Latest

ಶೃಂಗೇರಿಗೆ ರಾಷ್ಟ್ರಪತಿ ಭೇಟಿ; ಎರಡು ದಿನಗಳ ಬಂದ್ ಗೆ ಆದೇಶ

ಚಿಕ್ಕಮಗಳೂರು: ಶೃಂಗೇರಿ ದೇಗುಲಕ್ಕೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಶೃಂಗೇರಿ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು, ವ್ಯಾಪಾರ ವಹಿವಾಟನ್ನು ಸಂಪೂರ್ಣ ಬಂದ್ ಮಾಡಲು ಜಿಲ್ಲಾಡಳಿತ ದಿಢೀರ್ ಆದೇಶಿಸಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ರಾತ್ರೋರಾತ್ರಿ ಎರಡು ದಿನಗಳ ಬಂದ್ ಗೆ ದಿಢೀರ್ ಆದೇಶಿಸಲಾಗಿದೆ. ಇದರಲ್ಲಿ ಸ್ಪಷ್ಟವಾಗಿ ಜಿಲ್ಲಾಡಳಿತದ ವೈಫಲ್ಯತೆ ಎದ್ದು ಕಾಣಿಸುತ್ತಿದೆ. ರಾಷ್ಟ್ರಪತಿ ಭೇಟಿಗೆ ಯಾರೂ ವಿರೋಧ ವ್ಯಕ್ತಪಡಿಸುತ್ತಿಲ್ಲ. ನಕ್ಸಲ್ ಚಟುವಟಿಕೆಯಂತೂ ಯಾವತ್ತೋ ಸದ್ದಡಗಿ ಹೋಗಿದೆ. ಹೀಗಿರುವಾಗ, ರಾಷ್ಟ್ರಪತಿ ಆಗಮಿಸುವಾಗ ಭದ್ರತೆ ಕೊಡಲು ಸಾಧ್ಯವಾಗುವುದಿಲ್ಲವೇ? ಎಂಬುದು ಪ್ರಶ್ನೆಯಾಗಿದೆ.

ರಾಷ್ಟ್ರಪತಿ ಶೃಂಗೇರಿಗೆ ಬರುವುದು ಖುಷಿಯ ವಿಚಾರ. ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಆದರೆ ಇಲ್ಲಿ ಯಾವುದೋ ಭಾರೀ ಗಲಭೆ ನಡೆಯಬಹುದು ಎಂಬ ರೀತಿಯಲ್ಲಿ, ಇಷ್ಟೊಂದು ಬಿಗಿ ಬಂದೋಬಸ್ತ್ ಮಾಡುತ್ತಿರುವುದೇಕೆ? ಕಾಶ್ಮೀರದಲ್ಲಿರುವ ಪ್ರಕ್ಷುಬ್ಧ ವಾತಾವರಣವಿರುವಂತೆ ಶೃಂಗೇರಿಯನ್ನು ಬಿಂಬಿಸುತ್ತಿರುವುದೇಕೆ?

ಪ್ರವಾಸಿಗರಿಗೆ, ಸ್ಥಳೀಯರಿಗೆ ದೇವಸ್ಥಾನದ ಒಳಗೆ ನಿಷೇಧವನ್ನೂ ಹೇರಿ, ಲಾಡ್ಜಗಳನ್ನು ಬಂದ್ ಮಾಡಿಸಿ, ಪೀಠದ ಅಕ್ಕಪಕ್ಕದ ಮತ್ತು ಹೆಲಿಕ್ಯಾಪ್ಟರ್ ನಿಂದ ಇಳಿದು ಬರುವ ದಾರಿಯನ್ನು ಬಂದ್ ಮಾಡಲಾಗಿದೆ. ಇವೆಲ್ಲವೂ ಸರಿ. ಆದರೆ ಇಡೀ ಶೃಂಗೇರಿ ಪಟ್ಟಣವನ್ನೇ ಬಂದ್ ಗೆ ಆದೇಶಿಸಿರುವುದೇಕೆ? ಇಲ್ಲೇನು ಆಡಳಿತ ವ್ಯವಸ್ಥೆ ಇದೆಯೋ ಇಲ್ಲವೋ ಎಂದು ಜನ ಪ್ರಶ್ನಿಸತೊಡಗಿದ್ದಾರೆ.

ಈಗಾಗಲೇ ಎರಡು ವರ್ಷಗಳ ದೀರ್ಘಾವಧಿ ಕೋವಿಡ್ ಲಾಕ್​​ಡೌನ್​​​​ನಲ್ಲಿ ಎಷ್ಟೋ ವ್ಯಾಪಾರಿಗಳು ನಷ್ಟ ಹೊಂದಿ ಇನ್ನೂ ಚೇತರಿಸಿಕೊಂಡಿಲ್ಲ. ಈಗ ನವರಾತ್ರಿ ಸಂದರ್ಭದಲ್ಲಿ ಅಲ್ಪಸ್ವಲ್ಪ ವ್ಯಾಪಾರವಾಗುತ್ತಿದೆ. ಹೀಗಿರುವಾಗ ರಾಷ್ಟ್ರಪತಿಗಳ ಭೇಟಿ ಹೆಸರಲ್ಲಿ ಅದಕ್ಕೂ ಅಡ್ಡಿಪಡಿಸಲಾಗುತ್ತಿದೆ. ಜಿಲ್ಲಾಡಳಿತಕ್ಕೆ ನೈತಿಕತೆ ಇದ್ದರೆ, ಪಟ್ಟಣದ ವ್ಯಾಪಾರಿಗಳ ಎರಡು ದಿನದ ನಷ್ಟವನ್ನು ತುಂಬಿಕೊಡಲಿ ಎಂಬ ಒತ್ತಾಯಗಳು ಕೇಳಿಬಂದಿವೆ.

ಶೃಂಗೇರಿಯ ಗಾಂಧೀ ಮೈದಾನದಲ್ಲಿ ಈಗಾಗಲೇ ಮರಗಳನ್ನು ಕಡಿದು ಹೆಲಿಪ್ಯಾಡ್ ನಿರ್ಮಾಣ ಮಾಡಿದ್ದೂ ವ್ಯರ್ಥವಾಗಿದೆ. ಅಲ್ಲಿ ಲ್ಯಾಂಡಿಂಗ್ ಮಾಡಲು ಸಾಧ್ಯವಿಲ್ಲವೆಂದು ಹಿಂದೆ ನಿಲುಗಡೆಯಾಗುತ್ತಿದ್ದ ಹೆಲಿಪ್ಯಾಡ್ ಸ್ಥಳವನ್ನೇ ಆಯ್ಕೆ ಮಾಡಲಾಗಿದೆ. ಗಾಂಧೀ ಮೈದಾನದ ಬಳಿ ಮರಗಳನ್ನು ಕಡಿದಿರುವುದು ಪರಿಸರವಾದಿಗಳ ಆಕ್ರೋಶಕ್ಕೂ ಕಾರಣವಾಗಿದೆ.

“ರಾಷ್ಟ್ರಪತಿ ಆಗಮಿಸುವ ವೇಳೆಯಲ್ಲಿ ಕೆಲಕಾಲ ಬೇಕಿದ್ದರೆ ಭದ್ರತೆಗಾಗಿ ಬಂದ್ ಮಾಡಿಸಲಿ. ಆದರೆ ಎರಡು ದಿನಗಳವರೆಗೆ ಬಂದ್ ಮಾಡಲು ಆದೇಶಿಸರುವುದೇಕೆ? ಸುಖಾಸುಮ್ಮನೆ ವ್ಯಾಪಾರ ವಹಿವಾಟಿಗೆ ಅಡ್ಡಿಪಡಿಸುವುದೇಕೆ?” ಎಂದು ಸ್ಥಳೀಯರಾದ ರಂಜಿತ್ ಶೃಂಗೇರಿ ಪ್ರಶ್ನಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button