ಅಕ್ಟೋಬರ್ 23ರಿಂದ ತಲಕಾವೇರಿಯಿಂದ ಕಾವೇರಿ ನದಿ ಜಾಗೃತಿ ಯಾತ್ರೆ
ಕೊಡಗು : ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಿಂದ, ತಮಿಳುನಾಡಿನ ಪೂಂಪುಹಾರ್ ವರೆಗೆ 11ನೇ ವರ್ಷದ ‘ಕಾವೇರಿ ನದಿ ಜಾಗೃತಿ ಯಾತ್ರೆ’ ನಡೆಯಲಿದೆ. ನದಿಗಳ ಸಂರಕ್ಷಣೆಯ ಕುರಿತು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾವೇರಿ ನದಿ ಜಾಗೃತಿ ಯಾತ್ರೆ ನಡೆಯಲಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾವೇರಿ ಸ್ವಚ್ಛತಾ ಆಂದೋಲನ ಸಮಿತಿಯ ಎಂ.ಎನ್. ಚಂದ್ರಮೋಹನ್ ಅವರು, ಅಖಿಲ ಭಾರತ ಸನ್ಯಾಸಿಗಳ ಸಂಘ ಮತ್ತು ಕಾವೇರಿ ಸ್ವಚ್ಛತಾ ಆಂದೋಲನ ಸಮಿತಿಯ ನೇತೃತ್ವದಲ್ಲಿ, ಕುಶಾಲನಗರ ಕಾವೇರಿ ರಿವರ್ ಸೇವಾ ಟ್ರಸ್ಟ್ ಮತ್ತು ತಮಿಳುನಾಡಿನ ಕಾವೇರಿ ರಿವರ್ ವಾಟರ್ ಪ್ರೊಟೆಕ್ಷನ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ ಜಾಗೃತಿ ಯಾತ್ರೆಗೆ ತಲಕಾವೇರಿಯಲ್ಲಿ ಬೆಳಗ್ಗೆ 9 ಗಂಟೆಗೆ ವೀರಾಜಪೇಟೆಯ ಅರಮೇರಿ ಮಠಾಧೀಶ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷರಾದ ಶಾಂತೆಯಂಡ ರವಿ ಕುಶಾಲಪ್ಪ ಯಾತ್ರೆಯ ರಥಕ್ಕೆ ಚಾಲನೆ ನೀಡಲಿದ್ದಾರೆ. ಕೊಡಗಿನ ತಲಕಾವೇರಿಯಿಂದ ತಮಿಳುನಾಡಿನ ಪೂಂಪುಹಾರ್ ತನಕ ಸಾಗಲಿರುವ ಈ ಜಾಗೃತಿ ಯಾತ್ರೆಯಲ್ಲಿ ಕಾವೇರಿ ನದಿ ತಡದ ಉದ್ದಕ್ಕೂ ಜನರಿಗೆ ನದಿ ಸಂರಕ್ಷಣೆಯ ಬಗ್ಗೆ ಅರಿವು, ಜಾಗೃತಿ ಮೂಡಿಸುವ ಕಾರ್ಯ ನಡೆಯಲಿದ್ದು, ಯಾತ್ರೆ ಹಿನ್ನೆಲೆಯಲ್ಲಿ ತಮಿಳುನಾಡಿನ ಪೇರೂರು ಅಧೀನಂ ಸಂಸ್ಥಾನದ ಶ್ರೀಗಳು ತಲಕಾವೇರಿ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ.
ಅಖಿಲ ಭಾರತ ಸಂನ್ಯಾಸಿ ಸಂಘದ ಉಪಾಧ್ಯಕ್ಷ ರಮಾನಂದ ಸಾಮೀಜಿಗಳ ನೇತೃತ್ವದಲ್ಲಿ ನಡೆಯಲಿರುವ ಜಾಗೃತಿ ಜಾಥಾ ತಲಕಾವೇರಿಯಿಂದ ಚಾಲನೆಗೊಂಡು ಕುಶಾಲಗರದ ಮೂಲಕ ತೆರಳಲಿದ್ದು, ಅಕ್ಟೋಬರ್ 23ರಂದು ಸಂಜೆ 4 ಗಂಟೆಗೆ ಕುಶಾಲನಗರದಲ್ಲಿ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಸಾನಿಧ್ಯದಲ್ಲಿ ಕಾವೇರಿಗೆ ವಿಶೇಷ ಆರತಿ ಬೆಳಗಲಾಗುತ್ತದೆಂದು ತಿಳಿಸಿದ್ದಾರೆ.
ನಂತರ ಕಾವೇರಿ ಜಾಗೃತಿ ಯಾತ್ರೆಯು ಕೂಡಿಗೆ, ಕಣಿವೆ ಮೂಲಕ ಜಿಲ್ಲೆಯ ಗಡಿ ದಾಟಿ ರಾಮನಾಥಪುರದತ್ತ ಸಾಗಲಿದ್ದು, ಯಾತ್ರಾ ತಂಡ ರಾಮನಾಥಪುರದಲ್ಲಿ ವಾಸ್ತವ್ಯ ಹೂಡಿ ಅ.24 ರಂದು ಬೆಳಗ್ಗೆ ಶ್ರೀರಂಗಪಟ್ಟಣ ತಲುಪಿ ರಾಮನಗರ ಮಾರ್ಗವಾಗಿ ತಮಿಳುನಾಡಿನ ಕಡೆಗೆ ಸಾಗಿ ನವೆಂಬರ್ 11 ರಂದು ಪೂಂಪ್ಹಾರ್ನಲ್ಲಿ ಕಾವೇರಿ ತೀರ್ಥವನ್ನು ಬಂಗಾಳ ಕೊಲ್ಲಿಗೆ ವಿಸರ್ಜಿಸುವ ಮೂಲಕ ಯಾತ್ರೆ ಸಮಾಪನಗೊಳ್ಳಲಿದಯೆಂದು ವಿವರಿಸಿದರು.