ಹುಬ್ಬಳ್ಳಿ: ಪವರ್ ಸ್ಟಾರ್ ಖ್ಯಾತಿಯ ನಟ ಪುನೀತ ರಾಜಕುಮಾರ ಅವರು ತಮ್ಮ ವೃತಿ ಬದುಕಿನಲ್ಲಿ ಹಾಗೂ ವೈಯಕ್ತಿಕ ಜೀವನದಲ್ಲೂ ಯಾವತ್ತೂ ಕೂಡಾ ಸ್ಟಾರ್ ಅನ್ನುವ ಹಮ್ಮು ಇಟ್ಟುಕೊಂಡು ಬಂದವರಲ್ಲ. ಅವರ ನಡವಳಿಕೆ, ಸ್ನೇಹಭಾವದ ಗುಣದಿಂದಲೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈಗ ಅವರು ವಿಧಿಯಾಟದ ಮುಂದೆ ತಮ್ಮ ಉಸಿರನ್ನು ನಿಲ್ಲಿಸಿದ್ದು, ಹುಬ್ಬಳ್ಳಿ-ಧಾರವಾಡ ಅವಳಿನಗರದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು.
ಉತ್ತರ ಕರ್ನಾಟಕ ಭಾಗದ ಯಾವುದೇ ಜಿಲ್ಲೆಗೆ ಹು-ಧಾ ಮಾರ್ಗವಾಗಿ ತೆರಳುತ್ತಿದ್ದರು ಅಂದರೆ, ಅವರ ಅದೊಂದು ಗದ್ದೆಗೆ ದರ್ಶನ ಪಡೆದುಕೊಳ್ಳದೇ ಮುಂದೆ ಸಾಗುತ್ತಿರಲಿಲ್ಲ. ಅದೂ ಉತ್ತರ ಕರ್ನಾಟಕದ ಪ್ರಸಿದ್ಧ ಮಠಗಳಲ್ಲಿ ಒಂದಾದ ಶ್ರೀ ಸಿದ್ದಾರೂಢರ ಮಠವಾಗಿದೆ. ಮಠಕ್ಕೆ ಬಂದು ಶ್ರೀ ಸಿದ್ದಾರೂಢರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದುಕೊಂಡೇ ತಮ್ಮ ಮುಂದಿನ ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದರು.
ದಿವಂಗತ ಡಾ. ರಾಜ್ಕುಮಾರ್ ಅವರು ಚಿತ್ರರಂಗ ಪ್ರವೇಶ ಮಾಡುವ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ಕೆಲ ದಿನ ನೆಲೆಸಿದ್ದರು. ಗುಬ್ಬಿ ವೀರಣ್ಣ ನಾಟಕ ಕಂಪನಿ ಇಲ್ಲಿ ಟೆಂಟ್ ಹಾಕಿತ್ತು. ಆಗ ರಾಜಕುಮಾರ್ ವಾಸ ಮಠದ ಬಳಿ ಇತ್ತು. ಪ್ರತಿದಿನ ಸಿದ್ಧಾರೂಢರ ಮಠಕ್ಕೆ ಅವರು ಭೇಟಿ ನೀಡುತ್ತಿದ್ದರು ಎಂದು ಇಲ್ಲಿಯ ಹಿರಿಯರು ಹೇಳುತ್ತಾರೆ. ಆ ಸಮಯದಲ್ಲೇ ರಾಜಕುಮಾರ್ ಅವರಿಗೆ ‘ಬೇಡರ ಕಣ್ಣಪ್ಪ’ ಚಿತ್ರಕ್ಕೆ ಆಫರ್ ಬಂದಿತ್ತು. ಬಳಿಕ ಸಿದ್ಧಾರೂಢ ಮಠಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಅಲ್ಲಿಂದ ಸಿದ್ಧಾರೂಢರ ಪರಮ ಶಿಷ್ಯ ಗೋವಿಂದ ಸ್ವಾಮಿಗಳ ಬಳಿ ಆಶೀರ್ವಾದ ಪಡೆದು ಚಿತ್ರೀಕರಣಕ್ಕೆ ಚೆನ್ನೈಗೆ ತೆರಳಿದ್ದರು. ಆಗ ರಾಜಕುಮಾರ್ ಕುಟುಂಬದ ಕೆಲವು ಸದಸ್ಯರು ಗೋವಿಂದಸ್ವಾಮಿ ಮಠದಲ್ಲಿ ಉಳಿದುಕೊಂಡಿದ್ದರು.
ಬೇಡರ ಕಣ್ಣಪ್ಪ ಚಿತ್ರ ಸೂಪರ್ ಡೂಪರ್ ಹಿಟ್ ಆಗಿತ್ತು. ತದ ನಂತರ ರಾಜ ಕುಟುಂಬ ಬೆಂಗಳೂರಿಗೆನಲ್ಲಿ ಸೆಟಲ್ ಆಗಿತ್ತಾದರೂ, ಡಾ.ರಾಜಕುಮಾರ್ ಮಾತ್ರ ಹುಬ್ಬಳ್ಳಿ ಶ್ರೀ ಸಿದ್ದಾರೂಢರ ಮಠಕ್ಕೆ ಬರುವುದನ್ನು ಮಾತ್ರ ನಿಲ್ಲಿಸಿರಲಿಲ್ಲ. ದಿವಂಗತ ಡಾ.ರಾಜಕುಮಾರ್ ಹುಬ್ಬಳ್ಳಿಯಲ್ಲಿ ಹಲವು ಚಿತ್ರಗಳು ಚಿತ್ರೀಕರಣಗೊಂಡ ತುಂಬಾ ಹಿಟ್ ಆಗಿವೆ.
ಪುನೀತ್ ರಾಜಕುಮಾರ್ ತಂದೆಯಂತೆಯೇ ಹುಬ್ಬಳ್ಳಿಯ ನಂಟು ಇಟ್ಟುಕೊಂಡು ಹಲವು ಚಿತ್ರಗಳನ್ನು ಮಾಡಿದ್ದು ಇಲ್ಲಿ ಸ್ಮರಿಸಬಹುದಾಗಿದೆ. ರಾಜ್ ಕುಟುಂಬದ ಅತ್ಯಂತ ಪ್ರೀತಿಯ ಕುಡಿಯಾಗಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹುಬ್ಬಳ್ಳಿ ಧಾರವಾಡದೊಂದಿಗಿನ ಅವಿನಾಭಾವ ಸಂಬಂಧವನ್ನು ಹಾಗೇ ಮುಂದುವರೆಸಿಕೊಂಡು ಬಂದಿದ್ದರು. ಪ್ರತಿ ಬಾರಿ ಉತ್ತರ ಕರ್ನಾಟಕ್ಕಕ್ಕೆ ಭೇಟಿ ನೀಡಿದಾಗೊಮ್ಮೆ ಸಿದ್ದಾರೂಢರ ಮಠದ ಉಭಯ ಗದ್ದುಗೆಯ ದರ್ಶನ ಮಾಡಿಕೊಂಡು ತೆರಳುತ್ತಿದ್ದರು.
ದಿವಂಗತ ನಟ ಪುನೀತ್ ರಾಜಕುಮಾರ್ ಪೇಡಾ ನಗರಿ ಖ್ಯಾತಿಯ ಧಾರವಾಡ ನುಗ್ಗಿಕೇರಿ ಶ್ರೀ ಅಂಜನೇಯ ದೇವರ ಭಕ್ತರಾಗಿದ್ದರು. ರಾಷ್ಟ್ರೀಯ ಹೆದ್ದಾರಿ ನಾಲ್ಕರ ಮೂಲಕ ಉತ್ತರ ಕರ್ನಾಟಕ ಭಾಗದ ಪ್ರಯಾಣದ ನಡೆಸುವ ಸಂದರ್ಭದಲ್ಲಿ ಹಲವು ಬಾರಿ ನುಗ್ಗಿಕೇರಿ ದೇವಸ್ಥಾನಕ್ಕೆ ಬಂದು ಅಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಮಾಡಿಕೊಂಡು ತೆರಳುತ್ತಿದ್ದರು.
ನುಗ್ಗಿಕೇರಿ ಹನುಮಂತನ ಪರಮ ಭಕ್ತರಾಗಿದ್ದ ಅವರು, ಧಾರವಾಡದಲ್ಲಿ ಯುವರತ್ನ ಚಿತ್ರೀಕರಣ ಸಂದರ್ಭದಲ್ಲಿ ಮೊದಲನೇ ಬಾರಿ ಅಂಜನೇಯನ ದರ್ಶನ ಮಾಡಿದರು. ಬಳಿಕ ಉತ್ತರ ಕರ್ನಾಟಕಕ್ಕೆ ಬಂದಾಗ ತಪ್ಪದೇ ದರ್ಶನ ಪಡೆಯುತ್ತಿದ್ದರು. ಕಳೆದ ಒಂದೂವರೆ ವರ್ಷದಲ್ಲಿ ಮೂರು ಬಾರಿ ಧಾರವಾಡದ ನುಗ್ಗಿಕೇರಿ ಗ್ರಾಮದ ಶ್ರೀ ಅಂಜನೇಯ ದೇವರ ದರ್ಶನ ಪಡೆದಿದ್ದರು. ಒಮ್ಮೆ ಅವರ ಪತ್ನಿ ಅಶ್ವಿನಿಯವರೊಂದಿಗೆ ಬಂದು ದೇವರ ದರ್ಶನ ಮಾಡಿದರು.
ಪುನೀತ್ ಅವರನ್ನು ಬಲ್ಲವರು ಹೇಳುವುದು ಒಂದೇ ಮಾತು ಅವರು ತಂದೆಗೆ ತಕ್ಕ ಮಗ, ಅವರ ನಡುವಳಿಕೆ ಸೇರಿದಂತೆ ಸರಳತೆ ಹಾಗೂ ಸ್ನೇಹಭಾವದ ಗುಣಗಳನ್ನು ಪ್ರತಿಯೊಬ್ಬರು ನೆನಪಿಸಿಕೊಳ್ಳುತ್ತಲ್ಲೇ ಇರುತ್ತಾರೆ. ಹಾಗೇ ಪುನೀತ್ ತಂದೆಯ ಪ್ರತಿಯೊಂದು ನಡೆಯನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದರು. ತಂದೆಯ ಭೇಟಿ ನೀಡುತ್ತಿದ್ದ ಪ್ರತಿಯೊಂದು ಸ್ಥಳಗಳಿಗೆ ಭೇಟಿ ನೀಡುವ ಮೂಲಕ ಹಾಗೂ ಅಲ್ಲಿರುವ ಸ್ಥಳೀಯರ ಜೊತೆಗೆ ಮಾತನಾಡುವ ಮೂಲಕ ಎಲ್ಲವನ್ನು ಪುನೀತ ಮುಂದುವರೆಸಿಕೊಂಡು ಬಂದಿದ್ದರು.
ತಂದೆಯಂತೆಯೇ ಪುನೀತ್ ಸಹ ಹುಬ್ಬಳ್ಳಿ ಧಾರವಾಡದಲ್ಲಿ ದೊಡ್ಮನೆ ಹುಡುಗ ಚಿತ್ರೀಕರಣ ಸಂದರ್ಭದಲ್ಲಿ, ಹುಬ್ಬಳ್ಳಿಯಲ್ಲಿ ಉಳಿದಾಗ ನಿತ್ಯ ಮಠಕ್ಕೆ ಸಿದ್ದಾರೂಢರ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಧಾರವಾಡದಲ್ಲಿ ಯುವರತ್ನ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ನುಗ್ಗಿಕೇರಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಬಳಿಕ ಯುವರತ್ನ ಚಿತ್ರದ ಪ್ರಮೋಶನ್ಗಾಗಿ ಕೆಲ ತಿಂಗಳ ಹಿಂದೆ ಹುಬ್ಬಳ್ಳಿಗೆ ಆಗಮಿಸಿದ್ದ ಅಪ್ಪು. ಗೋಕುಲ ರಸ್ತೆಯಲ್ಲಿನ ಅರ್ಬನ್ ಓಯಾಸಿಸ್ ಮಾಲ್ ಎದುರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ ಅವರ ಕೊನೆಯ ಹುಬ್ಬಳ್ಳಿ ಭೇಟಿಯಾಗಿತ್ತು.