Latest

Toyota Kirloska: ಸೇವೆಯಿಂದ 45 ನೌಕರರನ್ನು ವಜಾ ಮಾಡಿದ ಟೊಯೊಟ ಕಿರ್ಲೋಸ್ಕರ್

ರಾಮನಗರ: ರಾಮನಗರ ಜಿಲ್ಲೆ ಬಿಡದಿ ಕೈಗಾರಿಕಾ ವಲಯದಲ್ಲಿರುವ ಏಷ್ಯಾದ ಅತಿ ದೊಡ್ಡ ಕಾರು ತಯಾರಿಕಾ ಕಾರ್ಖಾನೆ ಟೊಯೊಟ ಕಿರ್ಲೋಸ್ಕರ್ ಕಂಪನಿ ಕಾರ್ಮಿಕ ವಿರೋಧ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಸುಮಾರು ನಾಲ್ಕು ತಿಂಗಳುಗಳ ಕಾಲ ಪ್ರತಿಭಟನೆ ನಡೆಸಿದ್ದ 66 ಕಾರ್ಮಿಕರ ಪೈಕಿ ಸುಮಾರು 45 ಕಾರ್ಮಿರನ್ನು ಟೊಯೊಟಾ ಆಡಳಿತ ಮಂಡಳಿ ಕೆಲಸದಿಂದ ವಜಾ ಮಾಡಿದೆ.

45 ಕಾರ್ಮಿಕರ ವಜಾ ಮಾಡಿರುವ ಹಿನ್ನಲೆಯಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಟೊಯೊಟ ಆಡಳಿತ ಮಂಡಳಿ, ತಾನು ತೆಗೆದುಕೊಂಡಿರುವ ಶಿಸ್ತು ಕ್ರಮವನ್ನು ಸಮರ್ಥಿಸಿಕೊಂಡಿದೆ. ಇನ್ನುಳಿದ 21 ನೌಕರರ ವಿರುದ್ಧ ಸಣ್ಣ ಶಿಸ್ತಿನ ಕ್ರಮಗಳೊಂದಿಗೆ ಕೆಲಸಕ್ಕೆ ತೆಗೆದುಕೊಂಡಿದೆ.

ಕಾರ್ಖಾನೆ ವ್ಯವಸ್ಥಾಪಕರಿಗೆ ಬೆದರಿಕೆ ಹಾಕಿ, ನಿಂದನೆ ಮಾಡಿದ್ದ ಟೊಯೊಟಾ ಕಾರ್ಮಿಕ ಯೂನಿಯನ್ ಪದಾಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸುವ ಕಂಪನಿ ನಿರ್ಧಾರದ ವಿರುದ್ಧ ಯೂನಿಯನ್ ಕಾನೂನುಬಾಹಿರ ಮುಷ್ಕರ ನಡೆಸಿದ್ದು ದುರಾದೃಷ್ಟಕರ. ಮುಷ್ಕರವನ್ನು ಸರ್ಕಾರ ನಿಷೇಧಿಸಿದ ಹೊರತಾಗಿಯೂ ಸಂಘವು ನಾಲ್ಕು ತಿಂಗಳುಗಳವರೆಗೆ ಮುಷ್ಕರವನ್ನು ವಿಸ್ತರಿಸಿತ್ತು. ಕಾನೂನು ಬಾಹಿರ ಮುಷ್ಕರದ ಅವಧಿಯಲ್ಲಿ 66 ನೌಕರರು ಬೆದರಿಕೆ, ಕಂಪನಿಯ ಆಸ್ತಿಗೆ ಹಾನಿಗೆ ಯತ್ನ, ಮಾನನಷ್ಟ, ಹಲ್ಲೆ ಮುಂತಾದ ಗಂಭೀರ ದುಷ್ಕೃತ್ಯಗಳಲ್ಲಿ ಭಾಗಿಯಾಗಿದ ಪರಿಣಾಮ, ಅವರನ್ನು ಅಮಾನತುಗೊಳಿಸುವ ವಿಚಾರಣೆಗೆ ಒಳಪಡಿಸಲಾಯಿತು.

ಟೊಯೊಟ ಕಂಪನಿಯು ಶಿಸ್ತಿನ ವಿಚಾರಣೆಯನ್ನು ಮೂರನೇ ವ್ಯಕ್ತಿಯಿಂದ, ನ್ಯಾಯಯುತ ಮತ್ತು ಪಾರದರ್ಶಕ ರೀತಿಯಲ್ಲಿ ನಡೆಸಲಾಯಿತು. ವಿಚಾರಣೆಯ ಪ್ರಕ್ರಿಯೆಯಲ್ಲಿ ಅಮಾನತುಗೊಂಡ ಸದಸ್ಯರಿಗೆ ತಮ್ಮ ಪ್ರಕರಣವನ್ನು ಸಮರ್ಥಿಸಿಕೊಳ್ಳಲು ಅಗತ್ಯವಾದ ಅವಕಾಶಗಳನ್ನು ಒದಗಿಸಲಾಯಿತು. ಈಗ ವಿಚಾರಣೆಗಳು ಪೂರ್ಣಗೊಂಡ ನಂತರ, ಆಡಳಿತ ಮಂಡಳಿ ಗಂಭೀರ ದುಷ್ಕೃತ್ಯದಲ್ಲಿ ತೊಡಗಿದ್ದ 45 ಕಾರ್ಮಿಕರನ್ನು ಕೆಲಸದಿಂದ ತೆಗೆಯಲು ನಿರ್ಧರಿಸಿದೆ. ಇನ್ನುಳಿದ ಸದಸ್ಯರನ್ನು ಸಣ್ಣ ಶಿಸ್ತಿನ ಕ್ರಮಗಳೊಂದಿಗೆ ಹಿಂತೆಗೆದುಕೊಳ್ಳಲಾಗಿದೆ. ಕಂಪನಿಯು ತನ್ನ ಉದ್ಯೋಗಿಗಳೊಂದಿಗೆ ಪರಸ್ಪರ ವಿಶ್ವಾಸ ಮತ್ತು ಗೌರವವನ್ನು ಬೆಳೆಸಲು ಮತ್ತು ಅವರ ಕುಟುಂಬಗಳು ಮತ್ತು ಸಮಾಜಕ್ಕೆ ಸಂತೋಷವನ್ನು ಹರಡುವ ಪ್ರಯತ್ನಗಳನ್ನು ಬಲಪಡಿಸುವುದನ್ನು ಮುಂದುವರಿಸುತ್ತದೆ ಎಂದು ಟೊಯೊಟ ಕಾರ್ಖಾನೆಯ ಆಡಳಿತ ಮಂಡಳಿ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

Related Articles

Leave a Reply

Your email address will not be published.

Back to top button