ರೋಹಿಂಗ್ಯ ವಲಸಿಗರನ್ನು ಸದ್ಯಕ್ಕೆ ಗಡಿಪಾರು ಮಾಡುವುದಿಲ್ಲ: ರಾಜ್ಯ ಸರ್ಕಾರದಿಂದ ಸುಪ್ರೀಂ ಕೋರ್ಟ್ ಗೆ ಮಾಹಿತಿ
ನವದೆಹಲಿ: ಬೆಂಗಳೂರಲ್ಲಿ ಪತ್ತೆಯಾಗಿರುವ 72 ಮಂದಿ ರೋಹಿಂಗ್ಯ ವಲಸಿಗರನ್ನು ಗಡಿಪಾರು ಮಾಡುವ ಯೋಜನೆ ಸದ್ಯಕ್ಕೆ ಎಂದು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ಅಕ್ರಮವಾಗಿ ನೆಲೆಸಿರುವ ರೋಹಿಂಗ್ಯ ವಲಸಿಗರನ್ನು ಗಡಿಪಾರು ಮಾಡಲು ನಿರ್ದೇಶನ ನೀಡುವಂತೆ ಬಿಜೆಪಿ ಮುಖಂಡ ಹಾಗೂ ವಕೀಲ ಅಶ್ವಿನಿ ಉಪಾಧ್ಯಾಯ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ರಾಜ್ಯ ಸರ್ಕಾರ ಈ ಲಿಖಿತ ಪ್ರತಿಕ್ರಿಯೆ ಸಲ್ಲಿಸಿದೆ. ವಕೀಲ ಎನ್ ವಿ ರಘುಪತಿ ಅವರ ಮೂಲಕ ಆಕ್ಷೇಪಣೆ ಸಲ್ಲಿಸಿ, ಗಡಿಪಾರು ಮಾಡುವಂತೆ ನಿರ್ದೇಶಿಸಿ ಸಲ್ಲಿಸಲಾದ ಮನವಿಯನ್ನು ವಜಾಗೊಳಿಸುವಂತೆ ಕೋರಿದೆ.
ಬೆಂಗಳೂರಿನಲ್ಲಿ ಪತ್ತೆಯಾಗಿರುವ ರೋಹಿಂಗ್ಯ ವಲಸಿಗರನ್ನು ಯಾವುದೇ ಶಿಬಿರ ಅಥವಾ ಬಂಧನ ಕೇಂದ್ರಗಳಲ್ಲಿ ಹಾಕಿಲ್ಲ. 72 ಮಂದಿ ರೋಹಿಂಗ್ಯ ವಲಸಿಗರು ವಿವಿಧ ಕೆಲಸ, ಉದ್ಯೋಗದ ನಿಮಿತ್ತ ನೆಲೆಸಿದ್ದಾರೆ. ಅವರ ವಿರುದ್ಧ ಈಗ ಯಾವುದೇ ಕಠಿಣ ಕ್ರಮ ತೆಗೆದುಕೊಂಡಿಲ್ಲ. ತಕ್ಷಣಕ್ಕೆ ಗಡಿಪಾರು ಮಾಡುವ ಯೋಜನೆ ಸದ್ಯಕ್ಕೆ ಇಲ್ಲ ಎಂದು ಸರ್ಕಾರ ಹೇಳಿದೆ.
ಬಾಂಗ್ಲಾ ವಲಸಿಗರು ಹಾಗೂ ರೋಹಿಂಗ್ಯರ ಸಹಿತ ಎಲ್ಲಾ ಒಳ ನುಸುಳುಕೋರರನ್ನು ಪತ್ತೆಹಚ್ಚಿ ಬಂಧಿಸಬೇಕು. ನಂತರ ಗಡಿಪಾರು ಮಾಡಬೇಕು. ಜಾಮೀನು ರಹಿತ ಹಾಗೂ ಗಂಭೀರ ಪ್ರಕರಣವಾಗಿ ಪರಿಗಣಿಸಲು ಕಾನೂನು ತಿದ್ದುಪಡಿ ಮಾಡಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಬೇಕು ಎಂಬುದಾಗಿ ವಕೀಲ ಅಶ್ವಿನಿ ಉಪಾಧ್ಯಾಯ ಅರ್ಜಿಯಲ್ಲಿ ಪ್ರಸ್ತಾಪಿಸಿದ್ದರು.