Latest

ವಲ್ಲಭಭಾಯಿ ಪಟೇಲ್​​ರ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ: ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿಯವರು ಪಟೇಲರ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ನೆಹರು ಅವರಿಗೆ ಅಗೌರವ ತೋರಿ, ಪಟೇಲರಿಗೆ ಹೆಚ್ಚು ಪ್ರಾಮುಖ್ಯತೆ ಕೊಡುವುದು, ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಸೋಲಿಸಿತು ಎಂದು ಅಪಪ್ರಚಾರ ಮಾಡುವ ಮೂಲಕ ದಲಿತರನ್ನು ಕಾಂಗ್ರೆಸ್ ವಿರುದ್ಧ ಎತ್ತಿಕಟ್ಟಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ಹುತಾತ್ಮ ದಿನ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸ್ವಾತಂತ್ರ್ಯ ನಂತರದಲ್ಲಿ ಹುಟ್ಟಿದ ನರೇಂದ್ರ ಮೋದಿ ಅವರು ದೇಶದ ಸ್ವಾತಂತ್ರ್ಯದ ಬಗ್ಗೆ, ದೇಶಭಕ್ತಿಯ ಬಗ್ಗೆ ದೊಡ್ಡ ದೊಡ್ಡ ಮಾತನಾಡಿ ತಮ್ಮಿಂದಲೇ ದೇಶ ಉಳಿದಿದೆ ಎಂದು ಬಿಂಬಿಸಲು ಹೊರಟಿದ್ದಾರೆ. ಭಾರತೀಯ ಜನತಾ ಪಕ್ಷದವರು ಢೋಂಗಿ ದೇಶಭಕ್ತರು. ಕಾಂಗ್ರೆಸ್ ನವರು ಮಾತ್ರ ದೇಶಕ್ಕಾಗಿ ಪ್ರಾಣ, ಆಸ್ತಿ ಪಾಸ್ತಿ ತ್ಯಾಗ ಮಾಡಿದ್ದಾರೆ. ಇದು ಕಾಂಗ್ರೆಸ್ ಗೂ ಮತ್ತು ಬಿಜೆಪಿಗೂ ಇರುವ ವ್ಯತ್ಯಾಸ ಎಂದರು.

ದೇಶಕಟ್ಟಿದ್ದು ಕಾಂಗ್ರೆಸ್ ಪಕ್ಷ. ದೇಶ ಅಭಿವೃದ್ಧಿ ಮಾಡಿದ್ದು ಕಾಂಗ್ರೆಸ್ ಪಕ್ಷ. ನರೇಂದ್ರ ಮೋದಿಯವರು ಕಾಂಗ್ರೆಸ್ ಪಕ್ಷ ದೇಶಕ್ಕೆ ಏನು ಮಾಡಿದೆ ಎಂದು ನಮ್ಮನ್ನೇ ಕೇಳುತ್ತಾರೆ. ದೇಶದಲ್ಲಿ ಡಿಜಿಟಲ್ ಕ್ರಾಂತಿ ಆಗಲು ರಾಜೀವ್ ಗಾಂಧಿ ಕಾರಣ, ನರೇಂದ್ರ ಮೋದಿ ಪ್ರಧಾನಿಯಾಗಿರುವುದೇ ಕಾಂಗ್ರೆಸ್ ನವರಿಂದ. ಕಾಂಗ್ರೆಸ್ ನವರು ಸ್ವಾತಂತ್ರ್ಯಕ್ಕಾಗಿ ಹೋರಾಡದೆ ಇದ್ದಿದ್ದರೆ, ದೇಶಕ್ಕೆ ಸ್ವಾತಂತ್ರ್ಯ ಬರುತ್ತಿತ್ತಾ? ಮೋದಿ ಪ್ರಧಾನಿ ಆಗುತ್ತಿದ್ದರಾ? ಎಂದು ಪ್ರಶ್ನಿಸಿದರು.

ಇಂದಿರಾ ಗಾಂಧಿಯವರು 20 ಅಂಶಗಳ ಕಾರ್ಯಕ್ರಮವನ್ನು ಜಾರಿಗೆ ತಂದು ಬಡತನವನ್ನು ನಿರ್ಮೂಲನೆ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ದೇಶದಲ್ಲಿ ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸುವ ಸಲುವಾಗಿ ಗರೀಬಿ ಹಠಾವೋ ಘೋಷಣೆಯ ಮೂಲಕ ಬಡಜನರಿಗಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು. ಮಹಿಳೆಯರಿಗೆ, ರೈತರಿಗೆ ಅವರು ಹಲವು ಯೋಜನೆಗಳನ್ನು ರೂಪಿಸಿದ್ದರು. ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೊಳಿಸಿ, ಭೂರಹಿತರಿಗೆ ಭೂಮಿಯ ಒಡೆತನ ಸಿಗುವಂತೆ ಮಾಡಿದರು ಎಂದರು.

ನೆಹರು ಅವರ ಇಡೀ ಕುಟುಂಬ ದೇಶಕ್ಕಾಗಿ ತ್ಯಾಗ ಬಲಿದಾನಗೈದಿದೆ. ಅವರ ಆದರ್ಶ ಮತ್ತು ಧ್ಯೇಯವನ್ನು ಮುಂದುವರೆಸಿಕೊಂಡು ಹೋಗುವ ಕೆಲಸವನ್ನು ನಾವೆಲ್ಲ ಮಾಡಬೇಕು. ಎಂದು ಮನವಿ ಮಾಡಿದರು.

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತಾವು ಸಂಪೂರ್ಣ ತೊಡಗಿಸಿಕೊಂಡಿದ್ದರು. ತೀರ ಬಡತನದಲ್ಲಿದ್ದ ರೈತ ಕುಟುಂಬದಲ್ಲಿ ಜನಿಸಿದ ಅವರು ತಡವಾಗಿ ಶಿಕ್ಷಣ ಸಿಕ್ಕಿದ್ದರಿಂದ ತಮ್ಮ 22 ನೇ ವಯಸ್ಸಿಗೆ ಎಸ್.ಎಸ್.ಎಲ್.ಸಿ ಪಾಸ್ ಮಾಡಿ, ಕಾನೂನು ಪಧವಿ ಪಡೆದು, ವಕೀಲರಾಗಿ ಕೆಲಸ ಮಾಡುತ್ತಿದ್ದರು. ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿ ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದರು.

ಒಮ್ಮೆ ಅವರು ನ್ಯಾಯಾಲಯದಲ್ಲಿ ವಾದ ಮಾಡುತ್ತಾ ಇರುವಾಗ ಯಾರೋ ಒಬ್ಬರು ಬಂದು ಒಂದು ಚೀಟಿ ಕೊಡುತ್ತಾರೆ, ಅದರಲ್ಲಿ ನಿಮ್ಮ ಪತ್ನಿ ಕಾಲವಾಗಿದ್ದಾರೆ ಎಂದು ಬರೆದಿರುತ್ತದೆ. ಆದರೂ ಕೂಡ ಅವರು ಸ್ವಲ್ಪವೂ ವಿಚಲಿತರಾಗದೆ ತಮ್ಮ ವಾದ ಮುಂದುವರೆಸಿದರು. ನಂತರ ಪತ್ನಿಯ ಶವ ನೋಡಲು ಹೋಗಿದ್ದರು. ಇಷ್ಟರ ಮಟ್ಟಿನ ಕರ್ತವ್ಯ ನಿಷ್ಠೆ ಅವರಿಗಿತ್ತು ಎಂಬುದನ್ನು ನಾವು ನೆನಪು ಮಾಡಿಕೊಳ್ಳಬೇಕು ಎಂದರು.

ದೇಶಕ್ಕಾಗಿ ಅನೇಕ ಕಾಂಗ್ರೆಸ್ ನಾಯಕರು ತ್ಯಾಗ ಬಲಿದಾನಗೈದಿದ್ದಾರೆ.‌ ನಾವು ಅವರಂತೆ ತ್ಯಾಗ, ಬಲಿದಾನ ಮಾಡಲು ಆಗದಿದ್ದರೂ ಅವರು ನಡೆದ ಹಾದಿಯಲ್ಲಿ ನಡೆಯುವ ಪ್ರಯತ್ನ ಮಾಡಬೇಕು. ಅದೇ ನಾವು ಅವರಿಗೆ ಸಲ್ಲಿಸುವ ಗೌರವ ಮತ್ತು ದೇಶಕ್ಕೆ ನೀಡುವ ಕೊಡುಗೆಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

Related Articles

Leave a Reply

Your email address will not be published. Required fields are marked *

Back to top button