ಸಂಘ ಪರಿವಾರದವರಿಗೆ ಖುರ್ಚಿ ವ್ಯಾಮೋಹವಿಲ್ಲ, ಐಟಿ ದಾಳಿಗೂ ಬಿಎಸ್ವೈ ಗೂ ಸಂಬಂಧವಿಲ್ಲ: ಶಾಸಕ ಎಂ ಪಿ ರೇಣುಕಾಚಾರ್ಯ
ಬೆಂಗಳೂರು: ಸಂಘ ಪರಿವಾರದ ಬಗ್ಗೆ ಲಘುವಾಗಿ ಮಾತನಾಡುತ್ತಿರುವ ವಿಪಕ್ಷ ನಾಯಕರಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ. ಸಂಘ ಪರಿವಾರದವರಿಗೆ ಕುರ್ಚಿಯ ವ್ಯಾಮೋಹವಿಲ್ಲ ಎಂದಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ ಎಸ್ ಎಸ್ ಬಗ್ಗೆ ಕಳೆದ ಒಂದು ವಾರದಿಂದ ಚರ್ಚೆಯಾಗುತ್ತಿದೆ. ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯರಿಗೆ ಸಂಘಪರಿವಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಸಂಘ ಪರಿವಾರದವರುಕುರ್ಚಿಗಾಗಿ ಎಂದೂ ಹೋರಾಡಿಲ್ಲ. ಸಮಾಜ ಸೇವೆಗಾಗಿ ಸಂಘ ಸಮರ್ಪಣೆ ಮಾಡಿಕೊಂಡಿದೆ ಎಂದರು.
ಸಂಘ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡುತ್ತಿದೆ. ಕುರ್ಚಿ ವ್ಯಾಮೋಹ ಜೆಡಿಎಸ್, ಕಾಂಗ್ರೆಸ್ಸಿಗಿದೆ. ಅಲ್ಪಸಂಖ್ಯಾತರ ಉದ್ಧಾರಕರು ಎಂದು ಹೇಳಿಕೊಳ್ಳುತ್ತಾರಷ್ಟೆ. ಸಿದ್ದರಾಮಯ್ಯ ಟಿಪ್ಪುಜಯಂತಿ ಮಾಡಿ ವೋಟ್ ಬ್ಯಾಂಕ್ ರಾಜಕಾರಣ ಮಾಡಿದ್ದರು. ಅಲ್ಪಸಂಖ್ಯಾತರಿಗೂ ಕೂಡ ಇಂದು ಸಿದ್ದರಾಮಯ್ಯ ಅವರ ಬಂಡವಾಳ ಗೊತ್ತಾಗಿದೆ. ಇವರೆಲ್ಲ ವೋಟ್ ಬ್ಯಾಂಕ್ ಗಾಗಿ ಸಂಘದ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ ಎಂದು ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಆರ್ ಎಸ್ ಎಸ್ ಬಗ್ಗೆ ಅನಗತ್ಯ ಟೀಕೆ ಸರಿಯಲ್ಲ. ತಾಲಿಬಾನ್ ಸಂಸ್ಕೃತಿ ನಿಮ್ಮದು.ಕೊಳ್ಳಿಯಿಡುವ ಸಂಸ್ಕೃತಿ ವಿಕೃತ ಮನಸ್ಸಿನ ಕಾಂಗ್ರೆಸ್ ಜೆಡಿಎಸ್ ನಾಯಕರು ವೋಟಿಗಾಗಿ ರಾಜಕಾರಣ ಮಾಡಬಾರದು.ಆರ್ ಎಸ್ ಎಸ್ ಬಗ್ಗೆ ಮಾತನಾಡಿದರೆ ಇವರುಗಳಿಗೆ ನಷ್ಟ. ಸಂಘ ಒಳ್ಳೆಯ ಮಾರ್ಗದರ್ಶನ ಮಾಡುತ್ತದೆ.ಇವರು ಸಂಘಕ್ಕೆ ಒಮ್ಮೆ ಬಂದು ನೋಡಿದರೆ ಅಲ್ಲಿನ ವಾಸ್ತವ ನಿಮಗೆ ಗೊತ್ತಾಗುತ್ತದೆ ಎಂದರು.
ಪ್ರತಿಭಾವಂತರು ಎಲ್ಲಿ ಬೇಕಾದರೂ ಇರಬಹುದು.ಅದರಂತೆ ಸಂಘಪರಿವಾರದಲ್ಲಿಯೂ ಕೂಡ ಹಲವರು ಪ್ರತಿಭಾವಂತರಿದ್ದಾರೆ. ಅವರು ಉನ್ನತ ಹುದ್ದೆಯಲ್ಲಿರುವುದೇನೂ ತಪ್ಪಲ್ಲ. ನಾವು ಆಪರೇಷನ್ ಕಮಲ ಮಾಡಿಲ್ಲ. ಮೊದಲು ಜೆಡಿಎಸ್ ಆಪರೇಷನ್ ಆರಂಭ ಮಾಡಿದ್ದು ಎಂದೂ ಹೇಳಿದರು.
ಇದೇ ವೇಳೆ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಬಿಜೆಪಿ ಪಕ್ಷದಲ್ಲಿ ಬಿ.ಎಸ್.ಯಡಿಯೂರಪ್ಪನವರನ್ನು ಸೈಡ್ ಲೈನ್ ಮಾಡಿಲ್ಲ. ಐಟಿ ರೇಡ್ ಗೂ ಯಡಿಯೂರಪ್ಪಗೂ ಸಂಬಂಧವಿಲ್ಲ. ಸತ್ಯಾಂಶ ಹೊರಬರಲಿದೆ ಎಂದರು.