Latest

ದಸರಾ ನಂತರ ಅರಮನೆ ರತ್ನಖಚಿತ ಸಿಂಹಾಸನ ವಿಸರ್ಜನೆ

ಮೈಸೂರು: ದಸರಾ ಬಳಿಕ ಸಂಪ್ರದಾಯದಂತೆ ಇಂದು ಅರಮನೆ ಸಿಂಹಾಸನವನ್ನು ವಿಸರ್ಜಿಸಲಾಯಿತು. ಅರಮನೆಯ ದರ್ಬಾರ್ ಹಾಲ್​ನಲ್ಲಿ ಶರನ್ನವರಾತ್ರಿಗೆ ಪೂಜೆ ಸಲ್ಲಿಸಲು ಜೋಡಿಸಲಾಗಿದ್ದ ರತ್ನ ಖಚಿತ ಸಿಂಹಾಸನವನ್ನು ಇಂದು ವಿಸರ್ಜನೆ ಮಾಡಲಾಯಿತು.

ರಾಜಪರಂಪರೆಯಂತೆ ಶರನ್ನವರಾತ್ರಿ ಆಚರಣೆಗೆ ಅಕ್ಟೋಬರ್ 1ರಂದು ಸಂಪ್ರದಾಯದಂತೆ ಜೋಡಣೆ ಮಾಡಲಾಗಿದ್ದ ಸಿಂಹಾಸನವನ್ನು ಇಂದು ಪೂಜೆ ಸಲ್ಲಿಸಿದ ಬಳಿಕ ವಿಸರ್ಜನೆ ಮಾಡಲಾಗಿದೆ. ಅಕ್ಟೋಬರ್ 1ರಂದು ಶುಕ್ರವಾರ ಭಾದ್ರಪದ ಮಾಸದ ಶುಕ್ಲಪಕ್ಷ ದಶಮಿಯ ಶುಭ ತುಲಾ ಲಗ್ನದಲ್ಲಿ ಬೆಳಗ್ಗೆ 9.15ರಿಂದ 9.30ರವರೆಗೆ ದರ್ಬಾರ್ ಹಾಲ್​ನಲ್ಲಿ ಚಿನ್ನದ ಸಿಂಹಾಸನವನ್ನು ಜೋಡಿಸಲಾಗಿತ್ತು.

ನಂತರ ಅಕ್ಟೋಬರ್ 7ರಿಂದ ಶರನ್ನವರಾತ್ರಿ ಆರಂಭವಾಗಿದ್ದು, ಅಂದು ಯದು ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಿ ಪೂಜೆ ಸಲ್ಲಿಸಿ ರಾಜಪರಂಪರೆಯಂತೆ ವಿಜಯದಶಮಿಯವರೆಗೆ ಖಾಸಗಿ ದರ್ಬಾರ್ ನಡೆಸಿದ್ದರು. ಅರಮನೆಯ ನೆಲಮಾಳಿಗೆಯ ಕೊಠಡಿಯಲ್ಲಿ ರತ್ನಖಚಿತ ಸಿಂಹಾಸನ ಬಿಡಿಬಿಡಿಯಾಗಿ ಇರುತ್ತದೆ.

ಬಿಡಿಬಿಡಿಯಾದ ಸಿಂಹಾಸನಕ್ಕೆ ವಿಶೇಷ ಪೂಜೆ, ಹೋಮ ಹವನ ನಡೆಸಿ, ದರ್ಬಾರ್ ಹಾಲ್​ನಲ್ಲಿ ಜೋಡಿಸಲಾಗುತ್ತದೆ. ಅಂದಿನಿಂದ ಪ್ರತಿದಿನ ಸಿಂಹಾಸನಕ್ಕೆ ರಾಜವಂಶಸ್ಥರು ಪೂಜೆ ಸಲ್ಲಿಸುತ್ತಾರೆ. ಇಂದು ಶುಭ ಲಗ್ನದಲ್ಲಿ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ ಬಳಿಕ ವಿಂಗಡಿಸಲಾಗಿದೆ. ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರ ಮಾರ್ಗದರ್ಶನದಲ್ಲಿ ಸಿಂಹಾಸನವನ್ನು ಬಿಡಿ ಬಿಡಿ ಭಾಗಗಳಾಗಿ ವಿಂಗಡಿಸಿ, ಅರಮನೆ ಕೆಳಗಿನ ಸ್ಟ್ರಾಂಗ್ ರೂಮ್​ಗೆ ತಂದು ಇಡಲಾಗಿದೆ.

ಅಲ್ಲಿಯೂ ಸಹ ಪೂಜೆ ಸಲ್ಲಿಸಿ, ರೂಮ್ ಬೀಗ ಹಾಕಿ ಸೀಲ್ ಮಾಡಲಾಗಿದೆ. ಮುಂದಿನ ವರ್ಷ ನವರಾತ್ರಿ ವೇಳೆ ಸೀಲ್ ಆದ ಕೊಠಡಿ ಬೀಗ ತೆಗೆದು ಮತ್ತೆ ಸಿಂಹಾಸನವನ್ನು ಶರನ್ನವರಾತ್ರಿ ಆಚರಣೆಗೆ ಸಿಂಹಾಸನ ಕೊಂಡೊಯ್ಯಲಾಗುತ್ತದೆ. ಸಿಂಹಾಸನ ವಿಸರ್ಜನೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಅರಮನೆಗೆ ಪ್ರವಾಸಿಗರು ಮತ್ತು ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಇನ್ನೂ ಮುಂದಿನ ವರ್ಷದ ದಸರಾ ಸಮಯದಲ್ಲಿಯೇ ಈ ರತ್ನಖಚಿತ ಸಿಂಹಾಸನವನ್ನ ದರ್ಬಾರ್ ಹಾಲ್ ನಲ್ಲಿ ನೋಡಬಹುದು.

Related Articles

Leave a Reply

Your email address will not be published.

Back to top button