Latest

ಆರ್​​ಎಸ್​​ಎಸ್​ ವಿರುದ್ಧ ಹೋರಾಡಿದ್ದಕ್ಕೆ ನಾನು ಲೋಕಸಭಾ ಚುನಾವಣೆಯಲ್ಲಿ ಸೋತೆ: ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ಆರ್ ಎಸ್ ಎಸ್ ವಿರುದ್ಧ ಹೋರಾಡಿದ್ದಕ್ಕೆ ನಾನು ಚುನಾವಣೆಯಲ್ಲಿ ಸೋಲಬೇಕಾಯಿತು ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆರ್ ಎಸ್ ಎಸ್ ವಿರುದ್ಧ ಮುಂದೆಯೂ ಹೋರಾಡುತ್ತೇನೆ. ನಾನು 16ನೇ ವಯಸ್ಸಿನಿಂದಲೇ ಆರ್ ಎಸ್ ಎಸ್ ವಿರುದ್ಧ ಹೋರಾಡುತ್ತಿದ್ದೇನೆ ಎಂದರು.

ಆರ್ ಎಸ್ ಎಸ್ ಎಂದಿಗೂ ಬಡವರ ಪರವಾಗಿಲ್ಲ. ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿಲ್ಲ. ಅವರು ಮನುಸ್ಮೃತಿಯನ್ನು ನಂಬುತ್ತಾರೆ. ಆರ್ ಎಸ್ಎಸ್ ಪುಸ್ತಕಗಳನ್ನು ಓದಿದರೆ ಅದು ಅರ್ಥವಾಗುತ್ತದೆ. ದೇಶದಲ್ಲಿ ಸರ್ವಾಧಿಕಾರಿ ಧೋರಣೆ ಮುಗಿಲುಮುಟ್ಟಿದೆ. ಕೇಂದ್ರ ಮತ್ತು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಗಳು ಪ್ರಜಾಪ್ರಭುತ್ವ, ಸಂವಿಧಾನ ಮೌಲ್ಯಗಳಿಗೆ ಅನುಗುಣವಾಗಿ ನಡೆದುಕೊಳ್ಳುತ್ತಿಲ್ಲ. ಬೆದರಿಕೆ ನೀತಿಯನ್ನು ಅಳವಡಿಸಿಕೊಂಡಿವೆ. ಇದು ದೇಶಕ್ಕೆ ಮಾರಕ ಎಂದು ಖರ್ಗೆ ಆತಂಕ ವ್ಯಕ್ತಪಡಿಸಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ತೀವ್ರವಾಗಿ ಕಿಡಿಕಾರಿದ ಮಲ್ಲಿಕಾರ್ಜುನ ಖರ್ಗೆ, ಯೋಗಿ ಆದಿತ್ಯನಾಥ್ ಯಾವಾಗಲೂ ಕಾನೂನುಬಾಹಿರವಾಗಿ ನಡೆದುಕೊಳ್ಳುತ್ತಾರೆ. ಹತ್ರಾಸ್ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆ ಶವವನ್ನು ಅವರ ಪೋಷಕರಿಗೆ ತಿಳಿಸದಂತೆ ರಾತ್ರೋರಾತ್ರಿ ಸುಟ್ಟರು. ಆ ಮೂಲಕ ಕಾನೂನು ಬಾಹಿರ ಕೆಲಸಗಳಿಗೆ ಪ್ರಚೋದನೆ, ಪ್ರೋತ್ಸಾಹ ನೀಡಿದರು. ಮುಖ್ಯಮಂತ್ರಿ ಸ್ಥಾನದಲ್ಲಿ ಅವರು ಮುಂದುವರಿಯಲು ಅರ್ಹರಲ್ಲ ಎಂದರು.

ಲಖಿಂಪುರದಲ್ಲಿ ರೈತರ ಮೇಲೆ ಹರಿದ ಎಸ್ ಯುವಿ ಕಾರಿನ ಎಡಭಾಗದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಇದ್ದ ಎಂದು ಅಲ್ಲಿನ ಪ್ರತ್ಯಕ್ಷದರ್ಶಿಗಳೇ ಹೇಳುತ್ತಿದ್ದು, ಆತನನ್ನು ರಕ್ಷಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ದೂರಿದರು.

ಪ್ರಚೋದನಾಕಾರಿ ಹೇಳಿಕೆ, ಸುಳ್ಳು, ಸತ್ಯ ತಿರುಚಲು ಪ್ರಯತ್ನಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನು ಸಚಿವ ಸ್ಥಾನದಿಂದ ಕೂಡಲೇ ವಜಾಗೊಳಿಸಬೇಕು. ಪ್ರಚೋದನಾಕಾರಿ ಹೇಳಿಕೆ ಹಿನ್ನೆಲೆಯಲ್ಲಿ ಅಜಯ್ ಮಿಶ್ರಾ ಮತ್ತು ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು. ಆದರೆ ದೇಶದಲ್ಲಿ ಪತ್ರಕರ್ತರು, ವಿರೋಧ ಪಕ್ಷಗಳ ನಾಯಕರು, ಸರ್ಕಾರವನ್ನು ಪ್ರಶ್ನಿಸುವವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಖರ್ಗೆ ವಿಷಾದಿಸಿದರು.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬಂಧನವನ್ನು ತೀವ್ರವಾಗಿ ಖಂಡಿಸಿದ ಅವರು, ಪ್ರಿಯಾಂಕಾರನ್ನು ತಕ್ಷಣ ಬಿಡುಗಡೆ ಮಾಡಬೇಕು. ಈ ಪ್ರಕರಣವನ್ನು ಸುಪ್ರೀಂಕೋರ್ಟ್ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಸಾಂತ್ವನ ಹೇಳಲು ಹೋದವರನ್ನು ಬಂಧಿಸುವವರು, ಕೇಂದ್ರ ಸಚಿವರ ಮಗನನ್ನೇಕೆ ಬಂಧಿಸಿಲ್ಲ. ಬಂಧಿಸಿಲ್ಲ ಎಂದು ಪ್ರಶ್ನಿಸಿದರು.

ರೈತರ ಪ್ರತಿಭಟನೆ ಕಾಂಗ್ರೆಸ್ ಪ್ರಾಯೋಜಕತ್ವ ಎಂದು ಹೇಳಲು ಪ್ರತಿಭಟನೆ ಮಾಡುತ್ತಿರುವ ರೈತರು ಕಾಂಗ್ರೆಸ್ ಸದಸ್ಯರೇ? ಈ ಕರಾಳ ಕಾನೂನು ವಿರುದ್ಧ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಹೋರಾಟ ಮಾಡಿದ್ದೇವೆ. ನಮ್ಮ ಅಭಿಪ್ರಾಯ ಕೇಳದೇ ಈ ಮಸೂದೆಗಳಿಗೆ ಅಂಗೀಕಾರ ನೀಡಲಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.

Related Articles

Leave a Reply

Your email address will not be published. Required fields are marked *

Back to top button