Latest
ಮೈಸೂರಿನಲ್ಲಿ ಮಳೆ ನಡುವೆ ಒಂದು ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಿದ ತುಂಬು ಗರ್ಭಿಣಿ ಮಹಿಳೆ
ಮೈಸೂರು: ಮಳೆಯ ನಡುವೆಯೂ ತುಂಬು ಗರ್ಭಿಣಿಯೋರ್ವರು ಹೆರಿಗೆ ನೋವಿನಲ್ಲಿ 1 ಕಿ.ಮೀ ನಡೆದು ನಂತರ ಗರ್ಭಿಣಿಯು ಆ್ಯಂಬ್ಯುಲೆನ್ಸ್ ಏರಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಹೆಚ್.ಡಿ.ಕೋಟೆ ತಾಲೂಕಿನ ಬೊಮ್ಮಲಾಪುರ ಹಾಡಿಯ ರಂಜಿತ ಎಂಬ ಗರ್ಭಿಣಿ ಮಹಿಳೆ ಆ್ಯಂಬುಲೆನ್ಸ್ಗಾಗಿ ಹೆರಿಗೆ ನೋವು ಸಹಿಸಿಕೊಂಡು ಕಾಡುದಾರಿಯಲ್ಲಿ ಮಳೆಯನ್ನೂ ಲೆಕ್ಕಿಸದೇ 1 ಕಿ.ಮೀ. ನಡೆದಿದ್ದಾರೆ.
ಬೊಮ್ಮಲಾಪುರ ಹಾಡಿಗೆ ರಸ್ತೆ ಸಂಪರ್ಕ ಇಲ್ಲದ ಹಿನ್ನೆಲೆ, ಇಂದಿಗೂ ಹಾಡಿ ಮಂದಿ ಕಾಲುನಡಿಗೆಯಲ್ಲೇ ಕಾಡಿನ ಹಾದಿಯಲ್ಲಿ ಕ್ರೂರ ಮೃಗಗಳ ಕಾಟದ ನಡುವೆಯೂ ಜೀವದ ಹಂಗು ತೊರೆದು ಬದುಕಬೇಕಾದ ಸ್ಥಿತಿ ಇದೆ. ರಂಜಿತ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಆಶಾ ಕಾರ್ಯಕರ್ತೆ ಹಾಗೂ ಹಾಡಿ ಮಂದಿಯ ಸಹಕಾರದಿಂದ ಮಳೆಯಲ್ಲಿ ಕೊಡೆಯ ಆಶ್ರಯದೊಂದಿಗೆ ಹಾಡಿ ಹೊರಗಿನ ಮುಖ್ಯರಸ್ತೆವರೆಗೆ ನಡೆದು ಆ್ಯಂಬುಲೆನ್ಸ್ ಏರಿದ್ದಾರೆ.
ಸರಗೂರು ತಾಲೂಕಿನ ವಿವೇಕಾನಂದ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ರಂಜಿತ ಜನ್ಮ ನೀಡಿದ್ದು, ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.