ಜೆಡಿಎಸ್ ಪಕ್ಷವಲ್ಲಾ ಪ್ರಜ್ವಲ್, ನಿಖಿಲ್, ಅನಿತಾ, ಭಾವಾನಿ ಕಂಪನಿ: ಸಂಸದ ಶ್ರೀನಿವಾಸ್ ಪ್ರಸಾದ್ ವ್ಯಂಗ್ಯ
ಮೈಸೂರು: ಜೆಡಿಎಸ್ ಪಕ್ಷವಲ್ಲಾ ಅದು ಕಂಪನಿ, ಪ್ರಜ್ವಲ್, ನಿಖಿಲ್, ಭವಾನಿ, ಅನಿತಾ ನೀವೇ ಇದ್ರೆ ಅದನ್ನು ಪಕ್ಷ ಅನ್ನಲ್ಲ, ಕಂಪನಿ ಅಂತಾರೆ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ವ್ಯಂಗ್ಯವಾಡಿದ್ದಾರೆ. ಕುಮಾರಸ್ವಾಮಿ ತಮ್ಮ ಇತಿಮಿತಿ ಅರಿತು ಮಾತನಾಡಲಿ, ಯಾವಾಗಲಾದರೂ ಎರಡನೇ ಸ್ಥಾನಕ್ಕೆ ಬಂದು ನೀವು ಸಿಎಂ ಆಗಿದ್ದಾರಾ. ಮೂರನೇ ಸ್ಥಾನ ತೆಗೊಂಡು ಎರಡು ಬಾರಿ ಸಿಎಂ ಆದವರು ನೀವು ಎಂದು ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇನ್ನೂ ದೇವೇಗೌಡರು ರಾಜ್ಯದಲ್ಲಿ ಅತಂತ್ರ ಸರ್ಕಾರ ಬರೋದಕ್ಕೆ ಕಾರ್ಯ ತಂತ್ರ ರೂಪಿಸುತ್ತಲೇ ಇರುತ್ತಾರೆ ಎಂದರು. ನಂಜನಗೂಡು, ಗುಂಡ್ಲುಪೇಟೆ ಬೈ ಎಲೆಕ್ಷನ್ ನಲ್ಲಿ ಸಿದ್ದರಾಮಯ್ಯ ಸರ್ಕಾರ ಏನು ಮಾಡಿತು ಎಲ್ಲರಿಗೂ ಗೊತ್ತಿದೆ. ಸರ್ಕಾರದ ಆಡಳಿತ ಯಂತ್ರವನ್ನು ಅತೀ ಹೆಚ್ಚು ದುರ್ಬಳಕೆ ಮಾಡಿಕೊಂಡ್ರು. ನನ್ನ ವಿರುದ್ದ ಕಾಂಗ್ರೆಸ್ ಗೆ ಅಭ್ಯರ್ಥಿಯೇ ಇರಲಿಲ್ಲ. ಆಗ ಇದೇ ಜೆಡಿಎಸ್ ನವರು ನನ್ನ ವಿರುದ್ದ ಅಭ್ಯರ್ಥಿಯನ್ನೇ ಹಾಕಲಿಲ್ಲ. ಕಾಂಗ್ರೆಸ್ ಜೊತೆ ಕೈಜೋಡಿಸಿದ್ರು. ವಿವಿಧ ನಿಗಮಗಳಿಂದ ಕ್ಷೇತ್ರದ ಮತದಾರರಿಗೆ ಕೋಟಿಗಟ್ಟಲೆ ಸಾಲದ ಆಮಿಷ ಒಡ್ಡಿದ್ರು ಎಂದು ಕಾಂಗ್ರೆಸ್ ವಿರುದ್ದವೂ ಟೀಕೆ ಮಾಡಿದ್ರು.
ನೂರಾರು ಕೋಟಿ ರೂ. ತುಂಡು ಗುತ್ತಿಗೆ ನೀಡಿ ಕಾಮಗಾರಿ ಮಾಡಿದ್ರು. ಸೋತು ಸುಣ್ಣವಾಗಿರೋ ಕಾಂಗ್ರೆಸ್ಸಿಗರು ಆಡಳಿತದಲ್ಲಿದ್ದಾಗ ಏನೆಲ್ಲಾ ಮಾತನಾಡಿದ್ರು. ಈಗ ಬಿಜೆಪಿ ವಿರುದ್ದ ಮಾತನಾಡ್ತಾರೆ. ಬಾದಾಮಿಯಲ್ಲಿ 1600 ಓಟಿನಿಂದ ಗೆಲ್ಲದೇ ಹೋಗಿದ್ರು ಸಿದ್ದರಾಮಯ್ಯ ಏನಾಗುತ್ತಿದ್ರು. ಕಾಟೂರ್ ಫಾರಂ ಅಥವಾ ಸಿದ್ದರಾಮನ ಹುಂಡಿಗೆ ಹೋಗಿ ಹೊಲ ಉಳಬೇಕಾಗಿತ್ತು.
ಇಲ್ಲವಾದ್ರೆ ವಿಜಯನಗರ ಮನೆಯಲ್ಲಿ ಕಾಲ ಕಳೆಯಬೇಕಾಯಿತು. ವಿರೋಧ ಪಕ್ಷದವರಾಗಿ ಜವಾಬ್ದಾರಿಯುತವಾಗಿ ಮಾತನಾಡಬೇಕು. ತಾಕತ್ತಿದ್ರೆ ಸಿದ್ದರಾಮಯ್ಯ ಹೊಸ ಪಕ್ಷ ಕಟ್ಟಲಿ ನೋಡೋಣ ಎಂದು ಸವಾಲ್ ಹಾಕಿದರು.
ನೀವು ಎಂದಾದರೂ ಪಕ್ಷೇತರವಾಗಿ ನಿಂತು ಗೆದ್ದಿದ್ದೀರಾ. ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದವ್ರಿಗೆ ಭಾಷೆ ಮೇಲೆ ಹಿಡಿತವೇ ಇಲ್ಲ. ಪ್ರಧಾನಿ ಬಗ್ಗೆ ಹಗುರ ಮಾತು, ತಾಲಿಬಾನ್ ಆಡಳಿತವನ್ನು ಹೋಲಿಸುವುದು ಇದೆಲ್ಲಾ ಎಂಥಾ ಮಾತು. ದೇಶದ ಪ್ರಧಾನಿ ಹುದ್ದೆ ಅಂದ್ರೆ ಏನು ಅನ್ನೋದೆ ಸಿದ್ದರಾಮಯ್ಯ ಗೆ ಗೊತ್ತಿಲ್ಲ. 1984ರ ನಂತರ ಕೇಂದ್ರದಲ್ಲಿ ಸುಭದ್ರ ಸರಕಾರವೇ ಇರಲಿಲ್ಲ. ಮೋದಿ ಅವರಿಂದಾಗಿ ಕೇಂದ್ರದಲ್ಲಿ ಸುಭದ್ರ ಸರ್ಕಾರ ಬಂದಿದೆ. ಮೋದಿಯವರು ರಾಷ್ಟ್ಟ ಮಟ್ಟದ ರಾಜಕಾರಣದಲ್ಲಿ ಇರಲೇ ಇಲ್ಲ. ಅವರನ್ನು ಬಿಜೆಪಿ ಪ್ರಮೋಟ್ ಮಾಡಿ ಪ್ರಧಾನಿ ಮಾಡಿದೆ. ಅದಕ್ಕೆ ತಕ್ಕಂತೆ ಮೋದಿಯವರು ವಿಶ್ವ ನಾಯಕರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. ಇಂತಹವರ ಬಗ್ಗೆ ಲಘು ಮಾತು ನಿಜಕ್ಕೂ ನನಗೆ ಬೇಸರ ಮೂಡಿಸಿದೆ. ಎಂದು ಶ್ರೀನಿವಾಸಪ್ರಸಾದ್ ಹೇಳಿದರು.