Latest

ಅನಂತಕುಮಾರ್ ಹೆಗಡೆ ಸಂವಿಧಾನ ಬದಲಾಯಿಸೋ ಮಾತಾಡಿದಾಗ ಬಿಜೆಪಿ ದಲಿತ ನಾಯಕರೆಲ್ಲಿದ್ದರು: ಸಿದ್ಧರಾಮಯ್ಯ ಪ್ರಶ್ನೆ

ಬೆಂಗಳೂರು: ಸಂವಿಧಾನ ಬದಲಾವಣೆ ಮಾಡುವುದಕ್ಕೇ ನಾವು ಅಧಿಕಾರಕ್ಕೆ ಬಂದಿರುವುದು ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆ ನೀಡುವಾಗ ಬಿಜೆಪಿಯಲ್ಲಿರುವ ದಲಿತ ನಾಯಕರೆಲ್ಲ ಎಲ್ಲಿ ಹೋಗಿದ್ದರು? ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.

ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ರವರು ರಚನೆ ಮಾಡಿರುವ ಸಂವಿಧಾನದಲ್ಲಿ ಎಲ್ಲರಿಗೂ ಸಾಮಾಜಿಕ ನ್ಯಾಯದ ಸಮಾನತೆಯನ್ನು ಪ್ರತಿಪಾದನೆ ಮಾಡಲಾಗಿದೆ. ಅಂತಹ ಸಂವಿಧಾನವನ್ನೇ ಬದಲಾವಣೆ ಮಾಡಬೇಕು ಎಂದು ಬಿಜೆಪಿಯವರು ಹೇಳುತ್ತಾರೆ. ಅಂತಹ ಪಕ್ಷಕ್ಕೆ ಗೋವಿಂದ ಕಾರಜೋಳ, ಜಿಗಜಿಣಗಿ, ನಾರಾಯಣಸ್ವಾಮಿ ಸೇರಿದಂತೆ ಹಲವಾರು ದಲಿತ ನಾಯಕರು ಹೋದರು. ಅಲ್ಲೀಗ ಎಂಎಲ್‌ಎ, ಎಂಪಿಗಳೂ ಆಗಿದ್ದಾರೆ. ಇವರೆಲ್ಲರು ಬಾಬಾ ಸಾಹೇಬ್ ಅಂಬೇಡ್ಕರ್‌ರವರಿಗೆ ಅಗೌರವ ಸೂಚಿಸುವ, ಸಂವಿಧಾನಕ್ಕೆ ಬೆಲೆ ಕೊಡದ ಪಕ್ಷಕ್ಕೆ ಅದು ಕೂಡ ಅವರ ಸ್ವಾರ್ಥಕ್ಕಾಗಿ ಹೋಗಿದ್ದಾರೆ. ಎಂದು ಸಿಂಧಗಿಯ ಮಾದಿಗ ದಂಡೋರ ಸಮುದಾಯದ ಸಮಾವೇಶದಲ್ಲಿಯೇ ಹೇಳಿದ್ದೆ ಎದರು.

ದಲಿತರ ವಿರುದ್ಧ ಮಾತನಾಡಿದ್ದರೆ, ಅವರು ಅಂದೇ, ಅಲ್ಲೇ ಪ್ರತಿಭಟನೆ ನಡೆಸಬಹುದಿತ್ತು. ಅಂದು ಸಮಾವೇಶದಲ್ಲಿ ನೂರಾರು ಜನರಿದ್ದರು. ಅಂದು ನಾನು ನೀಡಿದ ಹೇಳಿಕೆಗೆ ನೆರೆದವರೆಲ್ಲರೂ ಸಹಮತ ವ್ಯಕ್ತಪಡಿಸಿದ್ದರು. ಚಪ್ಪಾಳೆ ತಟ್ಟಿದ್ದರು. ಇಂದು ರಾಜಕೀಯ ಪ್ರೇರಿತವಾಗಿ ನನ್ನ ಹೇಳಿಕೆಗೆ ಬಣ್ಣಕಟ್ಟಿ ಹೇಳಲಾಗುತ್ತಿದೆ ಅಷ್ಟೆ. ಸಂವಿಧಾನಕ್ಕೆ ವಿರುದ್ಧ ಇರುವವರು ಇವರು. ನಾವು ಸಂವಿಧಾನದ ಪರ ಇರುವವರ ಪರ ಇರುವಂತಹವರು. ದಲಿತರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಅವರು ಸಾಮಾಜಿಕವಾಗಿ ಆರ್ಥಿಕವಾಗಿ ಸದೃಢರಾಗಬೇಕು ಅನ್ನುವುದರಲ್ಲಿ ನಾನು ಮೊದಲಿಗ ಎಂದು ತಿಳಿಸಿದರು.

ಈ ದೇಶಕ್ಕೆ ಅಂಬೇಡ್ಕರ್ ಅನ್ನುವ ಒಬ್ಬ ಮಹಾನುಭಾವ ಸಂವಿಧಾನ ಕೊಡದೆ ಹೋಗಿದ್ದರೆ ದಲಿತರಿಗೆ ಇಷ್ಟು ರಕ್ಷಣೆ ಸಿಗಲು ಸಾಧ್ಯವಾಗುತ್ತಿರಲಿಲ್ಲ. ಅಂಥ ಸಂವಿಧಾನವನ್ನೇ ಅಗೌರವದಿಂದ ಕಾಣುವ ಪಕ್ಷದಲ್ಲಿ ಇದ್ದುಕೊಂಡು ಕೆಲವರು ಈ ಕುರಿತು ಮಾತನಾಡುತ್ತಾರೆ. ಅವರಿಗೆ ಮಾತನಾಡಲು ಯಾವ ನೈತಿಕ ಹಕ್ಕು ಇಲ್ಲ ಎಂದರು.

ಸ್ವಾತಂತ್ರ್ಯ ಬಂದ ನಂತರ ಕಾರ್ಮಿಕ ಮಂತ್ರಿ ಎಂಬ ಹುದ್ದೆ ಸೃಷ್ಟಿಸಿದ್ದೇ ಕಾಂಗ್ರೆಸ್ ಪಕ್ಷ. ಆಗ ಬಿಜೆಪಿ ಅನ್ನುವುದೊಂದು ಪಕ್ಷ ಆದರೂ ಇತ್ತೇ. ಅಂಬೇಡ್ಕರ್‌ರವರು ರಿಪಬ್ಲಿಕನ್ ಪಾರ್ಟಿಯಲ್ಲಿದ್ದರು ಆದರೂ ಅವರನ್ನು ಕಾನೂನು ಮಂತ್ರಿಯನ್ನಾಗಿ ಮಾಡಲಾಗಿತ್ತು ಎಂದು ತಿಳಿಸಿದರು.

ವಿವಾದಾತ್ಮಕ ಹೇಳಿಕೆ ನೀಡಿಯೇ ಇಲ್ಲ:

ಸಂವಿಧಾನ ಮೀಸಲಾತಿಯನ್ನು ಕೊಟ್ಟಿದೆ ನಿಜ. ಅದನ್ನು ಅನುಷ್ಠಾನಕ್ಕೆ ತಂದದ್ದು ಕಾಂಗ್ರೆಸ್. ಈಗ ಅದನ್ನು ಬದಲಾವಣೆ ಮಾಡಬೇಕು ಅನ್ನುತ್ತಿರುವವರು ಬಿಜೆಪಿಯೇ ಹೊರತು ಕಾಂಗ್ರೆಸ್ ಅಲ್ಲ. ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋದರು ಎಂಬುದನ್ನು ನಾನು ಎಲ್ಲಿಯೂ ಹೇಳಿಯೇ ಇಲ್ಲ. ಇದನ್ನು ರಾಜಕೀಯವಾಗಿ ಬಿಜೆಪಿಯವರು ಸೃಷ್ಟಿಮಾಡಿದ್ದಾರೆ. ದಲಿತರಿಗೆ ಅವಮಾನ ಮಾಡುವ ಕೆಲಸವನ್ನು ನನ್ನ ಜೀವಮಾನದಲ್ಲೇ ನಾನು ಮಾಡಲ್ಲ ಎಂದರು.

ಸಮಾಜದಲ್ಲಿ ಚತುರ್ವರ್ಣ ವ್ಯವಸ್ಥೆ, ಅಸ್ಪೃಶ್ಯತೆ ಸೃಷ್ಟಿಸಿದ ಬಿಜೆಪಿ, ಆರ್‌ಎಸ್‌ಎಸ್‌ನಿಂದ ಕಾಂಗ್ರೆಸ್‌ನವರು ಪಾಠ ಕಲಿಯುವ ಅವಶ್ಯಕತೆಯಿಲ್ಲ. ದಲಿತರನ್ನು ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿ ನಿಲ್ಲಿಸಬೇಕು. ಜನರಿಗೆ ಅರ್ಥಮಾಡಿಕೊಳ್ಳುವ ಶಕ್ತಿಯಿದೆ. ಇವರು ಮಾಡುತ್ತಿರುವುದೆಲ್ಲವನ್ನು ಅವರು ವೀಕ್ಷಿಸುತ್ತಿದ್ದಾರೆ. ಮಹದೇವಪ್ಪ ಅವರನ್ನು ಲೋಕೋಪಯೋಗಿ ಮಂತ್ರಿಯನ್ನಾಗಿ, ಶ್ರೀನಿವಾಸ ಪ್ರಸಾದ್ ಅವರನ್ನು ಕಂದಾಯ ಮಂತ್ರಿಯನ್ನಾಗಿ, ಎಚ್. ಆಂಜನೇಯ ಅವರನ್ನು ಸಮಾಜ ಕಲ್ಯಾಣ ಮಂತ್ರಿಯನ್ನಾಗಿ, ಜಿ. ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಈಗಾಗಲೆ ಪಕ್ಷ ಬಿಟ್ಟು ಹೋದವರನ್ನು ಏನೂ ಮಾಡಲಾಗದು. ದಲಿತರಿಗೆ ಅವರ ಜನಸಂಖ್ಯೆಗನುಗುಣವಾಗಿ ಯೋಜನೆ ನೀಡಿದ್ದು ಕಾಂಗ್ರೆಸ್. ಬಡ್ತಿ ಮೀಸಲಾತಿಗೆ ಕಾನೂನು ಮಾಡಿಕೊಟ್ಟಿದ್ದು ಕಾಂಗ್ರೆಸ್. ಗುತ್ತಿಗೆ ಆಧಾರದ ಕೆಲಸಗಳಿಗೆ ಮೀಸಲಾತಿ ನೀಡಿದ್ದು ಕಾಂಗ್ರೆಸ್. ಬಿಜೆಪಿ ಈ ಕುರಿತಾಗಿ ಏನು ಮಾಡಿದೆ ಸ್ವಲ್ಪ ಹೇಳಲಿ ಎಂದು ತಿಳಿಸಿದರು.

ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್‌ನಲ್ಲಿದ್ದಾಗ ಕಾಂಗ್ರೆಸ್ಸನ್ನು ಹೊಗಳುತ್ತಿದ್ದರು. ಈಗ ಬಿಜೆಪಿಯಲ್ಲಿದ್ದಾರೆ ಹಾಗಾಗಿ ಅಲ್ಲಿ ಹೊಗಳುತ್ತಾರೆ ಅಷ್ಟೆ. ಅವರ ಮಾತಿಗೆಲ್ಲ ಕಿಮ್ಮತ್ತು ಕೊಡುವ ಅವಶ್ಯಕತೆ ಇಲ್ಲ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯವರು ಮೀಸಲು ವಿರೋಧಿಗಳು:

ದಲಿತರನ್ನು ಮುಖ್ಯವಾಹಿನಿಗೆ ತರಲು ನಾನು ಅವಿರತ ಶ್ರಮಿಸುತ್ತೇನೆ. ಬಿಜೆಪಿಯವರು ಮೀಸಲಾತಿಯನ್ನೇ ವಿರೋಧ ಮಾಡಿದ ಗಿರಾಕಿಗಳು. ಇದಕ್ಕಾಗಿ ರಥಯಾತ್ರೆ ಮಾಡಿದರು, ಮಂಡಲ್ ಕಮಿಷನ್ ವರದಿ ವಿರೋಧಿಸಿದರು, ರಾಮಾಜೋಯಿಸ್ ಸುಪ್ರೀಂಕೋರ್ಟ್​​ಗೆ ಹೋಗಿ ಸ್ಥಳೀಯ ಸಂಸ್ಥೆಗಳಲ್ಲಿ, ಪಂಚಾಯಿತಿಗಳಲ್ಲಿ ಮೀಸಲಾತಿ ಕೊಟ್ಟಿದ್ದನ್ನು ವಿರೋಧಿಸಿದರು ಇಷ್ಟೆಲ್ಲ ಮಾಡಿದ ಬಿಜೆಪಿಯವರಿಂದ ಈ ಕುರಿತಾಗಿ ಪಾಠ ಕಲಿಯುವ ಅವಶ್ಯಕತೆಯಿಲ್ಲ ಎಂದರು.

ತಳ ಸಮುದಾಯದ ಜನರಲ್ಲಿ, ದಲಿತರಾಗಲಿ, ಹಿಂದುಳಿದವರಾಗಲಿ, ಅಲ್ಪಸಂಖ್ಯಾತರಾಗಲಿ, ಮುಂದುವರಿದ ಜಾತಿಯಾದರೂ ಅದರಲ್ಲಿ ಬಡವರು ಇದ್ದಾರೆ. ಅವಕಾಶದಿಂದ ವಂಚಿತಗೊಂಡ ಜನರು ಯಾರೇ ಇದ್ದರೂ ಅವರ ಪರವಾಗಿ ನಮ್ಮ ಪಕ್ಷ ಕೆಲಸ ಮಾಡುತ್ತದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಬಿಟ್‌ಕಾಯಿನ್ ಹಗರಣದ ಕುರಿತು ಪ್ರತಿಕ್ರಿಯಿಸಿದ ಅವರು, ಹಗರಣದಲ್ಲಿ ಕೆಲವು ರಾಜಕೀಯ ಪ್ರಭಾವಿಗಳು ಇದ್ದಾರೆ ಎಂಬ ಮಾಹಿತಿ ಇದೆಯಷ್ಟೆ. ಇದರ ಬಗ್ಗೆ ಮಾಹಿತಿ ನೀಡಬೇಕು. ಈ ಕುರಿತಾಗಿ ಸರ್ಕಾರ ಸರಿಯಾದ ತನಿಖೆ ಮಾಡಿಸಲಿ, ಅಲ್ಲಿ ಯಾವ ಪಕ್ಷದ ಪ್ರಭಾವಿಗಳಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ. ಸತ್ಯ ಜನರಿಗೆ ತಿಳಿಯಲಿ. ಅಪರಾಧಿಗಳಿಗೆ ಶಿಕ್ಷೆಯಾಗಲಿ ಅನ್ನುವುದಷ್ಟೆ ನನ್ನ ಕಾಳಜಿ ಎಂದರು.

Related Articles

Leave a Reply

Your email address will not be published.

Back to top button