ಕೊವಿಡ್ ಲಸಿಕೆ ಸಂಭ್ರಮಾಚರಣೆ : ಕಾಂಗ್ರೆಸ್-ಬಿಜೆಪಿ ಟ್ವಿಟ್ ವಾರ್
ಬೆಂಗಳೂರು: ದೇಶದ ನೂರು ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡಿಕೆ ಸಂಭ್ರಮಾಚರಣೆ ಹಮ್ಮಿಕೊಂಡಿರುವ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳ ವರ್ತನೆಯನ್ನು ಕಾಂಗ್ರೆಸ್ ಪ್ರಶ್ನಿಸಿದೆ. ಈ ಸಂಬಂಧ ಎರಡೂ ಪಕ್ಷಗಳ ಮುಂಚೂಣಿ ನಾಯಕರ ನಡುವೆ ಟ್ವಿಟ್ ವಾರ್ ನಡೆದಿದೆ.
ಕೊರೋನಾ ಲಸಿಕೆ ಪಡೆಯುವ ಮುನ್ನವೇ ಲಸಿಕೆ ಪಡೆದಿದ್ದಾರೆ ಎಂಬ ಸುಳ್ಳು ಸಂದೇಶ ಜನರಿಗೆ ತಲುಪುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವಿಟ್ ಮೂಲಕ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇದು ಬಿಜೆಪಿ ಆಡಳಿತವಿರುವ ಉತ್ತರಪ್ರದೇಶ, ಗುಜರಾತ್, ಕರ್ನಾಟಕ ರಾಜ್ಯಗಳ ಆತಂಕಕಾರಿ ಸುದ್ದಿ! ಕೊರೊನಾ ಲಸಿಕೆ ಪಡೆಯುವ ಮೊದಲೇ ವ್ಯಾಕ್ಸಿನೇಷನ್ ಪಡೆದ ಸುಳ್ಳು ಸಂದೇಶ ಜನರಿಗೆ ಬರುತ್ತಿದೆ. ರೋಗಿಗಳ ಸಾವಿನ ನಂತರವೂ ಲಸಿಕೆ ಪಡೆದ ಮೆಸೇಜ್ ಬರ್ತಿದೆ! ಇದು ದೇಶದಲ್ಲಿ ಅತಿಹೆಚ್ಚು ಲಸಿಕೆ ನೀಡಿದ್ದೇವೆಂದು ಸುಳ್ಳು ಹೇಳುವ ಉದ್ದೇಶಪೂರ್ವಕ ಕುತಂತ್ರವೇ? ಎಂದು ಶಿವಕುಮಾರ್ ಟ್ವಿಟ್ ಮೂಲಕ ಪ್ರಶ್ನಿಸಿದ್ದಾರೆ.
ಈ ನಡುವೆ ಆರಂಭದಲ್ಲಿ ಉಚಿತವಾಗಿ ಕೋವಿಡ್-19 ಲಸಿಕೆ ನೀಡುವ ಹೊಣೆಗಾರಿಕೆಯಿಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನುಣುಚಿಕೊಂಡಿತ್ತು. ಆದರೆ ಈಗ ಬಿಜೆಪಿ ಹುಸಿ ಸಂಭ್ರಮಪಡುತ್ತಿದೆ ಎಂದು ಪ್ರದೇಶ ಕಾಂಗ್ರೆಸ್ ಟೀಕಿಸಿದೆ.
ಲಸಿಕೆ ವಿತರಣೆಯ ಪ್ರಗತಿಗೆ ವಿಶ್ವವೇ ಬೆರಗಾಗಿದ್ದರೂ ಕಾಂಗ್ರೆಸ್ ಕೊಂಕು ನುಡಿಯುತ್ತಿದೆ ಎಂದು ರಾಜ್ಯ ಬಿಜೆಪಿ ಟ್ವಿಟಿಗೆ ಪ್ರತ್ಯುತ್ತರವಾಗಿ ಕೆಪಿಸಿಸಿ ಈ ಟ್ವಿಟ್ ಮಾಡಿದೆ.
ಉಚಿತ ಲಸಿಕೆ ನೀಡುವ ಹೊಣೆಗಾರಿಕೆಯಿಂದ ಕೇಂದ್ರ ಸರ್ಕಾರ ಜಾರಿಕೊಂಡಿತ್ತು, ಇದಕ್ಕೆ ಸುಪ್ರೀಂ ಕೋರ್ಟ್ ಚಾಟಿ ಬೀಸಿತ್ತು. ಕೋವಿಡ್ನಿಂದ ಮೃತರಾದವರಿಗೆ ಪರಿಹಾರ ನೀಡಲೂ ನಿರಾಕರಿಸಿದ್ದರು, ಆಗಲೂ ಕೋರ್ಟ್ ಚಾಟಿ ಬೀಸಿತ್ತು. ಆಮ್ಲಜನಕ ನೀಡಲು ವಿಫಲರಾಗಿದ್ದರು, ಇದಕ್ಕೂ ಕೋರ್ಟ್ ಚಾಟಿ ಬೀಸಿತ್ತು. ಆದರೆ ಈಗ ಹುಸಿ ಸಂಭ್ರಮಪಡುತ್ತಿರುವುದು ಮಾತ್ರ ಬಿಜೆಪಿ ! ಎಂದು ತನ್ನ ಟ್ವಿಟ್ ನಲ್ಲಿ ಟಾಂಗ್ ನೀಡಿದೆ.
ಇದಕ್ಕೂ ಮುನ್ನ, ಕೋವಿಡ್ 19 ಲಸಿಕೆ ವಿತರಣೆಯಲ್ಲಿ ಭಾರತದ ಪ್ರಗತಿಗೆ ಇಡೀ ವಿಶ್ವವೇ ಬೆರಗಾಗಿದ್ದರೂ ಕಾಂಗ್ರೆಸ್ ನಾಯಕರು ಮಾತ್ರ ಕೊಂಕು ನುಡಿಯುವುದರಲ್ಲಿ ನಿರತರಾಗಿದ್ದಾರೆ ಎಂದು ಬಿಜೆಪಿ ಟ್ವಿಟ್ ಮಾಡಿತ್ತು.
ಭಾರತದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಉದ್ಯಮಿ ಬಿಲ್ ಗೇಟ್ಸ್ ಮಾಡಿರುವ ಟ್ವೀಟ್ ಉಲ್ಲೇಖಿಸಿ ‘ರಾಹುಲ್ ಗಾಂಧಿ ಹಾಗೂ ಡಿ.ಕೆ.ಶಿವಕುಮಾರ್ ಅವರೇ, ಲಸಿಕೆ ವಿತರಣೆಯಲ್ಲಿ ಭಾರತ ಸಾಧಿಸಿದ ಪ್ರಗತಿಗೆ ವಿಶ್ವವೇ ಬೆರಗಾಗಿದೆ. ಜಾಗತಿಕ ಗಣ್ಯರೇ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ಸಿಗರು ಕೊಂಕು ನುಡಿಯುವುದರಲ್ಲಿ ತಲ್ಲೀನರಾಗಿದ್ದಾರೆ. ನೀವು ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದೀರಾ’ ಎಂದು ಬಿಜೆಪಿ ಪ್ರಶ್ನಿಸಿತ್ತು.
ದೇಶದ 139 ಕೋಟಿ ಜನರಲ್ಲಿ 29 ಕೋಟಿ ಜನರಿಗೆ ಮಾತ್ರ ಎರಡು ಡೋಸ್ ಕೊರೊನಾ ಲಸಿಕೆ ನೀಡಿರುವ ನರೇಂದ್ರ ಮೋದಿ ಸರ್ಕಾರ, ಅವಸರದಿಂದ 100 ಕೋಟಿ ಲಸಿಕೆ ನೀಡಿಕೆಯ ಸಂಭ್ರಮಾಚರಣೆಯ ಖಾಲಿ ತಟ್ಟೆ ಬಡಿಯುತ್ತಿರುವುದು ಹಾಸ್ಯಾಸ್ಪದ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವಿಟ್ ಗೆ ಟ್ವಿಟ್ ಮೂಲಕವೇ ಬಿಜೆಪಿ ಸುದೀರ್ಘ ಪ್ರತ್ಯುತ್ತರ ನೀಡಿದೆ.
ಕರ್ನಾಟಕದಲ್ಲಿ 45 ವರ್ಷ ಮೇಲ್ಪಟ್ಟವರ ಪೈಕಿ 1.66 ಕೋಟಿ ಜನರಿಗೆ ಮೊದಲ ಡೋಸ್ ಹಾಗೂ 1.07 ಕೋಟಿ ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಲಸಿಕೆ ವಿರುದ್ಧ ಆರಂಭದಲ್ಲಿ ಅಪಪ್ರಚಾರ ಮಾಡಿದ ಕಾಂಗ್ರೆಸ್ ಈಗ ದೇಶದ ಜನರ ಸಂಭ್ರಮವನ್ನೂ ಸಹಿಸಿಕೊಳ್ಳುತ್ತಿಲ್ಲ. ಸಿದ್ದರಾಮಯ್ಯನವರೇ, ನೀವೇಕೆ ಹೀಗೆ’ ಎಂದು ಟ್ವೀಟ್ನಲ್ಲಿ ಬಿಜೆಪಿ ಪ್ರಶ್ನಿಸಿದೆ.
‘ರಾಜ್ಯದಲ್ಲಿ ಇದುವರೆಗೆ 6.21 ಕೋಟಿಗೂ ಹೆಚ್ಚು ಲಸಿಕೆ ವಿತರಿಸಲಾಗಿದೆ. 4.15 ಕೋಟಿಗೂ ಹೆಚ್ಚು ಜನರಿಗೆ ಮೊದಲ ಡೋಸ್ ಹಾಗೂ 2.06 ಕೋಟಿಗೂ ಅಧಿಕ ಜನರಿಗೆ ಎರಡನೇ ಡೋಸ್ ನೀಡಲಾಗಿದೆ. 18 ರಿಂದ 44 ವರ್ಷದೊಳಗಿನವರಿಗೆ 2.31 ಕೋಟಿಗೂ ಅಧಿಕ ಮೊದಲ ಡೋಸ್ ನೀಡಲಾಗಿದೆ. ಸಿದ್ದರಾಮಯ್ಯನವೇ ನಿಮಗೂ 2 ಡೋಸ್ ಲಸಿಕೆ ಸಿಕ್ಕಿದೆಯಲ್ಲವೇ’ ಎಂದು ಇನ್ನೊಂದು ಟ್ವೀಟ್ನಲ್ಲಿ ಉಲ್ಲೇಖಿಸಲಾಗಿದೆ.
ವಿವಿಧ ದೇಶಗಳು ವಿತರಿಸಿದ ಲಸಿಕೆ ಪ್ರಮಾಣ ಹೀಗಿದೆ. ಅಮೆರಿಕ – 41.01 ಕೋಟಿ, ಜಪಾನ್ – 18.21 ಕೋಟಿ, ಜರ್ಮನಿ – 11.12 ಕೋಟಿ, ರಷ್ಯಾ – 9.98 ಕೋಟಿ, ಬ್ರಿಟನ್ – 9.53 ಕೋಟಿ. ಆದರೆ ಇದೇ ಅವಧಿಯಲ್ಲಿ ಭಾರತ 100 ಕೋಟಿ ಡೋಸ್ ಲಸಿಕೆ ವಿತರಿಸಿದೆ. ದೇಶವಾಸಿಗಳ ಆರೋಗ್ಯ ರಕ್ಷಣೆಗಾಗಿ ಮಾಡಿದ ಕೆಲಸಕ್ಕಾಗಿ ಸಂಭ್ರಮಿಸುವುದು ತಪ್ಪೇ ಸಿದ್ದರಾಮಯ್ಯ’ ಎಂದೂ ಬಿಜೆಪಿ ಪ್ರಶ್ನಿಸಿದೆ.
‘ಸಿದ್ದರಾಮಯ್ಯನವರೇ, ಕೋವಿಡ್ ದುರಿತ ಕಾಲದಲ್ಲಿ ಮಾನವೀಯ ನೆಲೆಯಲ್ಲಿ 95ಕ್ಕೂ ಹೆಚ್ಚು ದೇಶಗಳಿಗೆ ಭಾರತ ಲಸಿಕೆ ಪೂರೈಸಿದೆ. ವಿಶ್ವಸಂಸ್ಥೆಯೂ ಸೇರಿದಂತೆ ಹಲವು ರಾಷ್ಟ್ರಗಳು ಭಾರತದ ಈ ನಡೆಯನ್ನು ಶ್ಲಾಘಿಸಿವೆ. ಇದನ್ನೂ ನೀವು ವೈಫಲ್ಯ ಎಂದು ಪರಿಗಣಿಸುವಿರಾ? ಇದು ದೃಷ್ಟಿದೋಷವೋ, ಹೃದಯದ ದೋಷವೋ’ ಎಂದಿದೆ.