ಘಾಟಿ ಸುಬ್ರಮಣ್ಯ ಬಳಿ ಮದುವೆ ಬಸ್ ಅಪಘಾತ; ಇಬ್ಬರ ಸಾವು, 15ಕ್ಕೂ ಹೆಚ್ಚು ಮಂದಿಗೆ ಗಾಯ
ದೇವನಹಳ್ಳಿ: ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯ ಘಾಟಿ ಸುಬ್ರಹ್ಮಣ್ಯ ಬಳಿ ಬಸ್ ಉರುಳಿ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟು 15 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ದುರಂತ ಸಂಭವಿಸಿದ್ದು, ದುರ್ಘಟನೆಯಲ್ಲಿ ಬೆಳಚಿಕ್ಕನಹಳ್ಳಿ ನಿವಾಸಿ ರಾಮಕೃಷ್ಣ ರೆಡ್ಡಿ (55) ಪಿ.ಎಸ್. ಕುಮಾರ್ (60) ಮೃತಪಟ್ಟಿದ್ದಾರೆ. ಗಾಯಾಳುಗಳಿಗೆ ದೊಡ್ಡಬಳ್ಳಾಪುರ ಹಾಗೂ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ.
ತೊಂಡೇಭಾವಿ ಸಮೀಪದ ಬೆಳಚಿಕ್ಕನಹಳ್ಳಿಯವರ ಮದುವೆ ಘಾಟಿಯ ಖಾಸಗಿ ಕಲ್ಯಾಣಮಂಟಪದಲ್ಲಿ ಶನಿವಾರ ನಡೆದಿದ್ದು, ರಾತ್ರಿ ಆರತಕ್ಷತೆ ನಡೆದಿತ್ತು. ಹೀಗಾಗಿ ಗ್ರಾಮದಿಂದ ಸಾಕಷ್ಟು ಮಂದಿ ಆರತಕ್ಷತೆಗೆ ಆಗಮಿಸಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ಬಸ್ಸಿನಲ್ಲಿ ವಾಪಾಸ್ ಹೋಗುವಾಗ, ಚಾಲಕನ ನಿಯಂತ್ರಣ ತಪ್ಪಿ ಮಾಕಳಿ ಹಾಗೂ ಘಾಟಿ ನಡುವಿನ ಹಳ್ಳದ ಬಳಿ ಬಸ್ ಉರುಳಿಬಿದ್ದಿದೆ.
ಈ ವೇಳೆ ಅದೇ ಮಾರ್ಗದಲ್ಲಿ ಬಂದ ಸ್ಥಳೀಯ ಯುವಕರು ಆಂಬುಲೆನ್ಸ್ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಆಂಬುಲೆನ್ಸ್ ಸಿಬ್ಬಂದಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆದರೆ, ಗಂಭೀರವಾಗಿ ಗಾಯಗೊಂಡಿದ್ದ ರಾಮಕೃಷ್ಣರೆಡ್ಡಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ರಾಮಕೃಷ್ಣರೆಡ್ಡಿ ಮೃತಪಟ್ಟಿದ್ದಾರೆ. ಕುಮಾರ್ (60) ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಉಳಿದ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದರು.
ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಬಸ್ ಬ್ರೇಕ್ ಫೇಲ್ ಆಗಿಲ್ಲ. ಚಾಲಕನ ನಿಯಂತ್ರಣ ತಪ್ಪಿ ನಡೆದಿರುವ ಸಾಧ್ಯತೆಯಿದೆ. ಆತ ಕುಡಿದು ವಾಹನ ಚಲಾಯಿಸಿದ್ದಾನೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ ಎಂದು ಪೋಲೀಸ್ ಮೂಲಗಳಿಂದ ತಿಳಿದುಬಂದಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.