ಮುಂದಿನ ವರ್ಷದಿಂದ ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆ ಪುನರ್ ಆರಂಭ: ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು : ಮುಂದಿನ ವರ್ಷದಿಂದ ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆ ಪುನರ್ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಮೈಶುಗರ್ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ನಡೆದ ಮಂಡ್ಯ ಜಿಲ್ಲೆಯ ಜನ ಪ್ರತಿನಿಧಿ ಹಾಗೂ ರೈತ ಮುಖಂಡರ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಮೈಶುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾರ್ಖಾನೆಯ ಇಂದಿನ ಸ್ಥಿತಿಗತಿ, ಯಂತ್ರಗಳ ಸ್ಥಿತಿ ಕುರಿತು ಪರಿಶೀಲನೆ ನಡೆಸಲು ತಜ್ಞರ ಸಮಿತಿ ಹಾಗೂ ಯಂತ್ರೋಪಕರಣಗಳ ದುರಸ್ತಿಗೆ ಆಡಳಿತಾಧಿಕಾರಿಯನ್ನು ನೇಮಿಸಲಾಗುವುದು. ತಜ್ಞರ ಸಮಿತಿ ವರದಿ ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.
ಸದ್ಯಕ್ಕೆ ಸಕ್ಕರೆ ತಯಾರಿಕೆಗೆ ಅಣಿಯಾಗುವುದೇ ಅಥವಾ ಬೇಡವೇ ? ಪರ್ಯಾಯ ಉತ್ಪನ್ನಕ್ಕೆ ಮುಂದಾಗುವುದೇ ಎಂಬುದರ ಕುರಿತು ಚರ್ಚಿಸಲಾಗುವುದು ಜತೆಗೆ ಬ್ಯಾಂಕುಗಳ ಸಾಲ ಸೌಲಭ್ಯದ ಕುರಿತೂ ಮಾಹಿತಿ ಪಡೆಯಲಾಗುವುದು ಎಂದರು.
ಈ ಎಲ್ಲಾ ಸಾಧ್ಯಾಸಾಧ್ಯತೆಗಳ ಪರಿಶೀಲನೆ ನಡುವೆಯೂ ಸದರಿ ಕಾರ್ಖಾನೆಯಲ್ಲಿ ಮುಂದಿ ವರ್ಷದಿಂದ ಕಬ್ಬು ಅರೆಯುವುದನ್ನು ಪುನರ್ ಆರಂಭಿಸಲಾಗುವುದು . ಇದಕ್ಕೆ ಅಗತ್ಯವಾದ ಹಣಕಾಸನ್ನು ಸರ್ಕಾರ ಬಿಡುಗಡೆ ಮಾಡಲಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.