Latest

Private Darbar : ಮೈಸೂರು ದಸರಾ: ಎರಡನೇ ದಿನಕ್ಕೆ ಕಾಲಿಟ್ಟ ಖಾಸಗಿ ದರ್ಬಾರ್

ವರದಿ: ಅಶೋಕ್

ಮೈಸೂರು : ಮೈಸೂರಿನಲ್ಲಿ ದಸರಾ ಕಳೆ ಕಟ್ಟಿದೆ. ಕರೋನಾ ಹಿನ್ನಲೆಯಲ್ಲಿ ಕಾರ್ಯಕ್ರಮ ಕಡಿಮೆಯಿದ್ದರೂ ಅದನ್ನ ಅಚ್ಚುಕಟ್ಟಾಗಿ ನಿಭಾಯಿಸಲು ಜಿಲ್ಲಾಡಳಿತ ಸಜ್ಜಾಗಿದೆ.‌ ಒಂದು ಕಡೆ ಅರಮನೆ ಅಂಗಳದಲ್ಲಿ ಖಾಸಗಿ ದರ್ಬಾರ್ ಎರಡನೇ ದಿನಕ್ಕೆ ಕಾಲಿಟ್ರೆ, ಇತ್ತ ಗಜಪಡೆಗೆ ಕೊನೆ ಹಂತದ ಫಿರಂಗಿ ತಾಲೀಮು‌ ಮುಕ್ತಾಯವಾಗಿದೆ. ಅಷ್ಟಕ್ಕೂ ಹೇಗಿತ್ತು ದಸರಾ ನವರಾತ್ರಿಯ ಎರಡನೇ ದಿನದ ಸಂಭ್ರಮ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿಶ್ವವಿಖ್ಯಾತ ನಾಡಹಬ್ಬ ದಸರಾ ಜಂಬೂಸವಾರಿಗೆ ದಿನಗಣನೆ ಶುರುವಾಗಿದ್ದು ಇಂದು ಎರಡನೇ ದಿನದ ನವರಾತ್ರಿ ಉತ್ಸವದ ಕಾರ್ಯಕ್ರಮ ಮುಂದುವರೆದಿದೆ. ಬೆಳಗ್ಗೆ 8 ಗಂಟೆಗೆ ಅರಮನೆಯಲ್ಲಿ ಖಾಸಗಿ ದರ್ಬಾರ್‌ನ 2ನೇ ದಿನ ಪ್ರಾರಂಭವಾಗಿದ್ದು ಕೋಡಿ ಸೋಮೇಶ್ವರ ದೇಗುಲದ ಬಳಿ ಪಟ್ಟದ ಆನೆ, ಕುದುರೆ, ಹಸುವಿಗೆ ಮೆರವಣಿಗೆ‌ ಮೂಲಕ ಕರೆತರಲಾಗಿತ್ತು. ಬಳಿಕ ವಿಶೇಷ ಪೂಜೆ ಸಲ್ಲಿಸಿ ಪುನಃ ಅರಮನೆಯತ್ತ ಖಾಸಗಿ ದರ್ಬಾರ್‌ನಲ್ಲಿ ಆನೆ, ಹಸು, ಕುದುರೆ ಭಾಗಿಯಾದವು.

ಇತ್ತ ದಸರಾ ಗಜಪಡೆಗೆ 3ನೇ ಹಾಗೂ ಕೊನೆ ಹಂತದ ಫಿರಂಗಿ ಸಿಡಿಮದ್ದು ತಾಲೀಮು ನಡೆಸಲಾಯಿತು. ಇಂದು ಕೊನೆ ಹಂತದ ಫಿರಂಗಿ ತಾಲೀಮಿಗೆ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಭಾಗಿಯಾಗಿ ಫಿರಂಗಿ ತಾಲೀಮು ವೀಕ್ಷಣೆ ಮಾಡಿದರು. ಈ ವೇಳೆ ಆನೆಗಳ ಬಗ್ಗೆ ಮಾಹಿತಿ ಪಡೆದು ಬಳಿಕ ಮಾತನಾಡಿದ ಅವರು, ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸರ್ಕಾರ ನಿಗದಿಪಡಿಸಿದಷ್ಟು ಜನರು ಬರುತ್ತಿಲ್ಲ. ನಾನು ಕೂಡ ನಿನ್ನೆ ರಾತ್ರಿ ಕೊನೆವರೆಗೆ ಕಾರ್ಯಕ್ರಮ ನೋಡಿದೆ. ಆದ್ರೆ ಕೇವಲ 200 ಜನ ಮಾತ್ರ ಬಂದಿದ್ದರು. ವರ್ಚುವಲ್ ಆಗಿ ರಾಜ್ಯದಲ್ಲಿ 70 ಸಾವಿರ ಜನ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆ ಮಾಡಿದ್ದಾರೆ ಎಂದರು.

ಇಂದು ಕೊನೆ ಹಂತದ ತಾಲೀಮು ನಡೆಸಿದ ಕಾರಣ ಇವತ್ತೂ ಸಹ ಧನಂಜಯ ಹಾಗೂ ಲಕ್ಷ್ಮಿ ಆನೆಗಳು ಬೆದರಿದವು. ಆದ್ರೆ ಧನಂಜಯ ಆನೆಗೆ ಯಾವುದೇ ಭಯ ಇಲ್ಲ. ಆದರೆ ಫಿರಂಗಿ ತಾಲೀಮು ಅಂದಾಗ ಮಾತ್ರ ಸ್ವಲ್ಪ ಬೆಚ್ಚುತ್ತಾನೆ. ಆದರೆ ನಮಗೆ ಯಾವುದೇ ಸಮಸ್ಯೆ ಇಲ್ಲ. ಸದ್ಯ ವಿಕ್ರಮ ಮದದಲ್ಲಿ ಇರುವ ಕಾರಣ ದಸರಾಗೆ ಬಳಕೆ ಮಾಡಿಕೊಳ್ಳುತ್ತಿಲ್ಲ. ಈ ರೀತಿಯ ಸಣ್ಣ ಸಮಸ್ಯೆ ಆಗುವ ನಿಟ್ಟಿನಲ್ಲಿ ನಾವು ಮೂರು ಆನೆಗಳನ್ನ ಹೆಚ್ಚುವರಿಯಾಗಿ ಕರೆತಂದಿದ್ದೇವೆ. ನಾಳೆ ಬೆಳಗ್ಗೆ ಶ್ರೀರಂಗಪಟ್ಟಣ ದಸರಾಗೆ ಎರಡು ಆನೆ ಹೋಗಲಿದ್ದು ಈ ಬಾರಿ ದಸರಾಗೆ ಐದು ಆನೆಗಳು ಮಾತ್ರ ಬಳಕೆ ಆಗುತ್ತಿದ್ದು ದಸರಾಗೆ ಸಂಪೂರ್ಣ ಸಿದ್ದವಾಗಿವೆ.

ಅರಮನೆ ಮುಂಭಾಗ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿದ್ದು, ಕಡಿಮೆ ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಒಟ್ಟಾರೆ, ನಾಡಹಬ್ಬ ದಸರೆ ಸರಳವಾದ್ರು ಅದನ್ನ ಅಚ್ಚುಕಟ್ಟಾಗಿ ನಿಭಾಯಿಸಲು ಜಿಲ್ಲಾಡಳಿತ, ಅರಣ್ಯ ಇಲಾಖೆ ಸಜ್ಜಾಗಿದೆ. ಈಗಾಗಲೇ ದಸರೆಯ ತಾಲೀಮು ಕೊನೆ ಹಂತ ತಲುಪಿದ್ದು, ಅರಮನೆಯಲ್ಲಿ ಸಾಂಸ್ಕೃತಿಕ‌ ಕಾರ್ಯಕ್ರಮ ಮೆರಗು ನೀಡುತ್ತಿವೆ.

Related Articles

Leave a Reply

Your email address will not be published.

Back to top button