Latest

Netrani Scuba Diving: ಮುರುಡೇಶ್ವರದ ನೇತ್ರಾಣಿಯಲ್ಲಿ ಗರಿಗೆದರಿದ ಸ್ಕೂಬಾ ಡೈವಿಂಗ್

ಕಾರವಾರ : ಕೊರೋನಾ ಕಾರಣದಿಂದ ಕಳೆದ ಎರಡು ವರ್ಷದಿಂದ ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರದ ನೇತ್ರಾಣಿ ದ್ವೀಪದಲ್ಲಿ ನಡೆಯುತ್ತಿದ್ದ ಜಲ ಸಾಹಸ ಕ್ರೀಡೆಯು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ಕೊರೊನಾ ಇಳಿಕೆಯಾದ ಕಾರಣ ಜಿಲ್ಲೆಯಲ್ಲಿ ನಡೆಯುತ್ತಿದ್ದ ಜಲ ಸಾಹಸ ಕ್ರೀಡೆಗೆ ಅವಕಾಶ ಕಲ್ಪಿಸಿ ಕೊಡುವ ಜೊತೆಗೆ ಮುರುಡೇಶ್ವರದ ನೇತ್ರಾಣಿ ನಡುಗಡ್ಡೆಯಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿ ಪ್ರಾರಂಭವಾಗಿದ್ದ ಸ್ಕೂಬಾ ಡೈವ್‌ಗೆ ಅವಕಾಶ ಕಲ್ಪಿಸಿ ಕೊಡಲಾಗಿದೆ.

ಭಾರತದಲ್ಲಿ ಅಂಡಮಾನ್ ನಿಕೋಬಾರ್ ದ್ವೀಪವನ್ನು ಹೊರತುಪಡಿಸಿದರೆ ಎರಡನೇ ಮತ್ತು ಅತ್ಯಂತ ಸುರಕ್ಷತೆ ಇರುವ ನೇತ್ರಾಣಿ ದ್ವೀಪದಲ್ಲಿ ಮಾತ್ರ ಸ್ಕೂಬಾ ಡೈವ್ ಗೆ ಅವಕಾಶ ಇರುವುದಾಗಿದೆ. ನೇತ್ರಾಣಿ ಅಡ್ವೆಂಚರ್ಸ್ 2009 ಡಿಸೆಂಬರ್‌ನಿಂದ ಪ್ರವಾಸೋಧ್ಯಮ ಇಲಾಖೆ ಸಹಕಾರದೊಂದಿಗೆ ಮುರುಡೇಶ್ವರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಪ್ಯಾಡಿ ನೋಂದಾಯಿತ ಡೈವ್ ಕೇಂದ್ರವಾಗಿದ್ದು, ಸ್ಕೂಬಾ ಡೈವರ್‌ಗಳು ಮತ್ತು ಬೋಧಕರಿಗೆ ಮಹತ್ವಾಕಾಂಕ್ಷೆಯ ಡಿಸ್ಕವರ್ ಸ್ಕೂಬಾ ಡೈವ್ ಮತ್ತು ವೃತ್ತಿಪರ ಪ್ರಮಾಣೀಕರಣ ಕೋರ್ಸ್‌ಗಳನ್ನು ನೀಡುತ್ತದೆ. ಪ್ಯಾಡಿ ಜಾಗತಿಕ ಮಾನದಂಡಗಳ ಪ್ರಕಾರ ನೇತ್ರಾಣಿ ಅಡ್ವೆಂಚರ್ಸ್ ಎಲ್ಲಾ ಸುರಕ್ಷತಾ ನಿಯಮಗಳನ್ನು ಅನುಸರಿಸುತ್ತದೆ. ಸ್ಕೂಬಾ ಡೈವಿಂಗ್ ಸೆಪ್ಟೆಂಬರ್ ಮಧ್ಯದಿಂದ ಪ್ರಾರಂಭವಾಗಿ ಮೇ ಅಂತ್ಯದವರೆಗೆ ನಡೆಯುತ್ತದೆ. ಇದೀಗ ಜಿಲ್ಲಾಡಳಿತ ಒಂದು ತಿಂಗಳು ಮಾತ್ರ ಸ್ಕೂಬಾ ಡೈವ್ ಗೆ ಅವಕಾಶ ಮಾಡಿಕೊಟ್ಟಿದೆ.

ಸಮುದ್ರದಾಳದಲ್ಲಿ ಇಳಿದು ಅಲ್ಲಿನ ಜೀವಚರಗಳನ್ನು ವೀಕ್ಷಿಸುವುದೇ ಸ್ಕೂಬಾ ಡೈವ್. ಇದಕ್ಕಾಗಿ ಆಕ್ಸಿಜನ್ ಸಿಲೆಂಡರ್ ತುಂಬಿದ ಪರಿಕರಗಳನ್ನು ಹಾಕಿಕೊಂಡು ಸಮುದ್ರದ ಮಧ್ಯಭಾಗದಲ್ಲಿ ಜಂಪ್ ಮಾಡುವ ಮೂಲಕ ಕಡಲಿನ ಆಳಕ್ಕೆ ಇಳಿಯಲಾಗುತ್ತದೆ. ಇದಕ್ಕಾಗಿ ಈಜು ಬರಬೇಕು ಎಂದೇನೂ ಇಲ್ಲ.ಆದರೆ ದೈರ್ಯ ಬೇಕು. ಇನ್ನು ಸುರಕ್ಷತೆ ದೃಷ್ಟಿಯಿಂದ ನುರಿತ ತರಬೇತುದಾರರು ಸಹಾಯಕ್ಕೆ ಇರುತ್ತಾರೆ. ಉಸಿರಾಟದ ಸಾಧನ ಧರಿಸಿ ನೀರೊಳಗೆ ಮುಳುಗಿ ಹವಳಗಳನ್ನು ನೋಡುವ ಮೀನಿನಂತೆ ಸಮುದ್ರದಲ್ಲಿ ಈಜಾಡಬೇಕು ಎನ್ನುವ ಆಸಕ್ತಿ ಇರುವ ಯಾವುದೇ ವ್ಯಕ್ತಿ ಸ್ಕೂಬಾ ಡೈವಿಂಗ್ ಮಾಡಬಹುದು.

ನೀರಿನ ಅಡಿಯಲ್ಲಿ ಸಂವಹನಕ್ಕಾಗಿ ಬಳಸಬೇಕಾದ ವಿವಿಧ ಕೈ ಸನ್ನೆಗಳು, ಮೂಲ ಉಸಿರಾಟದ ತತ್ವಗಳು ಮತ್ತು ಉಪಕರಣಗಳನ್ನು ಹೇಗೆ ಬಳಸುವುದು ಎಂಬುದರ ಕುರಿತು ಮಾರ್ಗದರ್ಶಕರು ವಿದ್ಯಾರ್ಥಿಗಳಿಗೆ ತಿಳಿಸಿ ಕೊಡುತ್ತಾರೆ. ಕೈ ಚಿಹ್ನೆಗಳನ್ನು ತಪ್ಪಾಗಿ ಗ್ರಹಿಸಬಾರದು. ಕಿವಿಗಳ ಮೇಲಿನ ಒತ್ತಡವನ್ನು ಹೇಗೆ ಸಮನಾಗಿಸುವುದು ಎಂಬುದನ್ನು ಕಲಿಯುವುದು ಅವಶ್ಯಕ. ಕೆಲವು ನಿರ್ವಾಹಕರು ತೀರದ ಬಳಿ ಅಥವಾ ಈಜುಕೊಳದಲ್ಲಿ ಪ್ರಾತ್ಯಕ್ಷಿಕೆ ನೀಡಿ ವಿವರಿಸುತ್ತಾರೆ. ನಂತರ ಹವಳಗಳಿರುವ ತಾಣಕ್ಕೆ ದೋಣಿಯಲ್ಲಿ ಹೋಗಿ ಗೈಡ್ ಮತ್ತು ಹವ್ಯಾಸಿ ಮುಳುಗುಗಾರರು ಇಬ್ಬರೂ ನೀರಿಗೆ ಧುಮುಕಿ ನೀರೊಳಗಿನ ಮೀನುಗಳು ಮತ್ತು ಹವಳಗಳನ್ನು ಹತ್ತಿರದಿಂದ ವೀಕ್ಷಿಸಲು ಅನುವು ಮಾಡಿಕೊಡುತ್ತಾರೆ.

ನೇತ್ರಾಣಿ ದ್ವೀಪದಲ್ಲಿ ಹವಳದ ದಿಬ್ಬಗಳು, ಡಾಲ್ಪಿನ್ ಗಳು, ವಿವಿಧ ಜಾತಿಯ ಆಮೆಗಳು, ಚಿಟ್ಟೆ ಮೀನು,ಬಂದೂಕು ಮೀನು, ಗಿಳಿ ಮೀನು, ಹಾವು ಮೀನು ಮತ್ತು ಸಿಗಡಿ ಮೀನುಗಳು ಯತೇಚ್ಚವಾಗಿ ಕಂಡು ಬರುತ್ತವೆ. ಓರ್ಕಾ ಮತ್ತು ತಿಮಿಂಗಿಲಗಳನ್ನೂ ಸಹ ಇಲ್ಲಿ ನೋಡಬಹುದಾಗಿದ್ದು, ಅಪರೂಪದ ಜಲಚರಗಳ ಆಗರವಾಗಿದೆ. ಇವುಗಳನ್ನು ಸಮುದ್ರದಾಳಕ್ಕೆ ಇಳಿದು ವೀಕ್ಷಿಸಬಹುದಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ದೇವಾಲಯದಿಂದ ಸುಮಾರು 10 ನಾಟಿಕಲ್ ಮೈಲುಗಳಷ್ಟು (19 ಕಿ.ಮೀ) ದೂರದಲ್ಲಿರುವ ಪಾರಿವಾಳ ದ್ವೀಪ ಎಂದು ಕರೆಯಲ್ಪಡುವ ನೇತ್ರಾಣಿ ಮೇಲಿನಿಂದ ಹೃದಯ ಆಕಾರದಲ್ಲಿ ಕಾಣುತ್ತದೆ.ಇದನ್ನು “ಭಾರತದ ಡೈವಿಂಗ್‌ನ ಹೃದಯ” ಎಂದು ಪ್ರೀತಿಯಿಂದ ಕರೆಯಲಾಗುತ್ತದೆ. ಭಾರತೀಯ ನೌಕಾದಳವು ಸಮರಾಭ್ಯಾಸ ಮಾಡುವ ಪ್ರದೇಶವೂ ಇದಾಗಿದೆ. ಹಿಂದೆ ಈ ಭಾಗಕ್ಕೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿತ್ತು. ಆದರೆ ಜಿಲ್ಲಾಡಳಿತದ ದೂರ ದೃಷ್ಟಿಯಿಂದ ಇದೀಗ ಈ ಭಾಗದಲ್ಲಿ ಪ್ರವಾಸಿಗರಿಗೆ ತೆರಳಲು ಅವಕಾಶಗಳನ್ನು ನೀಡಿದೆ.

ಮುರ್ಡೇಶ್ವರ ಉತ್ತರ ಕನ್ನಡ ಜಿಲ್ಲೆಯಲ್ಲಿ ಬರುವ ಪಶ್ವಿಮ ಕರಾವಳಿ ಕಡಲ ತೀರ ಪ್ರದೇಶವಾಗಿದೆ. ಬಸ್,ರೈಲು ಹಾಗೂ ವಿಮಾನದಲ್ಲಿ ಸಹ ಇಲ್ಲಿಗೆ ಬರಬಹುದಾಗಿದೆ. ಗೋಕರ್ಣದಿಂದ ಕೇವಲ 54 ಕಿ.ಮೀ ದೂರದಲ್ಲಿದೆ.

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ದಕ್ಷಿಣಕ್ಕೆ 153 ಕಿ.ಮೀ ದೂರದಲ್ಲಿದೆ. ಇದು ದೇಶದ ಎಲ್ಲಾ ಪ್ರಮುಖ ನಗರಗಳಿಗೆ ಮತ್ತು ವಿದೇಶದಲ್ಲಿರುವ ಕೆಲವು ಸ್ಥಳಗಳಿಗೆ ಸಂಪರ್ಕ ಹೊಂದಿದೆ. ಮುರ್ಡೇಶ್ವರ ತಲುಪಲು ವಿಮಾನ ನಿಲ್ದಾಣದಿಂದ ಟ್ಯಾಕ್ಸಿಗಳು ಲಭ್ಯವಿದೆ.

ಮುರ್ಡೇಶ್ವರ ರೈಲು ನಿಲ್ದಾಣವು ಮಂಗಳೂರು ಮತ್ತು ಮುಂಬೈಗೆ ಸಂಪರ್ಕ ಹೊಂದಿದೆ. ಮಂಗಳೂರು ಪ್ರಮುಖ ರೈಲುಮಾರ್ಗವಾಗಿದ್ದು, ಇದು ಭಾರತದ ಎಲ್ಲಾ ಪ್ರಮುಖ ನಗರಗಳಿಗೆ ಸಂಪರ್ಕ ಹೊಂದಿದೆ. ಮುರ್ಡೇಶ್ವರ ರೈಲು ನಿಲ್ದಾಣವು ಪಟ್ಟಣದಿಂದ ಪೂರ್ವಕ್ಕೆ ಕೇವಲ 2 ಕಿ.ಮೀ ದೂರದಲ್ಲಿದೆ. ಬಸ್ಸುಗಳು ಮತ್ತು ಆಟೋರಿಕ್ಷಾಗಳ ಮೂಲಕ ಕೂಡ ಇಲ್ಲಿಗೆ ತಲುಪಬಹುದು.

ಖಾಸಗಿ ಮತ್ತು ಸರ್ಕಾರಿ ಬಸ್ಸುಗಳು ಮುರ್ಡೇಶ್ವರವನ್ನು ಮುಂಬೈ, ಕೊಚ್ಚಿ ಮತ್ತು ಬೆಂಗಳೂರಿಗೆ ಸಂಪರ್ಕಿಸುತ್ತವೆ.ಮುಂಬೈಯನ್ನು ಕೊಚ್ಚಿಗೆ ಸಂಪರ್ಕಿಸುವ ಎನ್‌ಎಚ್‌17 ರಲ್ಲಿ ನೆಲೆಗೊಂಡಿರುವ ಸಾಮಾನ್ಯ ಬಸ್‌ಗಳು ಎರಡು ನಗರಗಳ ನಡುವೆ ನಿಯಮಿತವಾಗಿ ಚಲಿಸುತ್ತವೆ ಮತ್ತು ಮಂಗಳೂರಿನ ಮೂಲಕ ಹಾದು ಹೋಗುತ್ತವೆ. ಬೆಂಗಳೂರು ಈ ಪ್ರದೇಶದ ಇತರ ಹಲವು ಪ್ರಮುಖ ನಗರಗಳಿಗೆ ಸಂಪರ್ಕ ಹೊಂದಿದೆ. ಮುರ್ಡೇಶ್ವರ ಪ್ರಸಿದ್ಧ ಪ್ರವಾಸಿ ಸ್ಥಳವಾದ್ದರಿಂದ ವಸತಿ ವ್ಯವಸ್ಥೆ ಸಾಕಷ್ಟಿದೆ. ನೇತ್ರಾಣಿ ಅಡ್ವೆಂಚರ್ ಸಂಸ್ಥೆಯ ಖಾಸಗಿ ಲಾಡ್ಜ್,ಸರ್ಕಾರಿ ವಸತಿಗೃಹಗಳು ಇವೆ.

ಇನ್ನು ಇಲ್ಲಿಗೆ ಬರುವವರು ಸ್ಕೂಬಾ ಡೈ ಜೊತೆಗೆ ಹೊನ್ನಾವರ ಭಾಗದ ಅಂತರಾಷ್ಟ್ರೀಯ ಬ್ಲೂ ಪ್ಲಾಗ್ ಮಾನ್ಯತೆ ಹೊಂದಿದ ಇಕೋ ಬೀಚ್ ಸೌಂದರ್ಯ ಸವಿಯುವ ಜೊತೆಗೆ ಕಾಂಡ್ಲಾವನದಲ್ಲಿ ವಾಕ್ ಸಹ ಮಾಡಬಹುದಾಗಿದೆ. ಪ್ರವಾಸಿಗರಿಗೆ ಅತೀ ಕಡಿಮೆ ವೆಚ್ಚದಲ್ಲಿ ಪ್ರವಾಸೋಧ್ಯಮ ಇಲಾಖೆ ಇಲ್ಲಿ ವ್ಯವಸ್ಥೆ ಕೂಡ ಮಾಡಿ ಕೊಟ್ಟಿದೆ.

Related Articles

Leave a Reply

Your email address will not be published. Required fields are marked *

Back to top button