Latest

ಉಪಕದನದಲ್ಲಿ ಅಬ್ಬರದ ಪ್ರಚಾರಕ್ಕೆ ಮೂರು ಪಕ್ಷಗಳ ಅಣಿ

ಬೆಂಗಳೂರು: ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಾದ ಸಿಂದಗಿ, ಹಾನಗಲ್ ಉಪಚುನಾವಣೆ ನಡೆಯಲು ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಕದನ ಕಣಗಳು ಕಾವೇರತೊಡಗಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ತೆರೆಮರೆಯ ಕಸರತ್ತುಗಳು ಬಿರುಸಿನಿಂದ ಕೂಡಿದ್ದು, ಇನ್ನು ಅಬ್ಬರದ ಪ್ರಚಾರ ಜೋರಾಗಲಿದೆ. ಕೈ, ತೆನೆ, ಕಮಲ ಪಾಳೆಯಗಳ ನಾಯಕರ ವಾಗ್ಯುದ್ಧಗಳು ಇನ್ನು ತಾರಕಕ್ಕೇರಲಿವೆ. ಭರ್ಜರಿ ಪ್ರಚಾರಕ್ಕೆ ಅಖಾಡ ಸಿದ್ಧವಾಗಿದೆ. 28ರವರೆಗೂ ಸತತ ಪ್ರಚಾರ ನಡೆಯಲಿದೆ.

ಬಹಿರಂಗ ಪ್ರಚಾರ ಆರಂಭಕ್ಕೆ ಮೊದಲೇ ನಾಯಕರು ಪರಸ್ಪರ ಕೆಸರೆರಚಾಟ ಆರಂಭಿಸಿದ್ದರು, ಸಿಂದಗಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್‌ ಮನಗೂಳಿ ಸದ್ದು ಮಾಡಿದ್ದಾರೆ. ಮನಗೂಳಿ ವಿಚಾರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ಮಧ್ಯೆ ವಾಕ್ಸಮರ ಜೋರಾಗಿದೆ.

ಮಾಜಿ ಪ್ರಧಾನಿ ದೇವೇಗೌಡರ ಆಪ್ತರಾಗಿದ್ದ ಜೆಡಿಎಸ್‌ ಪಕ್ಷದ ಎಂ ಸಿ ಮನಗೂಳಿ ನಿಧನ ಹೊಂದುವ ಮುನ್ನ ಕಾಂಗ್ರೆಸ್ ನಾಯಕರನ್ನ ಭೇಟಿಯಾಗಿದ್ದರು ಎಂಬುದಾಗಿ ಡಿಕೆಶಿ ನೀಡಿರುವ ಹೇಳಿಕೆಗೆ ದಳಪತಿಗಳು ಕೆಂಡಾಮಂಡಲರಾಗಿದ್ದಾರೆ. ಕಾಂಗ್ರೆಸ್‌ ನಾಯಕರು ಸುಳ್ಳು ಹೇಳಿ ರಾಜಕೀಯ ಲಾಭ ಪಡೆಯಲು ಮುಂದಾಗಿರುವುದಾಗಿ ಎಚ್‌ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಇದು ಪರಸ್ಪರ ವಾಗ್ಯುದ್ಧ ಮುಂದುವರಿಯಲು ಕಾರಣವಾದರೆ, ಜೆಡಿಎಸ್‌ ಎರಡೂ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಮತವಿಭಜನೆ ಮಾಡುತ್ತಿದೆ, ಬಿಜೆಪಿಗೆ ಲಾಭ ಮಾಡಿಕೊಡುತ್ತಿದೆ ಎನ್ನುವ ಕಾಂಗ್ರೆಸ್‌ ಆರೋಪ ಕೂಡ ಎರಡೂ ಪಕ್ಷದ ನಾಯಕರ ಕಿತ್ತಾಟಕ್ಕೆ ಕಾರಣವಾಗಿದೆ.

ಕೈ ಮತ್ತು ದಳಪತಿಗಳು ಹೀಗೆ ಕಿತ್ತಾಟದಲ್ಲಿ ತೊಡಗಿದ್ದರೆ, ಎರಡೂ ಕ್ಷೇತ್ರಗಳಲ್ಲಿ ತಾನು ಗೆಲ್ಲಲು ರಣತಂತ್ರ ಹೆಣೆಯುವಲ್ಲಿ ಬಿಜೆಪಿ ನಿರತವಾಗಿವೆ. ಕದನ ಕಣಕ್ಕೆ ಮೂರು ತಂಡಗಳನ್ನು ಅಣಿಗೊಳಿಸಿದೆ. ಕಟೀಲ್‌, ಬೊಮ್ಮಾಯಿ ಹಾಗೂ ಯಡಿಯೂರಪ್ಪ ನೇತೃತ್ವದಲ್ಲಿ ತಂಡೋಪತಂಡವಾಗಿ ಅಬ್ಬರದ ಪ್ರಚಾರಕ್ಕೆ ಸಿದ್ಧತೆ ನಡೆದಿದೆ.

ಸಿಂದಗಿ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇರುವುದು ಗೋಚರವಾಗಿದೆ. ಈ ಹಿಂದೆ ಕುರುಬ ಅಥವಾ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿದ್ದ ಕಾಂಗ್ರೆಸ್ ಈ ಬಾರಿ ಗೆಲುವಿನ ಲೆಕ್ಕಾಚಾರ ಹಾಕಿ ಲಿಂಗಾಯತ ಅಭ್ಯರ್ಥಿ ಅಶೋಕ್ ಮನಗೂಳಿ ಅವರನ್ನು ಕಣಕ್ಕಿಳಿಸಿದೆ.

ಈಗಾಗಲೇ ಕಮಲ ಪಾಳಯದಲ್ಲಿ ಅಸಮಾಧಾನ ಹೊಂದಿರುವ ಲಿಂಗಾಯತ ಮತಗಳನ್ನು ತನ್ನತ್ತ ಸೆಳೆದರೆ ಸುಲಭವಾಗಿ ಗೆಲ್ಲಬಹುದೆಂಬ ಲೆಕ್ಕಾಚಾರವನ್ನು ಕಾಂಗ್ರೆಸ್ ಹೊಂದಿದೆ. ಹಾಗೆಯೇ ಅಲ್ಪಸಂಖ್ಯಾತ ಮತಗಳು ವಿಭಜನೆಗೊಂಡಾಗ ತನ್ನ ಗೆಲುವು ಶತಸಿದ್ಧ ಎಂದು ಬಿಜೆಪಿ ಎಣಿಸಿದೆ. ಇನ್ನು ಬಿಜೆಪಿಯೊಳಗಿನ ಭಿನ್ನಮತೀಯರು ಹಾಗೂ ಕಾಂಗ್ರೆಸ್ ಪಕ್ಷದ ಮೇಲೆ ಅಸಮಾಧಾನವುಳ್ಳ ಮತಗಳನ್ನು ಕ್ರೂಢೀಕರಿಸಿ ಬಹುಮತ ಗಳಿಸಿ ತಾನು ಗೆದ್ದು ಬೀಗಬಹುದೆಂಬ ಲೆಕ್ಕಾಚಾರವನ್ನು ಜೆಡಿಎಸ್ ಹೊಂದಿದೆ.

ಒಟ್ಟಿನಲ್ಲಿ ಕದನ ಕಣಗಳು ಕುತೂಹಲ ಸೃಷ್ಟಿಸಿದ್ದು, ಅ.30ಕ್ಕೆ ಮತದಾನ ಪ್ರಕ್ರಿಯೆ ನಡೆಯಲಿದೆ, ನ.2ರಂದು ಮತಗಳ ಎಣಿಕೆ ವೇಳೆ ಮೂರೂ ಪಕ್ಷಗಳ ಹಣೆಬರಹ ಬಯಲಿಗೆ ಬೀಳಲಿದೆ.

Related Articles

Leave a Reply

Your email address will not be published.

Back to top button