ಪ್ರಾಕೃತಿಕ ವಿಕೋಪಗಳಿಂದ ಭಾರತಕ್ಕೆ 65 ಲಕ್ಷ ಕೋಟಿ ನಷ್ಟ
ಜಿನೆವಾ: ಹಲವು ರೀತಿಯ ಪ್ರಾಕೃತಿಕ ವಿಕೋಪಗಳಿಂದ ಭಾರತಕ್ಕೆ ಸುಮಾರು 65 ಲಕ್ಷ ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ವಿಶ್ವ ಹವಾಮಾನ ಶಾಸ್ತ್ರ ಸಂಸ್ಥೆಯ ವರದಿ ತಿಳಿಸಿದೆ.
ವಿಶ್ವಸಂಸ್ಥೆ ಹವಾಮಾನ ಬದಲಾವಣೆ ಅಧಿವೇಶನ ಅ.31ರಂದು ಸ್ಕಾಟ್ಲ್ಯಾಂಡ್ ನಲ್ಲಿ ನಡೆಯಲಿದ್ದು, ಪೂರಕವಾಗಿ ತಯಾರಿಸಿರುವ ವರದಿಯಲ್ಲಿ ಈ ಅಂಶ ಉಲ್ಲೇಖವಾಗಿದೆ.
ಕಳೆದ 2020ರಲ್ಲಿ ಉಷ್ಣವಲಯದ ಚಂಡಮಾರುತ, ಪ್ರವಾಹ ಪರಿಸ್ಥಿತಿ ಮತ್ತು ಕ್ಷಾಮದ ಪರಿಣಾಮ ಇಷ್ಟೊಂದು ಪ್ರಮಾಣದ ನಷ್ಟವಾಗಿದೆ. ತಾಪಮಾನದ ಏರುಪೇರು, ಮಳೆ ವೈಪರೀತ್ಯ, ಹಿಮಪಾತ, ಸಮುದ್ರದ ಮಟ್ಟ ಏರಿಕೆ ಇತ್ಯಾದಿ ಪ್ರಾಕೃತಿಕ ವಿಕೋಪಗಳ ಪರಿಣಾಮ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳ ಪರಿಶೀಲನೆ ನಡೆಸಲಾಗಿದೆ.
ಭೌಗೋಳಿಕವಾಗಿ ವಿಸ್ತಾರವಾಗಿರುವ ಚೀನಾಕ್ಕೆ ಸುಮಾರು 178 ಲಕ್ಷ ಕೋಟಿ ನಷ್ಟವಾಗಿದೆ. ದಕ್ಷಿಣ ಮತ್ತು ಪೂರ್ವ ಏಷ್ಯಾದಲ್ಲಿ ಅಕಾಲಿಕ ಮಳೆ ಮತ್ತು ಪ್ರವಾಹದಿಂದ ಹಲವು ದೇಶಗಳಲ್ಲಿ ಜನ ಸಾವನ್ನಪ್ಪಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಅಪ್ಪಳಿಸಿದ್ದ ಅಂಫಾನ್ ಚಂಡಮಾರುತದ ಹೊಡೆತಕ್ಕೆ ಭಾರತದ 24 ಲಕ್ಷ ಹಾಗೂ ಬಾಂಗ್ಲಾದೇಶದ 25 ಲಕ್ಷ ಜನ ಸ್ಥಳಾಂತರಗೊಂಡಿದ್ದರು.
ಹವಾಮಾನ ಏರುಪೇರಿನ ಸಮಸ್ಯೆ ನಿಯಂತ್ರಿಸಲು ಸೂಚಿಸಲಾಗಿರುವ ಸುಸ್ಥಿರ ಅಭಿವೃದ್ಧಿ ಗುರಿ 13ರಲ್ಲಿ ಏಷ್ಯಾ ಖಂಡದ ಸಾಧನೆ ಅತ್ಯಂತ ಕಳಪೆಯಾಗಿದೆ. ಈ ಅಭಿವೃದ್ಧಿಯು ಮುಂದಿನ 2030ರ ಅವಧಿಗೆ ಶೇ.10ರಷ್ಟು ತಲುಪುವ ಸಾಧ್ಯತೆಯಿದೆ ಎಂದು ವಿಶ್ವ ಹವಾಮಾನ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪೆಟ್ಟಾರಿ ತಾಲಸ್ ಹೇಳಿದ್ದಾರೆ.