Latest

ಸಕ್ಕರೆ ನಿಯಂತ್ರಣ ಕಾಯ್ದೆ ತಿದ್ದುಪಡಿಗೆ ರಾಜ್ಯ ಕಬ್ಬು ಬೆಳೆಗಾರರ ಸಂಘ ವಿರೋಧ

ದಾವಣಗೆರೆ: ಕಬ್ಬು ಪೂರೈಕೆ ಮಾಡಿದ ರೈತರಿಗೆ 14ದಿನಗಳಲ್ಲಿ ಹಣ ಪಾವತಿಸಬೇಕು. ಇಲ್ಲವಾದರೆ ಶೇಕಡಾ 15ರಷ್ಟು ಬಡ್ಡಿ ಸೇರಿಸಿ ನೀಡಬೇಕೆಂಬ ನಿಯಮ ಸಕ್ಕರೆ ನಿಯಂತ್ರಣ ಕಾಯ್ದೆ 1966ಕ್ಕೆ ತಿದ್ದುಪಡಿ ಮಾಡಿ ರೈತರ ಹಣ ಪಾವತಿಗೆ ಮೂರು ಕಂತುಗಳಲ್ಲಿ 60 ದಿನಗಳ ಕಾಲಾವಕಾಶ ನೀಡುವ ತಿದ್ದುಪಡಿಗೆ ಕೇಂದ್ರ ಸರ್ಕಾರ ಮುಂದಾಗಿರುವುದಕ್ಕೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘ ವಿರೋಧ ವ್ಯಕ್ತಪಡಿಸಿದೆ. ಮಾತ್ರವಲ್ಲ, ಇದು ಕಬ್ಬು ಬೆಳೆಗಾರ ಹಾಗೂ ರೈತರ ಕತ್ತು ಕೊಯ್ಯುವ ಕಾರ್ಯ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಈ ಬಗ್ಗೆ ನೀತಿ ಆಯೋಗ ನೀಡಿರುವ ವರದಿಯನ್ನು ತಿರಸ್ಕರಿಸಬೇಕೆಂದು ಒತ್ತಾಯಿಸಿದರು.

ಕಬ್ಬು, ಭತ್ತ, ಮೆಕ್ಕೆಜೋಳ ಸೇರಿದಂತೆ ಕೃಷಿ ಉತ್ಪನ್ನಗಳ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಕೇವಲ ಅರ್ಧ ಪರ್ಸೆಂಟ್ ರಷ್ಟು ಮಾತ್ರ ಏರಿಕೆ ಮಾಡುತ್ತದೆ. ಆದರೆ ಸರ್ಕಾರಿ ನೌಕರರಿಗೆ ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆ ಅನುಸಾರ ಶೇ. 3ರಷ್ಟು ತುಟ್ಟಿಭತ್ಯೆ ಏರಿಕೆ ಮಾಡುತ್ತದೆ. ಇದು ರೈತರಿಗೆ ಮಾಡುತ್ತಿರುವ ವಂಚನೆಯಲ್ಲವೇ..? ಇಂದು ರೈತರ ಆದಾಯ ಕಡಿಮೆಯಾಗಿದೆ. ತಿಂಗಳಿಗೆ 3100 ಕೂಲಿ ಕಾರ್ಮಿಕರ ಆದಾಯ ಕೇವಲ 4100 ರೂಪಾಯಿ ಆಗಿದೆ. ಕೇಂದ್ರ ಸರ್ಕಾರದ ಅವೈಜ್ಞಾನಿಕ ನೀತಿಗಳಿಂದ ರೈತ ದುರ್ಬಲವಾಗುತ್ತಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದರು.

ಕಬ್ಬಿನಿಂದ ಎಥೆನಾಲ್ ಉತ್ಪಾದನೆಗೆ ಮತ್ತು ಅದರ ಖರೀದಿಗೆ ಕೇಂದ್ರ ಸರ್ಕಾರ ಲೀಟರ್ ಗೆ 65 ರೂ. ನಿಗದಿ ಮಾಡುತ್ತೆ. ಆದರೆ ಚೀನಾ ದೇಶದಿಂದ ಲೀಟರ್ ಗೆ 500 ರೂ. ಆಮದು ಮಾಡಿಕೊಳ್ಳುತ್ತದೆ. ಇಂತಹ ಇಬ್ಬಗೆ ನೀತಿಗಳಿಂದ ದೇಶದ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಕಬ್ಬಿನ ಎಫ್ ಆರ್ ಪಿ ದರ ಪುನರ್ ಪರಿಶೀಲಿಸುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಕಳೆದ 5 ರಂದು ನಡೆದ ಪ್ರತಿಭಟನಾ ರ್ಯಾಲಿ ವೇಳೆ ಸಿಎಂ, ಸಕ್ಕರೆ ಸಚಿವ, ಕೃಷಿ ಸಚಿವರು ಒಪ್ಪಿ ತಿಂಗಳಾಗಿದೆ. ಈ ಬಗ್ಗೆ ಯಾವುದೇ ಕ್ರಮ ಜಾರಿಯಾಗಿಲ್ಲ. ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಮತ್ತೊಮ್ಮೆ ಸದ್ಯದಲ್ಲಿಯೇ ಸಿಎಂ ಅವರನ್ನು ರಾಜ್ಯ ಪದಾಧಿಕಾರಿಗಳ ನಿಯೋಗ ಭೇಟಿ ಮಾಡಲಿದೆ‌ ಎಂದು ತಿಳಿಸಿದರು.

ಕಬ್ಬು ಬೆಳೆಗಾರರಿಗೆ ಕಳೆದ ವರ್ಷ 600 ಕೋಟಿ ರೂಪಾಯಿ ಬಾಕಿ ಬರಬೇಕಿದೆ. ಈ ವರ್ಷ ಕಬ್ಬು ಪೂರೈಕೆ ಮಾಡಲಾಗುತ್ತಿದೆ. ಇದೂ ಸೇರಿದರೆ ಬರೋಬ್ಬರಿ ಎರಡೂವರೆ ಸಾವಿರ ಕೋಟಿ ರೂ. ರೈತರಿಗೆ ಪಾವತಿಯಾಗಬೇಕಿದೆ ಎಂದು ತಿಳಿಸಿದರು.

ಸಂಘದ ರಾಜ್ಯ ಉಪಾಧ್ಯಕ್ಷ ತೇಜಸ್ವಿ ಪಟೇಲ್ ಮಾತನಾಡಿ, ಡಿಸೆಂಬರ್ 23ರಂದು ಮೈಸೂರಿನಲ್ಲಿ ರಾಜ್ಯಮಟ್ಟದ ವಿಶ್ವ ರೈತ ದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುವುದು. ಈ ಬಗ್ಗೆ ರಾಜ್ಯ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.

Related Articles

Leave a Reply

Your email address will not be published. Required fields are marked *

Back to top button