Latest

ಜೋಯಿಡಾದ 90 ವರ್ಷದ ವೃದ್ಧನಿಗೆ ಒಲಿದು ಬಂದ ರಾಜ್ಯೋತ್ಸವ ಪ್ರಶಸ್ತಿ

ಕಾರವಾರ : ಕರ್ನಾಟಕ ಸರ್ಕಾರ 66 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯ ದಟ್ಟಡವಿಯಲ್ಲಿ ವಾಸ ಮಾಡುವ 90 ವರ್ಷದ ವೃದ್ಧರೊಬ್ಬರಿಗೆ ಪ್ರಶಸ್ತಿ ಘೋಷಿಸಿರುವುದು ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಅತೀ ಹಿಂದುಳಿದ ಪ್ರದೇಶವಾದ ಜೋಯಿಡಾ ತಾಲೂಕಿನ ನಾಗೋಡಾ ಗ್ರಾಮ ಪಂಚಾಯತಿಯ ಕಾರ್ಟೋಳಿ ಎಂಬ ಗ್ರಾಮದವರಾದ ಮಾದೇವ ವೇಳಿಪ ಜನಪದ ಕಲಾವಿದರು. ಜೊತೆಗೆ ನಾಟಿ ವೈದ್ಯರೂ ಸಹ ಆಗಿದ್ದಾರೆ. ಅತೀ ಹಿಂದುಳಿದ ಕುಣಬಿ ಬುಡಕಟ್ಟು ಸಮುದಾಯದ ಇವರು ಹುಟ್ಟಿದಾಗಿನಿಂದ ಕಾಡಿನೊಂದಿಗೆ ಬೆರೆತು ಅಲ್ಲಿನ ಪ್ರತಿ ಸಸ್ಯಗಳ ಬಗ್ಗೆ ಮಾಹಿತಿ ಯನ್ನು ತನ್ನ ಮಸ್ತಕದಲ್ಲಿ ಅಚ್ಚಾಗಿಸಿಕೊಂಡವರು. ಹಸಿರಿನೊಂದಿಗೆ ಜೀವನ ಕಟ್ಟಿಕೊಂಡ ಇವರು ಇಲ್ಲಿನ ಪರಿಸರ ಉಳಿಸಲು ತಮ್ಮದೇ ಆದ ಕಾಣಿಕೆ ನೀಡಿದ್ದಾರೆ.

ತಮ್ಮೂರಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ತುಡಿತ ಹೊಂದಿರುವ ಇವರು ಮಕ್ಕಳನ್ನು ಶಾಲೆಗೆ ಕಳುಹಿಸಬೇಕು, ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಹಂಬಲ ಹೊಂದಿದ್ದು, ಸ್ಥಳೀಯ ಜನರಿಗೆ ಕಾಡಿನ ಬಗ್ಗೆ ಮಹತ್ವ ಸಾರಲು ಜನಪದ ಹಾಡುಗಳನ್ನು ಕಟ್ಟಿ ಜನರಲ್ಲಿ ಪರಿಸರ ಜಾಗೃತಿ ಜೊತೆ ಶಿಕ್ಷಣದ ಜಾಗೃತಿ ಸಹ ಮೂಡಿಸುತ್ತಿದ್ದಾರೆ.

ಇಲ್ಲಿನ ಸಸ್ಯಗಳು, ಕಾಡಿನಲ್ಲಿ ಇರುವ ಪಕ್ಷಿ,ಪ್ರಾಣಿಗಳ ಸಂರಕ್ಷಣೆಗೆ ಪಣತೊಟ್ಟ ಇವರು ಊರಿನಲ್ಲಿ ಜಾಗೃತಿ ಮೂಡಿಸುತ್ತಾ ತನ್ನ ಇಡೀ ಜೀವನವನ್ನು ಇಲ್ಲಿ ಕಳೆದಿದ್ದಾರೆ. ತನ್ನೂರಿನಲ್ಲಿ ಸಿಗುವ ಹತ್ತಕ್ಕೂ ಹೆಚ್ಚು ಅಪರೂಪದ ಗೆಡ್ಡೆ, ಗೆಣಸುಗಳನ್ನು ಸಂರಕ್ಷಿಸಿ, ಬೆಳೆಸಿ ಇದರ ಮಹತ್ವವನ್ನು ದೇಶ ವಿದೇಶಕ್ಕೆ ಪಸರಿಸುವಲ್ಲಿ ಇವರ ಕಾಣಿಕೆ ಇದೆ. ಎಂದೂ ಕೂಡ ಪ್ರಚಾರವನ್ನು ಬಯಸದೇ ತನ್ನ ಜೀವಮಾನದ 90 ವರ್ಷಗಳನ್ನು ಕಾಡಿನೊಂದಿಗೆ ಬೆರೆತು ಕಳೆದಿದ್ದಾರೆ.

ಇಳಿ ವಯಸ್ಸಿನಲ್ಲಿಯೂ ಇವರ ಪರಿಸರ ಕಾಳಜಿಯನ್ನು ನೋಡಿ ಈ ಹಿಂದೆ ಖುದ್ದು ದಿವಂಗತ ನಟ ಪುನೀತ್ ರಾಜಕುಮಾರ್ ಸಹ ಇವರನ್ನು ಭೇಟಿಮಾಡಿ ಹೋಗಿದ್ದರು. ಇವರ ಜನಪದ ಸೇವೆಗಾಗಿ ನಾಲ್ಕು ವರ್ಷದ ಹಿಂದೆ ಜನಪದ ಪ್ರಶಸ್ತಿ ಸಹ ಲಭಿಸಿದೆ.

ಇವರಿಗೆ ಮೂರು ಗಂಡು ಮತ್ತು ನಾಲ್ಕು ಹೆಣ್ಣು ಮಕ್ಕಳು ಇದ್ದಾರೆ. ಪತ್ನಿ ಪಾರ್ವತಿ ವೇಳಿಪ 10 ವರ್ಷದ ಹಿಂದೆ ತೀರಿಕೊಂಡಿದ್ದಾರೆ. ಪ್ರಶಸ್ತಿ, ಸನ್ಮಾನಗಳಿಗಾಗಿಯೇ ಇಂದಿನ ದಿನಗಳಲ್ಲಿ ಲಾಭಿ ಮಾಡುವಾಗ ಯಾವುದೇ ಲಾಭಿ ಇಲ್ಲದೇ ತಳಮಟ್ಟದಲ್ಲಿ ಸಾಧನೆ ಮಾಡಿದ ಜನರನ್ನು ಸರಕಾರ ಗುರುತಿಸಿರುವುದು ನಿಜವಾಗಿಯೂ ಶ್ಲಾಘನೀಯವಾಗಿದೆ.

Related Articles

Leave a Reply

Your email address will not be published.

Back to top button