Latest

ನಾಳೆ ಒಂದೇ ವೇದಿಕೆಯಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವ ಜಿ ಟಿ ದೇವೇಗೌಡ ಮತ್ತು ಸಿದ್ದರಾಮಯ್ಯ

ವರದಿ : ಅಶೋಕ್

ಮೈಸೂರು: ರಾಜಕೀಯ ಎದುರಾಳಿಗಳು ಇವತ್ತು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಸಮಯ ಬಂದಿದೆ. ಹಾಲಿ ಸಿಎಂ ಆಗಿದ್ದವರನ್ನೇ ಸೋಲಿಸಿ ಸದ್ದು ಮಾಡಿದ್ದ ಜಿಟಿಡಿ ಇವತ್ತು ಅದೇ ಮಾಜಿ ಸಿಎಂ ಜೊತೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ರಾಜಕೀಯದಲ್ಲಿ ಯಾರು ಶತ್ರುಗಳು ಇಲ್ಲ, ಮಿತ್ರರು ಇಲ್ಲ ಎಂಬುದನ್ನ ಮತ್ತೊಮ್ಮೆ ಸಾಬೀತು ಮಾಡಿದ್ದು ಜಿಟಿಡಿ ಜೆಡಿಎಸ್‌ನಿಂದ ಇನ್ನಷ್ಟು ದೂರವಾಗ್ತಿದ್ದು, ಕಾಂಗ್ರೆಸ್ ಗೆ ಹತ್ತಿರವಾಗ್ತಿದ್ದಾರೆ.

ರಾಜಕೀಯದಲ್ಲಿ ಯಾರು ಶತ್ರುಗಳು ಅಲ್ಲ, ಯಾರು ಮಿತ್ರರು ಅಲ್ಲ. ಯಾಕಂದ್ರೆ ಒಂದು ಪಕ್ಷದಲ್ಲಿ ಇದ್ದವರು ಮತ್ತೊಂದು ಪಕ್ಷಕ್ಕೆ ಹೋಗೋದು. ಒಬ್ಬರನ್ನ ತೆಗಳುತ್ತ ಅವರ ಜೊತೆಯೇ ಸೇರೋದು ಇದು ಕಾಮನ್. ಈ ಸಾಲಿಗೆ ಮತ್ತೊಂದು ಸೇರ್ಪಡೆ ಅಂದ್ರೆ ಅದು ಈ ಹಿಂದಿನ ಕುಚುಕ ಗೆಳೆಯರಾಗಿದ್ದರು ಸಿದ್ದು ಅಂಡ್ ಜಿಟಿಡಿ. ಈಗ ಜಿಟಿ ದೇವೇಗೌಡ ಅವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಮೈಸೂರಿನಲ್ಲಿ ಕಾರ್ಯಕ್ರಮವೊಂದು ಆಯೋಜನೆ ಆಗಿದ್ದು, ಆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹಾಗೂ ಜಿಟಿ ದೇವೇಗೌಡ ಇಬ್ಬರು ಕೂಡ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ.

ಕಳೆದ ಮೂರುವರೆ ವರ್ಷಗಳಿಂದ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಆಗಮಿಸದ ಸಿದ್ದರಾಮಯ್ಯ ಇದೇ ಮೊದಲ ಬಾರಿಗೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಸಮುದಾಯ ಉದ್ಘಾಟನೆಯ ನೆಪದಲ್ಲಿ ಸಿದ್ದರಾಮಯ್ಯ ಹಾಗೂ ಜಿಟಿ ದೇವೇಗೌಡ ಇಬ್ಬರು ಕೂಡ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ನಾಳೆ ಮೈಸೂರಿಗೆ ಆಗಮಿಸುವ ಸಿದ್ದರಾಮಯ್ಯ ಮಂಗಳವಾರ ಜಿಟಿಡಿ ಜೊತೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಆದರೆ ಇದು ಯಾವುದೇ ರಾಜಕೀಯ ಉದ್ದೇಶ ಅಲ್ಲ. ನನ್ನ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಾನು ಅಧ್ಯಕ್ಷತೆ ವಹಿಸುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ ಜಿಟಿ ದೇವೇಗೌಡರು.

ಆದ್ರೆ ಕುಮಾರಸ್ವಾಮಿ ಮೈಸೂರಿಗೆ ಆಗಮಿಸಿದ ವೇಳೆ ಕುಮಾರಸ್ವಾಮಿ ಬಳಿ ಬಾರದ ಜಿಟಿ ದೇವೇಗೌಡ, ಸಿದ್ದರಾಮಯ್ಯ ಬಂದ ವೇಳೆ ಒಟ್ಟಾಗಿ ಬಾಗಿಯಾಗ್ತಿರೋದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಆದ್ರೆ ಈ ಪ್ರಶ್ನೆಗೆ ಜಿಟಿಡಿ ನಾಜೂಕಿನ ಉತ್ತರ ಕೊಡ್ತಾರೆ. ಕುಮಾರಸ್ವಾಮಿ ನನ್ನ ಕ್ಷೇತ್ರಕ್ಕೆ ಬಂದಾಗ ನನಗೆ ಆಹ್ವಾನ ನೀಡಿರಲಿಲ್ಲ. ಆದರೆ ನನ್ನ ಕ್ಷೇತ್ರದಲ್ಲಿ ಕಾರ್ಯಕ್ರಮದ ಆಹ್ವಾನ ಬಂದರೇ ನಾನು ಭಾಗಿಯಾಗುತ್ತೇ‌ನೆ‌. ಆದರೆ ನಾನು ಪಕ್ಷ ಬಿಡಬೇಕೆ? ಬೇಡವೇ? ಎಂಬುದನ್ನ ನನ್ನ ಜನ ನಿರ್ಧಾರ ಮಾಡ್ತಾರೆ. ಆದರೆ ನಾನು ಏನು ಮಾಡಬೇಕೆಂದು ಈಗಾಗಲೇ ತೀರ್ಮಾನ ಮಾಡಿದ್ದೇನೆಂದು ಮಾರ್ಮಿಕವಾಗಿ ಹೇಳಿದ್ದಾರೆ ‌

ಒಟ್ಟಾರೆ ಜಿಟಿ ದೇವೇಗೌಡ ಹಾಗೂ ಸಿದ್ದರಾಮಯ್ಯ ಸಮಾಗಮಕ್ಕೆ ವೇದಿಕೆ ಸಜ್ಜಾಗಿದೆ. ಈ ಮೂಲಕ ಕಾಂಗ್ರೆಸ್‌ಗೆ ಹೋಗುವ ಜಿಟಿಡಿ ಹಾದಿಗೆ ಇದು ಪುಷ್ಠಿ ನೀಡಿದ್ದು ದಳಪತಿಗಳಿಗೆ ಇದು ತಳಮಳ ಉಂಟುಮಾಡಿರೋದಂತು ಸುಳ್ಳಲ್ಲ.

Related Articles

Leave a Reply

Your email address will not be published.

Back to top button