ಪೆಗಾಸಸ್ ಬೇಹುಗಾರಿಕೆ ಪ್ರಕರಣ: ತನಿಖೆ ಕುರಿತು ನಾಳೆ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟ
ನವದೆಹಲಿ: ಪೆಗಾಸಸ್ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮೇಲ್ವಿಚಾರಣೆಯ ಸ್ವತಂತ್ರ ತನಿಖೆಯನ್ನು ಕೋರಿ ಸಲ್ಲಿಸಲಾದ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ನಾಳೆ (ಬುಧವಾರ) ತೀರ್ಪು ಪ್ರಕಟಿಸಲಿದೆ.
ಸರ್ಕಾರಿ ಏಜೆನ್ಸಿಗಳಿಂದ ಅನಧಿಕೃತವಾಗಿ ಫೋನ್ ಕದ್ದಾಲಿಕೆ ಮಾಡಲು ಪೆಗಾಸಸ್ ಬೇಹುಗಾರಿಕೆ ತಂತ್ರಜ್ಞಾನ ಬಳಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟಿನಲ್ಲಿ ಅರ್ಜಿಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ತನಿಖೆ ಮಾಡಲು ತಾಂತ್ರಿಕ ತಜ್ಞರ ಸಮಿತಿಯನ್ನು ರಚಿಸುವುದಾಗಿ ಸುಪ್ರೀಂ ಕೋರ್ಟ್ ಸೆ. 23ರಂದು ಹೇಳಿತ್ತು .ಈ ಕುರಿತು ಶೀಘ್ರದಲ್ಲೇ ಆದೇಶ ಹೊರಡಿಸುವುದಾಗಿಯೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ತಿಳಿಸಿದ್ದರು.
ಇಸ್ರೇಲಿ ಸಂಸ್ಥೆ ಎನ್ಎಸ್ಒ ಗ್ರೂಪ್ ಅಭಿವೃದ್ಧಿಪಡಿಸಿದ ಪೆಗಾಸಸ್ ಎಂಬ ಬೇಹುಗಾರಿಕೆ ತಂತ್ರಜ್ಞಾನವನ್ನು ಬಳಸಿ ಭಾರತದ ಹಲವಾರು ಪ್ರಮುಖರ ಫೋನ್ಗಳನ್ನು ಹ್ಯಾಕ್ ಮಾಡಿದ ಆರೋಪಗಳ ಕುರಿತು ತನಿಖೆ ನಡೆಸಲು ಸಮಿತಿಯನ್ನು ಸ್ಥಾಪಿಸಲು ಅನುಮತಿ ನೀಡುವಂತೆ ಕೇಂದ್ರವು ಈ ಹಿಂದೆ ನ್ಯಾಯಾಲಯವನ್ನು ಕೋರಿತ್ತು.