಿಕ್ಕಿಲ್ಲ. ಕೇರಳ, ತಮಿಳುನಾಡು, ಪಾಂಡಿಚೆರಿ, ಲಕ್ಷದ್ವೀಪದಲ್ಲಿ ನೀರಾ ಇಳಿಸಲು ಅನುಮತಿ ಇದೆ. ಕೇರಳದಲ್ಲಿ ಅಬಕಾರಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಅಲ್ಲಿ ಆದದ್ದು ಕರ್ನಾಟಕದಲ್ಲಿ ಏಕೆ ಸಾಧ್ಯವಾಗುತ್ತಿಲ್ಲ ಎಂಬುದು ತೆಂಗು ಬೆಳೆಗಾರರ ಪ್ರಶ್ನೆ.

1995ರಲ್ಲಿಯೇ ಫಿಲಿಪೈನ್ಸ್‌ ದೇಶ ನೀರಾ ಇಳಿಸಿ, ಜಗತ್ತಿಗೆ ಅದನ್ನು ಪರಿಚಯಿಸಿತು. ಅದರಿಂದಲೇ ಆದಾಯಗಳಿಸುತ್ತಿದೆ. ಶ್ರೀಲಂಕಾ ದೇಶದ ನೀರಾ ಫ್ರಾನ್ಸ್‌, ಇಂಗ್ಲೆಂಡ್‌ ಸೇರಿದಂತೆ ಯುರೋಪಿನ ದೇಶಗಳಲ್ಲಿ ಲಭ್ಯವಿದೆ. ಆದರೆ ಕರ್ನಾಟಕ ಸರ್ಕಾರ ನೀರಾ ವಿಷಯದಲ್ಲಿ ಏಕೆ ಇಂತಹ ಕಠಿಣ ಧೋರಣೆ ತಾಳುತ್ತಿದೆ ಎಂದು ಅವರು ಕಿಡಿಕಾರುತ್ತಾರೆ. ವೈನ್‌ ನೀತಿ ಮಾದರಿಯಲ್ಲಿ ನೀರಾ ನೀತಿ ರೂಪಿಸಿದ್ದರೆ ತೆಂಗು ಬೆಳೆಗಾರರ ಹಿತ ರಕ್ಷಿಸಲು ಸಾಧ್ಯವಾಗುತ್ತಿತ್ತು. ಆದರೆ ಈ ನಿಟ್ಟಿನಲ್ಲಿ ಸರ್ಕಾರ ಮುಂದಾಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಇನ್ನು ‘ಅಬಕಾರಿ ಕಾಯ್ದೆಗೆ ತಿದ್ದುಪಡಿ ತಂದು ನೀರಾ ಇಳಿಸಲು ಅವಕಾಶ ಕಲ್ಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಆದರೆ ಅವರ ಸರ್ಕಾರದಲ್ಲೂ ಈ ಬಗ್ಗೆ ಪ್ರಸ್ತಾಪವಾಗಲಿಲ್ಲ. ಇನ್ನು ನೀರಾ ಚಳುವಳಿಯಲ್ಲಿ ಭಾವಿ ಮುಖ್ಯಮಂತ್ರಿ ಎಂದು ಬಿಂಬಿತಗೊಂಡ ಎಚ್ಡಿ ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾದರು ಅವರು ಕೂಡ ನೀರಾ ನೀತಿ ಜಾರಿಗೆ ತರುವ ಬಗ್ಗೆ ಚಿಂತನೆ ಮಾಡದಿರುವುದು ನೀರಾ ಹೋರಾಟಗಾರರ ಸಿಟ್ಟಿಗೂ ಕಾರಣವಾಗಿದೆ. ವಿಪರ್ಯಾಸವೆಂದರೆ ನೀರಾ ಗೋಲಿಬಾರ್ ನಡೆದ ವಿಠಲೇನಹಳ್ಳಿಯನ್ನು ಹೆಚ್ಡಿಕೆ ಪ್ರತಿನಿಧಿಸುತ್ತಿದ್ದಾರೆ.

Related Articles

Leave a Reply

Your email address will not be published.

Back to top button