Latest

Mysuru Dasara 2021: ವಿಶ್ವವಿಖ್ಯಾತ ಮೈಸೂರು ದಸರಾ ಕಾರ್ಯಕ್ರಮಕ್ಕೆ ನಾಳೆ ವಿದ್ಯುಕ್ತ ಚಾಲನೆ

ವರದಿ: ಅಶೋಕ್

ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ದಸರಾ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ ಬೆಳಗ್ಗೆ ನಾಡ ಅಧಿದೇವತೆ ಸನ್ನಿಧಿಯಲ್ಲಿ ದಸರೆಗೆ ಚಾಲನೆ‌ ಸಿಗಲಿದೆ. ಈಗಾಗಲೇ ಮೈಸೂರಿಗೆ ಆಗಮಿಸಿರುವ ದಸರಾ ಉದ್ಘಾಟಕ ಎಸ್‌ ಎಂ ಕೃಷ್ಣ ನಾಳೆ ಬೆಳಗ್ಗೆ ಚಾಮುಂಡೇಶ್ಚರಿ ದೇವಿಗೆ ಪೂಜೆ ಸಲ್ಲಿಸಿ ನಾಡಹಬ್ಬ ದಸರೆಗೆ ಚಾಲನೆ ನೀಡಲಿದ್ದಾರೆ. ಇದಕ್ಕಾಗಿ ಚಾಮುಂಡಿಬೆಟ್ಟ ಹಾಗೂ ಮೈಸೂರು ಮಧುವಣಗಿತ್ತಿಯಂತೆ ಸಿದ್ದವಾಗಿದೆ.

ಆಕರ್ಷಕ ಮಹಿಷಾಸುರ ಮರ್ಧನಿ ವಿಗ್ರಹ, ಬೃಹತ್ ವೇದಿಕೆ ಚಪ್ಪರ. ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಈಗಾಗಲೇ ದಸರೆಯ ಸಡಗರ ಸಂಭ್ರಮ ಮನೆ ಮಾಡಿದೆ. ವಿಶ್ವವಿಖ್ಯಾತ ನಾಡಹಬ್ಬ ದಸರಾ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ‌. ನಾಳೆ ಬೆಳಗ್ಗೆ 8.15ಕ್ಕೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದಸರಾಗೆ ಚಾಲನೆ ಸಿಗಲಿದೆ. ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ದಸರೆಗೆ ಚಾಲನೆ ನೀಡಲಿದ್ದಾರೆ. ನಾಡದೇವಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರೆಗೆ ಅಧಿಕೃತವಾಗಿ ಚಾಲನೆ ಸಿಗಲಿದೆ. ಇನ್ನು ಈಗಾಗಲೇ ಮೈಸೂರಿಗೆ ಆಗಮಿಸಿದ ದಸರಾ ಉದ್ಘಾಟಕರಾದ ಎಸ್ ಎಂ,ಕೃಷ್ಣ ಅವರಿಗೆ ಮೈಸೂರಿನ ರಿಂಗ್ ರಸ್ತೆಯಲ್ಲೇ ಆತ್ಮೀಯವಾಗಿ ಸ್ವಾಗತ ಕೋರಲಾಯಿತು. ಸದ್ಯ ಎಸ್ ಎಂ, ಕೃಷ್ಣ ಅವರು ಮೈಸೂರಿನ ಖಾಸಗಿ ಹೋಟೆಲ್‌ನಲ್ಲೇ ವಾಸ್ತವ್ಯ ಹೂಡಿದ್ದಾರೆ. ನಾಳೆ ಬೆಳಗ್ಗೆ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ದಸರಾಗೆ ಚಾಲನೆ‌ ನೀಡಲಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ ಸಿದ್ದತೆ ಜೋರಾಗಿ ನಡೆದಿದೆ. ಉದ್ಘಾಟನೆಗೆ 400 ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಎಸ್ ಟಿ ಸೋಮಶೇಖರ್ ಸೇರಿ ಸಂಸದರು ಶಾಸಕರು ಭಾಗಿಯಾಗಲಿದ್ದಾರೆ. ನಾಳೆ ಪುಷ್ಪಾರ್ಚನೆ ಮಾಡುವ ಮಹಿಷಾಸುರ ಮರ್ಧನಿ ರೂಪದ ಚಾಮುಂಡೇಶ್ವರಿ ವಿಗ್ರಹವನ್ನು ಇಂದು ದೇಗುಲದ ಅರ್ಚಕರು ಶುಚಿಗೊಳಿಸಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಸಿದ್ದಪಡಿಸಿದ್ದಾರೆ.

ಈಗಾಗಲೇ ಚಾಮುಂಡಿ ಬೆಟ್ಟದಲ್ಲಿ ಕೊನೆ ಹಂತದ ಸಿದ್ದತೆಗಳು ನಡೆಯುತ್ತಿದ್ದು, ವೇದಿಕೆ ಸೇರಿದಂತೆ ಗಣ್ಯರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ನಾಳೆ ಭಕ್ತರಿಗೂ ಕೂಡ ದಸರಾ ಉದ್ಘಾಟನೆಯಿರುವ ಕಾರಣ ಮಧ್ಯಾಹ್ನದ ಬಳಿಕ ನಾಡದೇವಿಯ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ.

ಸಿಎಂ ಬಸವರಾಜ್ ಬೊಮ್ಮಾಯಿ ಕೂಡ ಮೈಸೂರಿಗೆ ಆಗಮಿಸಿದ್ದಾರೆ. ಇಂದು ಕೆ ಆರ್ ಎಸ್‌ ನಲ್ಲಿ ವಾಸ್ತವ್ಯ ಹೂಡಲಿರುವ ಸಿಎಂ ನಾಳೆ ಬೆಳಗ್ಗೆ ಕೆ.ಆರ್.ಎಸ್.ನಿಂದ ನೇರವಾಗಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಗಮಿಸಲಿದ್ದಾರೆ. ಮೊದಲು ನಾಡದೇವಿಯ ದರ್ಶನ ಪಡೆದು ನಂತರ ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಅರಮನೆಯಲ್ಲೂ ಸಹ ರಾಜಪರಂಪರೆಯ ಖಾಸಗಿ ದಸರೆಯ ದರ್ಬಾರ್ ಜೋರಾಗಿ ನಡೆಯಲಿದೆ. ಕೊರೊನಾ ಭೀತಿಯ ಹಿನ್ನೆಲೆ ರಾಜಮನೆತನದವರಿಗೂ ಈ ಬಾರಿ ರಾಜ ಮನೆತನದ ದಸರೆಯಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿಲ್ಲ. ಮಾಧ್ಯಮ ಸೇರಿ ಸಾರ್ವಜನಿಕರಿಗೂ ನಿರ್ಬಂಧ ವಿಧಿಸಲಾಗಿದೆ. ನಾಳೆ ಬೆಳಗ್ಗೆ 5 ಗಂಟೆಯಿಂದಲೇ ಅರಮನೆಯಲ್ಲಿ ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳು ಹೋಮ ಹವನಗಳು ನಡೆಯಲಿವೆ. ಯದುವಂಶದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಂಕಣಧಾರಣೆ ಮಾಡಿಕೊಂಡು ಸಿಂಹಾಸನಕ್ಕೆ ಪೂಜೆ ಸಲ್ಲಿಸಲಿದ್ದಾರೆ. ನಂತರ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಒಟ್ಟಾರೆ ನಾಡಹಬ್ಬ ದಸರೆಗೆ ಕ್ಷಣಗಣನೆ ಆರಂಭವಾಗಿದ್ದು,‌ ವಿಶ್ವವಿಖ್ಯಾತ ದಸರಾ ಸರಳವಾದರೂ ಸಾಂಪ್ರದಾಯಿಕವಾಗಿ ಶ್ರದ್ದಾಪೂರ್ವಕವಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

Related Articles

Leave a Reply

Your email address will not be published.

Back to top button