Bangladesh Violence: ಬಾಂಗ್ಲಾ ಹಿಂಸೆ; ಮತ್ತೊಬ್ಬ ಶಂಕಿತ ಆರೋಪಿ ಸೆರೆ
ಢಾಕಾ: ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಹತ್ಯೆ ಹಾಗೂ ದೇಗುಲಗಳ ಮೇಲೆ ದಾಳಿ ನಡೆಸಿರುವ ಪ್ರಕರಣಗಳಿಗೆ ಸಂಬಂಧಿಸಿ ಮತ್ತೊಬ್ಬ ಆರೋಪಿ ಸೆರೆಯಾಗಿದ್ದಾನೆ.
ವಾಯುವ್ಯ ರಂಗಪುರ್ ಜಿಲ್ಲೆಯ ಪೀರ್ ಗಂಜ್ ಎಂಬಲ್ಲಿ ನಡೆದಿದ್ದ ಹಿಂಸಾಚಾರದ ಮುಖ್ಯ ಆರೋಪಿ ಶೈಖತ್ ಮೊಂಡಲ್ ಹಾಗೂ ಆತನ ಸಹಚರನನ್ನು ಗಾಝಿಪುರದಲ್ಲಿ ಬಂಧಿಸಲಾಗಿದೆ. ಆರೋಪಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್ ಗಳಲ್ಲಿ ಕಿಡಿ ಹೊತ್ತಿಸಿದ್ದಾರೆ ಎಂದು ಆರ್ ಎ ಬಿ ಅಧಿಕಾರಿಗಳು ತಿಳಿಸಿದ್ದಾರೆ.
ಶೈಖತ್ ಮೊಂಡಲ್ ಫೇಸ್ಬುಕ್ ನಲ್ಲಿ ಮಾಡಿದ್ದ ಭಾಷಣದ ಪೋಸ್ಟ್ ಬಳಿಕ ಪೀರ್ ಗಂಜ್ ನಲ್ಲಿ ಹಿಂಸಾಚಾರ ಭುಗಿಲೆದ್ದು ಹಿಂದೂಗಳಿಗೆ ಸೇರಿದ 70ಕ್ಕೂ ಅಧಿಕ ಮನೆಗಳು ಹಾಗೂ ಅಂಗಡಿಗಳಿಗೆ ಗಲಭೆಕೋರರು ಬೆಂಕಿ ಹಚ್ಚಿದ್ದರು. ಓರ್ವ ಆರೋಪಿ ಇಕ್ಬಾಲ್ ಹುಸೇನ್ ಎಂಬಾತ ಶುಕ್ರವಾರ ಸೆರೆಯಾಗಿದ್ದ. ಹಲವೆಡೆ ನಡೆದಿರುವ ಹಿಂಸಾಚಾರ ಪ್ರಕರಣಗಳಿಗೆ ಸಂಬಂಧಿಸಿ ಈವರೆಗೆ 600 ಕ್ಕೂ ಅಧಿಕ ಮಂದಿಯನ್ನು ಪೊಲೀಸರು ಬಂಧಿಸಿರುವುದು ವರದಿಯಾಗಿದೆ.
ಹಿಂದೂ-ಬೌದ್ಧ-ಕ್ರೈಸ್ತ ಏಕತಾ ಮಂಡಳಿಯ ಆಶ್ರಯದಲ್ಲಿ ವಿವಿಧ ಅಲ್ಪಸಂಖ್ಯಾತ ಸಮುದಾಯಗಳಿಂದ ರಾಜಧಾನಿ ಢಾಕಾದ ಶಾಭಾಗ್ ನಗರದಲ್ಲಿ ಪ್ರತಿಭಟನೆ ನಡೆದಿದೆ.