Siddaramaiah: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರೈತರ ವಿರೋಧಿ: ಸಿದ್ದರಾಮಯ್ಯ
ನವದೆಹಲಿ: ಉತ್ತರ ಪ್ರದೇಶದಲ್ಲಿ ರೈತರ ಮೇಲೆ ನಡೆದ ಮಾರಣಹೋಮ ಘಟನೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬೇಷರತ್ ಜನರ ಕ್ಷಮೆ ಕೇಳಬೇಕೆಂದು ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶಕ್ಕೆ ಭೇಟಿ ನೀಡಿ ನೊಂದ ರೈತರಿಗೆ ಸಾಂತ್ವನ ಹೇಳಲು ಕಾಂಗ್ರೆಸ್ ಪಕ್ಷದ ಯಾವುದೇ ನಾಯಕರಿಗೆ ಅವಕಾಶ ನೀಡಲಾಗುತ್ತಿಲ್ಲ. ಇದು ಬಿಜೆಪಿಯ ದಮನಕಾರಿ ಪ್ರವೃತ್ತಿ ಮತ್ತು ನೀತಿ ಎಂದು ದೂರಿದರು.
ನರೇಂದ್ರ ಮೋದಿ ಸರ್ಕಾರ ಹಿಟ್ಲರ್ ಸರ್ಕಾರ, ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವ ಸರ್ಕಾರವಾಗಿದೆ. ಬಿಜೆಪಿಯವರಿಗೆ ಹಿಂಸಾಚಾರದಲ್ಲಿ ನಂಬಿಕೆ ಇದೆ. ಅದೇ ಅವರ ಕಾರ್ಯಸೂಚಿಯಾಗಿದೆ. ಇಂತಹ ಮನಃಸ್ಥಿತಿ ನಾಯಕರು ದೇಶ ಆಳುತ್ತಿರುವುದು ನಿಜಕ್ಕೂ ದೊಡ್ಡ ದುರಂತ ಎಂದರು.
ರೈತರು ಕಳೆದ ಹತ್ತು ತಿಂಗಳಿಂದ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳನ್ನು ವಾಪಸುಪಡೆಯಬೇಕು ಎಂದು ಒತ್ತಾಯಿಸಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಸೌಜನ್ಯಕ್ಕಾದರೂ ಅವರೊಂದಿಗೆ ಮಾತುಕತೆ ನಡೆಸುತ್ತಿಲ್ಲ. ಬದಲಿಗೆ ರೈತರ ಮೇಲೆ ದಮನಕಾರಿ ಪ್ರವೃತ್ತಿಯನ್ನು ಅನುಸರಿಸುತ್ತಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ರೈತ ವಿರೋಧಿ ಮತ್ತು ಜನವಿರೋಧಿ ಹಾಗೂ ಸಂವಿಧಾನ ವಿರೋಧಿ ಸರ್ಕಾರವಾಗಿದೆ ಎಂದು ಹರಿಹಾಯ್ದರು.
ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಅಮಾನತ್ತಿನಲ್ಲಿಟ್ಟಿರುವುದರಿಂದ ರೈತರು ಪ್ರತಿಭಟನೆ ನಡೆಸುವುದು ಸಮಂಜಸ ಅಲ್ಲ ಎಂಬ ಸುಪ್ರೀಂಕೋರ್ಟ್ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ರೈತರ ಬೇಡಿಕೆ ಕಾಯ್ದೆಯನ್ನು ಸಂಪೂರ್ಣವಾಗಿ ವಾಪಸ್ಸು ಪಡೆಯಬೇಕು ಎಂಬುದಾಗಿದೆಯೇ ಹೊರತು, ವಿವಾದಾತ್ಮಕ ಕಾಯ್ದೆಗಳ ಅಮಾನತು ರೈತರ ಬೇಡಿಕೆಯಲ್ಲ ಎಂದು ಸ್ಪಷ್ಟಪಡಿಸಿದರು.
ನಾಳೆ ವಿವಾದಾತ್ಮಕ ಕೃಷಿ ಕಾಯ್ದೆಗಳ ಮೇಲಿನ ಅಮಾನತ್ತನ್ನು ಕೇಂದ್ರ ಸರ್ಕಾರ ವಾಪಸ್ಸು ಪಡೆಯುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಕಾಯ್ದೆಗಳನ್ನು ಸಂಪೂರ್ಣವಾಗಿ ರದ್ದುಪಡಿಸಬೇಕೆಂಬ ರೈತರ ಬೇಡಿಕೆ ಸರಿಯಾದುದಾಗಿದೆ ಎಂದರು.