Latest

ಎಲ್ಲೆಡೆ ದೀಪಾವಳಿ ಸಂಭ್ರಮ.. ಈ ಗ್ರಾಮದಲ್ಲಿ ಹಬ್ಬ ಆಚರಿಸಲ್ಲ ಯಾಕೆ..?

ದಾವಣಗೆರೆ: ಮನೆ ಹಾಗೂ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬವೇ ದೀಪಾವಳಿ. ಮುಂಗಾರು ಬೆಳೆ ಕೊಯ್ಲಿಗೆ ಬರುವ ಸಮಯದಲ್ಲಿ ಈ ಹಬ್ಬ ಬರುವುದು ವಿಶೇಷ. ಹಬ್ಬದ ದಿನ ದೀಪ ಹಚ್ಚಿ ಪಟಾಕಿ ಸಿಡಿಸಿ ಎಲ್ಲರೂ ಖುಷಿಪಡುತ್ತಾರೆ. ಆದರೆ ಇಲ್ಲೊಂದು ಊರಲ್ಲಿ‌ ಈ ಹಬ್ಬ ಬಂತೆಂದರೆ ಕರಾಳ ದಿನ ಬಂದಂತೆ. ಎಲ್ಲರ ಮನೆಯಲ್ಲಿ ಬೆಳಕು ಮೂಡಿದರೆ ಇಲ್ಲಿ ಕತ್ತಲು ಆವರಿಸುತ್ತೆ, ಹಬ್ಬದ ಸಡಗರವೇ ಕಾಣೋದಿಲ್ಲ.

ಒಂದೆಡೆ ದೇಶಾದ್ಯಂತ ಪಟಾಕಿ ಸಿಡಿಸಿ ಹಬ್ಬ ಆಚರಣೆಗೆ ಜನ ಮುಂದಾಗಿದ್ರೆ. ಇಲ್ಲಿ ಈ ಹಬ್ಬ ಆಚರಣೆಗೆ ವಿರೋಧ. ಹಬ್ಬ ಆಚರಿಸದೇ ಮೂಢನಂಬಿಕೆಗೆ ಮೊರೆ ಹೋಗಿರುವ ಊರು.. ಈ ಎಲ್ಲಾ ಚಿತ್ರಣಗಳು ಕಂಡು ಬಂದಿದ್ದು ದಾವಣಗೆರೆ ತಾಲೂಕಿನ ಲೋಕಿಕೆರೆ ಗ್ರಾಮದಲ್ಲಿ.

ಹೌದು.. ಕಳೆದ ಆರೇಳು ತಲೆಮಾರುಗಳಿಂದ ಈ ಜನರಿಗೆ ದೀಪಾವಳಿ ಹಬ್ಬ ಕರಾಳ ದಿನ. ಈ ದಿನದಲ್ಲಿ ಎಲ್ಲ ಪೈರುಗಳು ಫಸಲಿಗೆ ಬಂದಿರುತ್ತವೆ. ಫಸಲಿನಿಂದ ಹಳೆ ಬಾಕಿ ತೀರಿಸಿ, ಹೊಸ ವಸ್ತು ಖರೀದಿಸಿ ಹೊಸ ಲೆಕ್ಕ ಶುರು ಮಾಡುವುದು ದೀಪಾವಳಿಯ ಹಳೆ ಶಿಷ್ಟಾಚಾರ. ಧನಲಕ್ಷ್ಮಿ ಪೂಜೆಯೇ ಈ ಸಡಗರ. ದೀಪಾವಳಿಯ ಈ ಖರೀದಿ ಸಂಭ್ರಮ ಈಗಂತೂ ಹೊಸ ಎತ್ತರಕ್ಕೇರಿದೆ. ಮನೆ, ಮನೆಗಳ ಸಂಭ್ರಮ ಹೆಚ್ಚಿಸುವ ಸಲಕರಣೆಗಳ ಖರೀದಿಗೆ ಸಾವಿರ ವೈವಿಧ್ಯಗಳು ಹಿತವಾಗಿ ತೆರೆದುಕೊಳ್ಳುವುದರಿಂದ ದೀಪಾವಳಿ ಕಾತರವನ್ನು ಉಂಟು ಮಾಡುತ್ತದೆ.

ಬಡವರಿಂದ ಹಿಡಿದು ಶ್ರೀಮಂತರವರೆಗಿನ ಸರ್ವರಿಗೂ ಹಿತಕರವಾಗಿರುವ ಬೆಲೆ ಮತ್ತು ಗುಣಮಟ್ಟದ ವಿಸ್ತಾರ ಲೋಕ ಈಗಿನ ದೀಪಾವಳಿಯ ವಿಶೇಷ. ಆದರೆ ಈ ಲೋಕಿಕೆರೆ ಗ್ರಾಮದಲ್ಲಿ ಮಾತ್ರ ಈ ಎಲ್ಲಾ ಆಚರಣೆ ಮತ್ತು ಹೊಸ ವಸ್ತುಗಳ ಖರೀದಿಗೆ ಆರೇಳು ತಲೆಮಾರುಗಳಿಂದ ಬ್ರೇಕ್ ಬಿದ್ದಿದೆ. ಸಣ್ಣ ಒಂದು ಮಢಡನಂಬಿಕೆಗೆ ಮೊರೆ ಹೋಗಿರುವ ಈ ಊರಿನಲ್ಲಿ ಮುಕ್ಕಾಲು ಮಂದಿ ಇರುವ ಕುರುಬ ಜನಾಂಗದ ಮಂದಿ ಈ ಹಬ್ಬವನ್ನು ಮರೆತೇ ಹೋಗಿದ್ದಾರೆ.

ಈ ಗ್ರಾಮದವರು ಹಬ್ಬ ಮಾಡದಿರಲು ಎರಡು ಕಾರಣ ಹೇಳುತ್ತಾರೆ. ಒಂದು ಈ ಗ್ರಾಮದ ಯುವಕನೊಬ್ಬ ಚಿತ್ರದುರ್ಗದಲ್ಲಿ ಮದುವೆ ಆಗಿರುತ್ತಾನೆ. ಈ ವೇಳೆ ಆ ನವ ವರ ಹಾವು ಕಚ್ಚಿ ಸಾವನ್ನಪ್ಪಿರುತ್ತಾನೆ. ನಂತರ ಈತನ ಪತ್ನಿಗೆ ಮತ್ತೊಂದು ಮದುವೆ ಮಾಡಲು ಮುಂದಾದಾಗ ಈ ಮಹಿಳೆ ನನಗೆ ಈಗಾಗಲೇ ಮದುವೆ ಆಗಿದೆ. ಅವನು ಸತ್ತರುಲೂ ಅವನೇ ನನ್ನ ಗಂಡ. ನಾನು ಮತ್ತೊಂದು ಮದುವೆ ಆಗಲಾರೆ ಎಂದು ದೀಪಾವಳಿ ದಿನವೇ ಅಗ್ನಿಗೆ ಆಹುತಿಯಾಗುತ್ತಾಳೆ. ಹೀಗಾಗಿ ದೀಪಾವಳಿ ದಿನವೇ ಊರಿಗೆ ಕತ್ತಲು ಆವರಿಸಿದೆ ಎಂದು ಅಂದಿನಿಂದ ಇಂದಿನವರೆಗೆ ದೀಪಾವಳಿ ಹಬ್ಬ ಮಾಡುತ್ತಿಲ್ಲ.

ಇನ್ನೂ ಮತ್ತೊಂದು ಕಾರಣ ಈ ಗ್ರಾಮದ ನಾಲ್ಕೈದು ಮಂದಿ ಯುವಕರು ಹಬ್ಬದ ದಿನ ಪೂಜೆಯ ವಸ್ತುಗಳಾದ ಕಾಚಿ ಕಡ್ಡಿ, ಉತ್ರಾಣಿ ಕಡ್ಡಿ ತರಲು ಹೋದವರು ಇದುವರೆಗೂ ಬಂದಿಲ್ಲವಂತೆ. ಹೀಗಾಗಿ ಅವರು ಸತ್ತಿರಬಹುದು. ಹೀಗಾಗಿ ಈ ದೀಪಾವಳಿ ಊರಿಗೆ ಅಪಶಕುನ ಎಂದು ತಿಳಿದು ಹಬ್ಬ ನಿಷೇಧಕ್ಕೆ ಅಂದಿನ ಮುಖಂಡರು, ಗ್ರಾಮಸ್ಥರು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಅಂದಿನಿಂದ ಇಂದಿನವರೆಗೆ ಇಲ್ಲಿ ದೀಪಾವಳಿ ಇಲ್ಲ. ಆದರೆ ಈಗಿನ ಯುವಕರು ಎಲ್ಲರು ಹಬ್ಬ ಮಾಡುವುದು ನೋಡಿ ನಾವು ಮಾಡಬೇಕು ಎಂದು ಹಲವು ಬಾರಿ ಪ್ರಯತ್ನಿಸಿದರೂ ಆಗಿಲ್ಲ.

ಒಟ್ಟಾರೆ ಮುಂದುವರೆದ ಜಾಗತೀಕರಣ, ತಂತ್ರಜ್ಞಾನ ಯುಗದಲ್ಲಿ ಈ ಗ್ರಾಮದವರು ಮೂಢನಂಬಿಕೆಗೆ ಮೊರೆ ಹೋಗಿ ಹಬ್ಬ ನಿಷೇಧ ಹೇರಿಕೊಂಡಿರುವುದು ಸೋಜಿಗದ ಸಂಗತಿ. ಇನ್ನು ಮುಂದಾದರೂ ಈ ಊರಿಗೆ ಕತ್ತಲೆ ಹೋಗಿ ಬೆಳಕು ಆವರಿಸಲಿ ಎಂಬುದು ನಮ್ಮ ಆಶಯ.

Related Articles

Leave a Reply

Your email address will not be published. Required fields are marked *

Back to top button