Latest

ದೇಶದಲ್ಲೇ ಮೊದಲ ಬಾರಿಗೆ ಹೊಸ ಉದ್ಯೋಗ ನೀತಿ ಶೀಘ್ರ ಜಾರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ದೇಶದಲ್ಲಿ ಮೊದಲ ಬಾರಿಗೆ ಉದ್ಯೋಗ ನೀತಿಯನ್ನು ರಾಜ್ಯ ಸರ್ಕಾರ ಜಾರಿಗೆ ತರಲಿದೆ. ಈ ಕುರಿತ ಕರಡು ಈಗಾಗಲೇ ಸಿದ್ಧವಾಗಿದೆ ಶೀಘ್ರವೇ ಅದನ್ನು ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಅರಮನೆ ಆವರಣದಲ್ಲಿ ಹಮ್ಮಿಕೊಂಡಿರುವ “ಉದ್ಯಮಿಯಾಗು ಉದ್ಯೋಗ ನೀಡು’ ಹಾಗೂ “ಕೈಗಾರಿಕಾ ಅದಾಲತ್’ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ಉದ್ಯೋಗ ನೀತಿ ಅನ್ವಯ ಯಾವ ಉದ್ಯಮಿಗಳು ಹೆಚ್ಚು ಉದ್ಯೋಗ ಸೃಷ್ಟಿಸುತ್ತಾರೋ ಅವರಿಗೆ ಸರ್ಕಾರದಿಂದ ವಿಶೇಷ ಪ್ರೋತ್ಸಾಹ ಧನ ನೀಡಲಾಗುವುದು ಎಂದರು.

ಸುಸ್ಥಿರ ಬೆಳವಣಿಗೆ ಮತ್ತು ಹೂಡಿಕೆಗಳಿಗೆ ಆದ್ಯತೆ ನೀಡುತ್ತಿರುವ ರಾಜ್ಯ ಸರ್ಕಾರ ಹೊಸ ತಂತ್ರಜ್ಞಾನಗಳಿಗೆ ಸಂಬಂಧಿಸಿದಂತೆ ಸಹಭಾಗಿತ್ವಕ್ಕೆ ಸದಾ ಆಸಕ್ತಿ ತೋರುತ್ತಾ ಬಂದಿದೆ. ಭವಿಷ್ಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದ ಬೆಳವಣಿಗೆ ಆದ್ಯತೆ ನೀಡಲಿದೆ ಎಂದೂ ಸಿಎಂ ಬೊಮ್ಮಾಯಿ ತಿಳಿಸಿದರು.

ಭವಿಷ್ಯದಲ್ಲಿ ಪ್ರತಿ ವಲಯದಲ್ಲೂ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದ ಬೆಳವಣಿಗೆ ಆದ್ಯತೆ ನೀಡಬೇಕಾಗಿದ್ದು, ಈ ನಿಟ್ಟಿನಲ್ಲಿ ಹೂಡಿಕೆ ಮಾಡಲು ಕೈಗಾರಿಕೆಗಳಿಗೆ ಪ್ರೋತ್ಸಾಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೂಡಿಕೆ, ಉದ್ಯೋಗ ಮತ್ತು ಆವಿಷ್ಕಾರಕ್ಕೆ ನಮ್ಮ ಸರ್ಕಾರ ಒತ್ತು ನೀಡಲಿದೆ ಎಂದರು.

ಯುವ ಶಕ್ತಿ ಬಗ್ಗೆ ನನಗೆ ಅಪಾರ ನಂಬಿಕೆ ಇದೆ. ಉದ್ಯಮ ಸ್ಥಾಪಿಸಿ ಸಹಸ್ರಾರು ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಸುವ ತಾಕತ್ತು ಇವರಲ್ಲಿದೆ. ಈ ಕಾರ್ಯಕ್ರಮಕ್ಕೆ ಆಗಮಿಸಿರುವ ವಿದ್ಯಾರ್ಥಿಗಳೇ ಮುಂದೆ ಉದ್ಯಮಿಗಳಾಗಿ ಇಂಥ ಕಾರ್ಯಕ್ರಮದಲ್ಲಿ ಮುಂದಿನ ಸಾಲಿನಲ್ಲಿ ಕೂರುವರು,” ಎಂದು ಆಶಿಸಿದರು.

“ಸಣ್ಣ ಮಟ್ಟದಲ್ಲಿ ಉದ್ಯಮ ಸ್ಥಾಪಿಸಿ ಅದನ್ನೇ ದೊಡ್ಡ ಮಟ್ಟಕ್ಕೆ ಕೊಂಡೊಯ್ದಿರುವ ಬೃಹತ್‌ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ, ಸಣ್ಣ ಉದ್ಯಮಿಗಳ ಸಚಿವ ಎಂಟಿಬಿ ನಾಗಾರಾಜ ಅವರೇ ನಮ್ಮೆಲ್ಲರಿಗೂ ಉತ್ತಮ ಉದಹಾರಣೆ. ಅವರು ನಡೆದು ಬಂದ ಹಾದಿಯೇ ಯುವ ಜನರಿಗೆ ಪಾಠ. ಸಣ್ಣ ಹೆಜ್ಜೆ ಇಡುವ ಮೂಲಕ ದೊಡ್ಡದನ್ನು ಸಾಧಿಸಬಹುದು. ಈ ನಿಟ್ಟಿನಲ್ಲಿ ಸಣ್ಣ ಹೆಜ್ಜೆ ಇಡಲು ಇದು ಆರಂಭದ ಪ್ರಯತ್ನವಾಗಲಿದೆ. ಎಲ್ಲರೂ ಇದರ ಸದುಪಯೋಗಪಡಿಸಿಕೊಂಡರೆ ಸಾರ್ಥಕ,” ಎಂದು ಅವರು ಹೇಳಿದರು.

“ಯುವಜನರಿಗೆ ನೆರವಾಗುವ ಉದ್ದೇಶದಿಂದ “ಉದ್ಯಮಿಯಾಗು ಉದ್ಯೋಗ ನೀಡು’ ಕಾರ್ಯಕ್ರಮ ಮತ್ತು ಕೈಗಾರಿಕೆಗಳ ಸಮಸ್ಯೆ ಇತ್ಯರ್ಥಗೊಳಿಸಲು “ಕೈಗಾರಿಕಾ ಅದಾಲತ್’ ಹಮ್ಮಿಕೊಂಡಿರುವುದು ಶ್ಲಾಘನೀಯ. ಇಂಥ ಕಾರ್ಯಕ್ರಮಗಳಿಂದಾಗಿಯೇ ರಾಜ್ಯ ಇಂದು ದೇಶದಲ್ಲೇ ನಂಬರ್ 1 ಕೈಗಾರಿಕಾ ಸ್ನೇಹಿ ರಾಜ್ಯ ಎನಿಸಿಕೊಂಡಿದೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಮ್ಮ ವಿದ್ಯಾರ್ಥಿಗಳಿಗೆ ನಮ್ಮವರೇ ಆದ ಇನ್ಫೋಸಿಸ್‌ ಸಂಸ್ಥೆಯ ಸುಧಾಮೂರ್ತಿಯವರು ದೊಡ್ಡ ಪ್ರೇರಣೆ ಆಗಬೇಕು. ಎಂಜನಿಯರ್‌ ಪದವಿ ಪಡೆದು ಟಾಟಾ ಕಂಪನಿಯಲ್ಲಿ ಉದ್ಯೋಗ ಮಾಡಿ, ನಂತರದ ದಿನಗಳಲ್ಲಿ ಸ್ವಂತ ಐಟಿ ಕಂಪನಿ ಸ್ಥಾಪಿಸಿ ಜಗದ್ವಿಖಾತರಾದರು. ಮತ್ತೊಂದು ಉದಾಹರಣೆ ಅಂದರೆ ವಿಜಯ ಸಂಕೇಶ್ವರ ಅವರು. ಒಂದು ಲಾರಿಯಿಂದ ಆರಂಭವಾದ ಅವರ ಲಾಜಿಸ್ಟಿಕ್‌ ಉದ್ಯಮ ಇಂದು ದೇಶದಲ್ಲಿ ಅತಿ ದೊಡ್ಡ ಎತ್ತರಕ್ಕೆ ಬೆಳೆದಿದೆ. ಸಾಧಿಸುವ ಛಲ ಇದ್ದಾಗ ಮಾತ್ರ ಗುರಿ ಸಾಧ್ಯ. ಉದ್ಯಮ ಸ್ಥಾಪಿಸಿ ಮಾಲೀಕರಾಗಬೇಕೇ ಅಥವಾ ಉದ್ಯೋಗಕ್ಕೆ ಮತ್ತೊಬ್ಬರ ಕೈ ಕೆಳಗೆ ದುಡಿಯೇಬೇಕೇ ಎಂಬುದನ್ನು ವಿದ್ಯಾರ್ಥಿಗಳು ನಿರ್ಧರಿಸಬೇಕು ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು.

ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಹಿಂದೆ ನಡೆದಿದ್ದ ಎರಡು ಜಾಗತಿಕ ಹೂಡಿಕೆದಾರರ ಸಮಾವೇಶ ಅಭೂತಪೂರ್ವ ಯಶಸ್ಸು ಕಂಡಿದ್ದು, ಮುಂದಿನ ವರ್ಷ ನವೆಂಬರ್ ನಲ್ಲಿ ನಡೆಯಲಿರುವ ವಿಶ್ವ ಜಾಗತಿಕ ಹೂಡಿಕೆದಾರರ ಸಮಾವೇಶವೂ ನಿಮ್ಮೆಲ್ಲರ ಸಹಕಾರದೊಂದಿಗೆ ಅತ್ಯಂತ ಯಶಸ್ವಿ ಆಗುವ ವಿಶ್ವಾಸ ನನಗಿದೆ ಎಂದರು.

Related Articles

Leave a Reply

Your email address will not be published.

Back to top button