Latestಅಂಕಣಗಳು

ಮೋದಿ V/s ದೀದಿ; ಬಿಜೆಪಿಗೆ ಪ್ರಬಲ ಪ್ರತಿಸ್ಪರ್ಧಿ ಟಿಎಂಸಿ

ಕಿರುಗುಂದ ರಫೀಕ್

ನವದೆಹಲಿ: ಟಿಎಂಸಿ ನಾಯಕಿ, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಮುಂಬರುವ 2024ಕ್ಕೆ ಪ್ರಧಾನಿ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದು, ರಾಷ್ಟ್ರದಲ್ಲಿ ಬಿಜೆಪಿ ವಿರೋಧಿ ಕೂಟದ ನಾಯಕತ್ವ ವಹಿಸುವ ಹಾಗೂ ಪ್ರಧಾನಿ ಮೋದಿಗೆ ಪರ್ಯಾಯ ನಾಯಕಿಯಾಗಿ ಬೆಳೆಯಬಹುದಾದ ಸಾಧ್ಯತೆ ದಟ್ಟವಾಗಿದೆ.

ಇದಕ್ಕೆ ಪೂರ್ವಭಾವಿ ಸಿದ್ಧತೆಗಳು ಆರಂಭವಾಗಿವೆ. ಈಗಾಗಲೇ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ (ಎಐಟಿಎಂಸಿ) ಪಕ್ಷದ ವಿಸ್ತರಣಾ ಚಟುವಟಿಕೆ ಬಿರುಸುಗೊಂಡಿದ್ದು, ಗೋವಾ, ಮೇಘಾಲಯ ಮಾಜಿ ಕಾಂಗ್ರೆಸ್ ನಾಯಕರು ಎಐಟಿಎಂಸಿ ಸೇರ್ಪಡೆಯಾಗಿರುವುದು ವರದಿಯಾಗಿದೆ.

ಕಾಂಗ್ರೆಸ್ ನಾಯಕತ್ವದ ಮೇಲೆ ಅಸಮಾಧಾನ ಹೊಂದಿದ ಬಹುಪಾಲು ನಾಯಕರು ಟಿಎಂಸಿ ಬಗ್ಗೆ ಹೆಚ್ಚಿನ ಒಲವು ತೋರುತ್ತಿರುವುದು ಮಾತ್ರವಲ್ಲದೆ, ಇತರೆ ಪಕ್ಷಗಳು ಕೂಡ ದೀದಿಯ ನಾಯಕತ್ವವನ್ನು ಸಂಪೂರ್ಣ ಒಪ್ಪುವ ಮೂಲಕ ಒಗ್ಗಟ್ಟಾಗಿ, ದೇಶದ ಅಧಿಕಾರದ ಚುಕ್ಕಾಣಿಯನ್ನು ದೀದಿ ಕೈಗೆ ಕೊಟ್ಟರೂ ಆಶ್ಚರ್ಯವೇನಿಲ್ಲ.

ಉಪಚುನಾವಣೆಯ ಭರ್ಜರಿ ಗೆಲುವಿನಿಂದ ದೀದಿಗೆ ಮತ್ತಷ್ಟು ಬಲ:

ಪಶ್ಚಿಮ ಬಂಗಾಳದಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಬಹುಮತ ಸಾಧಿಸಿ ಅಧಿಕಾರ ಹಿಡಿದಿದ್ದರೂ ಸಹ ತಮ್ಮ ಕ್ಷೇತ್ರ ನಂದೀಪುರದಲ್ಲಿ ಸೋತಿದ್ದ ದೀದಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಬೇಕಾದ ಅನಿವಾರ್ಯತೆ ಎದುರಾಗಿ, ಭವಾನಿಪುರದಲ್ಲಿ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿರುವುದು ಮತ್ತಷ್ಟು ಬಲ ಬಂದಂತಾಗಿ ದೀದಿಯ ಆತ್ಮವಿಶ್ವಾಸ ಹೆಚ್ಚಿಸಿದೆ.

ಒಟ್ಟಿನಲ್ಲಿ ಬಿಜೆಪಿ ವಿರೋಧಿ ಕೂಟದಲ್ಲಿ ಟಿಎಂಸಿ ಬಹುದೊಡ್ಡ ಶಕ್ತಿಯಾಗಿ ರೂಪುಗೊಳ್ಳುತ್ತಿರುವುದು ಸ್ಪಷ್ಟವಾಗಿ ಗೋಚರವಾಗಿದೆ. ಟಿಎಂಸಿಯ ಪ್ರಾಭಲ್ಯತೆ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ತಿರುವು ಉಂಟುಮಾಡುವ, ಬಿಜೆಪಿಗೆ ಪ್ರಬಲ ಪ್ರತಿಸ್ಪರ್ಧಿಯಾಗುವ ಸಾಧ್ಯತೆ ದಟ್ಟವಾಗಿದೆ.

ಕಾಂಗ್ರೆಸ್ ನಾಯಕತ್ವವನ್ನು ಒಪ್ಪದ ಟಿಎಂಸಿ

ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ನಾಯಕತ್ವದಲ್ಲೇ ಚುನಾವಣೆ ಎದುರಿಸಲು ಮತ್ತೆ ಪ್ರಯತ್ನಿಸಿದರೆ ವಿರೋಧಿ ಕೂಟ ಬಲವರ್ಧನೆಗೊಳ್ಳಲು ಸಾಧ್ಯವಾಗದು ಎಂಬ ಅಭಿಪ್ರಾಯಗಳು ಟಿಎಂಸಿ ಮುಖಂಡರಿಂದ ವ್ಯಕ್ತವಾಗಿದೆ.

ಕಳೆದ ಏಳು ವರ್ಷಗಳಲ್ಲಿ ಟಿಎಂಸಿ ಮಾತ್ರವೇ ಬಿಜೆಪಿಯನ್ನು ಸೋಲಿಸಿದೆ. ಕಾಂಗ್ರೆಸ್ ಪಕ್ಷ ಬಿಜೆಪಿ ಎದುರು ಸೋಲುತ್ತಲೇ ಬಂದಿದೆ ಎಂದು ಟಿಎಂಸಿ ಮುಖಂಡರು ಹೇಳಿಕೊಂಡಿದ್ದಾರೆ.

ಇತ್ತೀಚಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಗೆ ಸವಾಲೊಡ್ಡಲು ಸಾಧ್ಯವಾಗಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಬಗ್ಗೆ ಅಸಮಾಧಾನ ಹೊಂದಿರುವ ಎಲ್ಲ ಇತರೆ ಪಕ್ಷಗಳ ಮುಖಂಡರಿಗೆ ಮಮತಾ ಮಾತ್ರವೇ ಸರ್ವಸಮ್ಮತ ನಾಯಕಿಯಾಗಬಲ್ಲರು. ಬಿಜೆಪಿಯೇತರ ಮೈತ್ರಿಕೂಟಕ್ಕೆ ಮಮತಾ ಬ್ಯಾನರ್ಜಿ ನಾಯಕತ್ವವೇ ಬೇಕಾಗಿದೆ ಎಂದು ಟಿಎಂಸಿ ಸಂಸದ ಸುದೀಪ್ ಬಂಡೋಪಾಧ್ಯಾಯ ಹೇಳಿಕೆ ನೀಡಿದ್ದಾರೆ.

Related Articles

Leave a Reply

Your email address will not be published.

Back to top button