ಮುಂದಿನ ಸಿಎಂ ಬೊಮ್ಮಾಯಿ ಎಂಬ ಚರ್ಚೆ ಹಿನ್ನೆಲೆ: ಹಗುರ ಪ್ರಶ್ನೆಗೆ ಉತ್ತರಿಸಲ್ಲ ಎಂದ ಯಡಿಯೂರಪ್ಪ…!
ದಾವಣಗೆರೆ: ಮುಂದಿನ ಸಿಎಂ ಬಸವರಾಜ ಬೊಮ್ಮಾಯಿ ಎಂಬ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು “ಇಂತಹ ಹಗುರವಾದ ಪ್ರಶ್ನೆಗೆ ನಾನು ಉತ್ತರ ಕೊಡಲ್ಲ” ಎಂದಿದ್ದಾರೆ.
ಜಿಲ್ಲೆಯ ನ್ಯಾಮತಿ ಪಟ್ಟಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಸವರಾಜ್ ಬೊಮ್ಮಾಯಿ ಅವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದರೆ ಮುಖ್ಯಮಂತ್ರಿ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ ಅಲ್ವಾ ಎಂಬ ಬಗ್ಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.
ಸಿಂಧಗಿ ಹಾಗೂ ಹಾನಗಲ್ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಇಂದು ಆಲಮಟ್ಟಿಗೆ ತೆರಳುತ್ತಿದ್ದೇನೆ. ನಾಳೆಯಿಂದ ಚುನಾವಣಾ ಪ್ರಚಾರವನ್ನ ಆರಂಭಿಸುತ್ತೇನೆ. ನಾವು ಚುನಾವಣೆಯನ್ನ ಹಗುರವಾಗಿ ಪರಿಗಣಿಸಲ್ಲ ಎಂದರು.
ಕಾರ್ಯಕರ್ತರು ಮುಖಂಡರು ಶ್ರಮವಹಿಸಿ ಕೆಲಸ ಮಾಡಿದರೆ ಗೆಲವು ಸುಲಭವಾಗತ್ತೆ. ಎರಡು ಕ್ಷೇತ್ರಗಳಲ್ಲಿ ನೂರಕ್ಕೆ ನೂರರಷ್ಟು ಗೆಲ್ಲುತ್ತೇವೆ ಎಂದ ಅವರು, ಕೊರೊನಾ ಸೂಪರ್ ವಾರಿಯರ್ ಪ್ರಶಸ್ತಿ ಬಗ್ಗೆ ಬಿಎಸ್ ವೈ ಮೆಚ್ಚುಗೆ ವ್ಯಕ್ತಪಡಿಸಿದರು. ಇಂತಹ ಕಾರ್ಯಕ್ರಮಗಳು ರಾಜ್ಯಾದ್ಯಂತ ನಡೆಸಬೇಕು ಎಂದು ಅಭಿಪ್ರಾಯಪಟ್ಟರು.