Latest

ಆರ್ ಎಸ್ ಎಸ್ ಪದಾಧಿಕಾರಿಗಳೆಲ್ಲಾ ಒಂದೇ ಜಾತಿಯವರು ಯಾಕೆ: ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು: ಬಿಜೆಪಿ ಮಾತೃ ಸಂಸ್ಥೆಯಾದ ಆರ್ ಎಸ್ ಎಸ್ ಗೆ ಚುನಾವಣೆ ಇಲ್ಲದೆ ನೇಮಕವಾಗುವ ಪದಾಧಿಕಾರಿಗಳೆಲ್ಲ ಒಂದು ಜಾತಿಯವರೇ ಯಾಕೆ ? ಚುನಾವಣೆಯಲ್ಲಿ ಆಯ್ಕೆಯಾಗುವ ಬಿಜೆಪಿ ಅಭ್ಯರ್ಥಿಗಳಲ್ಲಿ ಎಲ್ಲ ಜಾತಿಗಳಿಗೆ ಸೇರಿದವರು ಇರುವುದು ಯಾಕೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ತಮ್ಮನ್ನು ಜಾತಿ ವಿಭಜಕ ಎಂದು ಆರೋಪಿಸಿ ಸರಣಿ ಟ್ವಿಟ್ ಮಾಡಿದ್ದ ಬಿಜೆಪಿಗೆ ಸರಣಿ ಟ್ವಿಟ್ ಮೂಲಕವೇ ಎದಿರೇಟು ನೀಡಿರುವ ಸಿದ್ದರಾಮಯ್ಯ, ಜಾತಿ ಬೂಟಾಟಿಕೆಯನ್ನು ಬಿಡುವಂತೆ ಬಿಜೆಪಿಯನ್ನು ಒತ್ತಾಯಿಸಿದ್ದಾರೆ.

‘ಬಾಯಲ್ಲಿ ನಾವೆಲ್ಲ ಒಂದು, ನಾವೆಲ್ಲ ಹಿಂದು’ ಎನ್ನುವ ಮಂತ್ರ. ಅಂತರಂಗದಲ್ಲಿ ಜಾತಿಗಳನ್ನು ಒಡೆದು ಆಳುವ ಕುತಂತ್ರ. ಮಂಡಲ ವಿರುದ್ಧ ಕಮಂಡಲ ಹಿಡಿದ ಬಿಜೆಪಿ ನಾಯಕರ ಜಾತಿ ಹಿಪಾಕ್ರಸಿಯನ್ನು ಬಿಚ್ಚಿಟ್ಟರೆ ಅದೊಂದು ಕೊನೆಯಿಲ್ಲದ ಧಾರವಾಹಿ ಆದೀತು ಎಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕುರುಬ ಸಮಾವೇಶ ನಡೆಸಿದ್ದ ಈಶ್ವರಪ್ಪ, ಪಂಚಮಸಾಲಿ ಲಿಂಗಾಯತರ ಸಮಾವೇಶ ನಡೆಸಿದ ಯತ್ನಾಳ್, ಬ್ರಾಹ್ಮಣ ಸಮಾವೇಶದಲ್ಲಿ ಪಾಲ್ಗೊಂಡ ಜೋಷಿ, ಕಾಗೇರಿ, ಸುರೇಶ್ ಕುಮಾರ್, ಒಕ್ಕಲಿಗನೆಂಬ ಕಾರಣಕ್ಕೆ ಸಚಿವನಾದೆ ಎನ್ನುವ ಆರ್.ಅಶೋಕ್ ಜಾತಿವಾದಿಗಳಾ? ಜಾತ್ಯತೀತರಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಲಿಂಗಾಯತ ಸ್ವಾಮಿಗಳನ್ನು ಮನೆಗೆ ಕರೆಸಿ ದುಡ್ಡು ಹಂಚಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಜಾತಿವಾದಿಯೇ? ಜಾತ್ಯತೀತವಾದಿಯೇ? ಶೋಷಿತ ಜಾತಿಗಳ ಸಮಾವೇಶದಲ್ಲಿ ನಾನು ಭಾಗವಹಿಸಿದರೆ ಜಾತಿವಾದಿ, ನೀವು ಭಾಗವಹಿಸಿದರೆ ಜಾತ್ಯತೀತರಾ? ಎಂದೂ ಕಿಡಿಕಾರಿದ್ದಾರೆ.

ಜಾತಿ ಸಮಾವೇಶದಲ್ಲಿ ಭಾಗವಹಿಸುವುದಿಲ್ಲ ಎಂದು ಬಿಜೆಪಿ ನಾಯಕರು ಪ್ರಮಾಣ ಮಾಡಲಿ, ನಾನು ರಾಜಕೀಯದಿಂದ ನಿವೃತ್ತಿ ಆಗುತ್ತೇನೆ ಎಂದು ಸವಾಲು ಹಾಕಿರುವ ಸಿದ್ದರಾಮಯ್ಯ, ಆತ್ಮವಂಚನೆ ಬಿಟ್ಟು ಪ್ರಾಮಾಣಿಕ ರಾಜಕೀಯ ಮಾಡಿ ಎಂದು ಬಿಜೆಪಿಗೆ ಕಿವಿಮಾತು ಹೇಳಿದ್ದಾರೆ.

ಟಿಪ್ಪು ಸುಲ್ತಾನ್ ಜಯಂತಿಯಲ್ಲಿ ನಾನು ಭಾಗವಹಿಸಿದರೆ ಹಿಂದೂ ವಿರೋಧಿ. ಟಿಪ್ಪು ಬಗ್ಗೆ ಸರ್ಕಾರದಿಂದಲೇ ಪುಸ್ತಕ ಪ್ರಕಟಿಸಿ ಹಾಡಿ ಹೊಗಳಿದ ಮಾಜಿಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮುಸ್ಲಿಂ ಗಣವೇಷ ಹಾಕಿ ಖಡ್ಗ ಹಿಡಿದು ಕುಣಿದ ಬಿ.ಎಸ್ ಯಡಿಯೂರಪ್ಪ, ಆರ್. ಅಶೋಕ್ ಹಿಂದುಕುಲ ತಿಲಕರೇ ಎಂದೂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಜಾತಿ ನಾಶವಾಗುವ ವರೆಗೆ ಮೀಸಲಾತಿ ಇರಬೇಕೆಂಬ ನನ್ನ ಮಾತಿಗೆ ನಾನೀಗಲೂ ಬದ್ಧ. ಮಂಡಲ್ ವರದಿ ವಿರೋಧಿಸಿ ಮೈಗೆ ಬೆಂಕಿ ಹಚ್ಚಿಕೊಂಡಿದ್ದ ಬಿಜೆಪಿ ನಾಯಕರೇ ಈಗ ನಿಮಗೆ ಮೀಸಲಾತಿ ವಿರೋಧಿಸುವ ತಾಕತ್ ಇದೆಯೇ ಎಂದು ಸವಾಲು ಹಾಕಿದ್ದಾರೆ.

Related Articles

Leave a Reply

Your email address will not be published.

Back to top button