Latestಇತರ ಕ್ರೀಡೆ

ನಿವೃತ್ತಿಯಾದವರಿಗೂ ರಾಜ್ಯ ಸರಕಾರದಿಂದ ಒಲಿಂಪಿಕ್ಸ್‌ ಭಾಗ್ಯ!!!

ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್‌ ನಲ್ಲಿ ನಮ್ಮ ಅಥ್ಲೀಟ್‌ಗಳು ಉತ್ತಮ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ನಿವೃತ್ತ ಕ್ರೀಡಾಪಟುಗಳನ್ನೂ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಕಳುಹಿಸಿ ಪದಕ ಗೆಲ್ಲುವ ಗುರಿ ಹೊಂದಿದೆ.

ಆಗಸ್ಟ್‌ 15 ರಂದು ಮಾನ್ಯ ಮುಖ್ಯಮಂತ್ರಿಗಳು ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಭಾಷಣ ಮಾಡುತ್ತ ಈ ಸವಿನೆನಪಿಗಾಗಿ 75 ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಅಮೃತ ಕ್ರೀಡಾ ದತ್ತು ಯೋಜನೆಯ ಮೂಲಕ ಅವರಿಗೆ ತರಬೇತಿ ನೀಡಿ ಪ್ರೋತ್ಸಾಹಿಸಲಾಗುವುದು ಎಂದು ಹೇಳಿದ್ದರು. ಅದೇ ರೀತಿ ಕ್ರೀಡಾ ಇಲಾಖೆ ವಿವಿಧ ಕ್ರೀಡಾ ಸಂಸ್ಥೆಗಳಿಂದ ಅರ್ಹ ಕ್ರೀಡಾಪಟುಗಳ ಪಟ್ಟಿಯನ್ನು ತರಿಸಿಕೊಂಡಿದೆ.

ಆ ಪಟ್ಟಿಯ ಪ್ರಕಾರ ಇತ್ತೀಚಿಗೆ ಅಂತಾರಾಷ್ಟ್ರೀಯ ಹಾಕಿಗೆ ನಿವೃತ್ತಿ ಹೇಳಿದ ಕನ್ನಡಿಗ ಎಸ್‌.ವಿ. ಸುನಿಲ್‌ ಅವರ ಹೆಸರೂ ಸೇರಿಕೊಂಡಿರುವುದು ಕ್ರೀಡಾ ವಲಯದಲ್ಲಿ ಅಚ್ಚರಿಯನ್ನುಂಟು ಮಾಡಿದೆ. 12 ವರ್ಷದ ಬಾಲಕಿಯನ್ನು ಪಟ್ಟಿಯಲ್ಲಿ ಸೇರಿಸಿರುವುದು ಮತ್ತೊಂದು ಅಚ್ಚರಿ. ಇತ್ತೀಚಿಗೆ ನಡೆದ ರಾಷ್ಟ್ರೀಯ ಮಟ್ಟದ ಚಾಂಪಿಯನ್ಷಿಪ್‌ ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳ ಹೆಸರು ಮಾಯವಾಗಿದ್ದು, ಅದೇ ರಾಷ್ಟ್ರೀಯ ಚಾಂಪಿಯನ್ಷಿಪ್‌ನಲ್ಲಿ ಪದಕ ಗೆಲ್ಲದ ಕ್ರೀಡಾಪಟುಗಳ ಹೆಸರು ಕಾಣುತ್ತಿರುವುದು ಅಚ್ಚರಿಯ ಸಂಗತಿ.

ಲಾಂಗ್‌ ಜಂಪ್‌ನಲ್ಲಿ ರಾಷ್ಟ್ರೀಯ ದಾಖಲೆ ಬರೆದ ಐಶ್ವರ್ಯ ಅವರ ಹೆಸರು ಇಲ್ಲದಿರುವ ಬಗ್ಗೆ ಕರ್ನಾಟಕದ ಅಥ್ಲೀಟ್‌ ಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಜೆಸ್ಸಿ ಸಂದೇಶ್‌ ರಾಷ್ಟ್ರೀಯ ಅಥ್ಲೆಟಿಕ್ಸ್‌ ಚಾಂಪಿಯನ್ಷಿಪ್‌ನಲ್ಲಿ ಚಿನ್ನಗೆದ್ದ ಹೈಜಂಪರ್‌ ಆದರೆ ಯುವ ಕ್ರೀಡಾಪಟುವಿನ ಹೆಸರು ಪಟ್ಟಿಯಲ್ಲೇ ಇಲ್ಲ. ಈ ಕುರಿತು ಅಥ್ಲೆಟಿಕ್ಸ್‌ ಸಂಸ್ಥೆಯ ಕಾರ್ಯದರ್ಶಿ ರಾಜವೇಲು ಅವರನ್ನು ಸಂಪರ್ಕಿಸಿದಾಗ ಪಟ್ಟಿ ನೀಡಿ ಮೂರು ತಿಂಗಳಾಗಿದೆ ಎಂದು ಹೇಳಿದ್ದಾರೆ. ಈ ಯೋಜನೆ ಘೋಷಣೆ ಮಾಡಿಯೇ ಮೂರು ತಿಂಗಳು ಪೂರ್ಣಗೊಂಡಿಲ್ಲ ಎಂಬುದು ಗಮನಾರ್ಹ.

ಸರಕಾರ ಕೈಗೊಂಡಿರುವ ಈ ಯೋಜನೆ ಅತ್ಯಂತ ಸೂಕ್ತವಾದುದು, ಆದರೆ ಕ್ರೀಡಾಪಟುಗಳನ್ನು ಆಯ್ಕೆ ಮಾಡುವಾಗ ಸಾಧನೆಗಳನ್ನು ಪರಿಶೀಲಿಸಬೇಕಾಗಿತ್ತು.

Related Articles

Leave a Reply

Your email address will not be published.

Back to top button