Latest

SIiddaramaiah: ರಾಜ್ಯದಲ್ಲಿ ಸರಗೊಬ್ಬರ ಸಮಸ್ಯೆ, ರೈತ ಸಮುದಾಯ ಕಂಗಾಲು: ಸಿದ್ದರಾಮಯ್ಯ

ಬೆಂಗಳೂರು: ಹಿಂಗಾರು ಮತ್ತು ನೀರಾವರಿ ಬೆಳೆಗಳಿಗೆ ರಸಗೊಬ್ಬರದ ತುರ್ತು ಅಗತ್ಯ ಇದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚುನಾವಣೆ ಪ್ರಚಾರದಲ್ಲಿ ಮೈಮರೆಯದೆ ತಕ್ಷಣ ರಸಗೊಬ್ಬರ ಕೊರತೆ ನೀಗಿಸಲು ಕ್ರಮಕೈಗೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ನಾಪತ್ತೆಯಾಗಿರುವ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರನ್ನು ಹುಡುಕಿ ಕೆಲಸಕ್ಕೆ ಹಚ್ಚುವಂತೆ ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ರಸಗೊಬ್ಬರ ಕೊರತೆಯಿಂದ ರೈತರು ಕಂಗಾಲಾಗಿದ್ದಾರೆ. ಬಿ.ಎಸ್ ಯಡಿಯೂರಪ್ಪ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಹಾವೇರಿಯಲ್ಲಿ ರಸಗೊಬ್ಬರ ಕೇಳಿದವರಿಗೆ ಗುಂಡು ಹೊಡೆದು ಇಬ್ಬರು ರೈತರನ್ನು ಸಾಯಿಸಿದ್ದರು. ಈಗಿನ ಸರ್ಕಾರದ ನಿರ್ಲಕ್ಷ ನೋಡಿದರೆ ಬಸವರಾಜ ಬೊಮ್ಮಾಯಿ ಅವರಿಗೂ ಅದೇ ದುರುದ್ದೇಶ ಇದ್ದಂತಿದೆ ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಡಿಎಪಿ ಮತ್ತು ಎಂಒಪಿ ರಸಗೊಬ್ಬರ ದಾಸ್ತಾನು ಶೇ. 65 ರಿಂದ ಶೇ. 75 ರಷ್ಟು ಕಡಿಮೆ ಇದೆ. ಲಭ್ಯವಿರುವ ಅಲ್ಪಪ್ರಮಾಣದ ರಸಗೊಬ್ಬರ ಕೂಡಾ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಬಿಜೆಪಿ ಸರ್ಕಾರ ಉಪಚುನಾವಣೆಯಲ್ಲಿ ಮೈಮರೆತಿದ್ದು ರೈತರ ಗೋಳನ್ನು ಕೇಳುವವರು ಇಲ್ಲದಂತಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕಚ್ಚಾ ವಸ್ತುಗಳ ಬೆಲೆ ಮತ್ತು ಕಸ್ಟಮ್ಸ್ ಸುಂಕ ಹೆಚ್ಚಳ ರಸಗೊಬ್ಬರ ಕೊರತೆಗೆ ಕಾರಣ ಎನ್ನಲಾಗಿದೆ. ಮೂರು ತಿಂಗಳ ಹಿಂದೆಯೇ ಪರಿಸ್ಥಿತಿಯ ಅರಿವಿದ್ದರೂ ರಾಜ್ಯ ಸರ್ಕಾರ ಕಣ್ಣುಮುಚ್ಚಿ ಕೂತಿದ್ದರ ಫಲವನ್ನು ರೈತರು ಅನುಭವಿಸಬೇಕಾಗಿದೆ ಎಂದು ಕಿಡಿಕಾರಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button