Latestಸಿನಿಮಾ

ಪುನೀತ್ ರಾಜ್ ಕುಮಾರ್​​ಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡಿ: ರೇಣುಕಾಚಾರ್ಯ ಒತ್ತಾಯ

ದಾವಣಗೆರೆ: ಕನ್ನಡ ಚಿತ್ರರಂಗದ ಮೇರುನಟ ಡಾ ರಾಜ್ ಕುಮಾರ್ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ” ಭಾರತರತ್ನ'” ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರಿಗೆ ಮರಣೋತ್ತರವಾಗಿ ” ಪದ್ಮಶ್ರೀ ” ಪ್ರಶಸ್ತಿಯನ್ನು ನೀಡಬೇಕು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಮನವಿ ಮಾಡಿದ್ದಾರೆ.

ಈ ಕುರಿತು ಪ್ರಧಾನಿ ನರೇಂದ್ರಮೋದಿ, ಕೇಂದ್ರ ಸಚಿವ ಅನುರಾಗ್ ಠಾಕೂರ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲು ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಪ್ರತ್ಯೇಕವಾಗಿ ಪತ್ರ ಬರೆದಿದ್ದು, ಫಾಲ್ಕೆ ಪ್ರಶಸ್ತಿ ಪಡೆದ ಏಕೈಕ ನಟ ಡಾ.ರಾಜ್ ಕುಮಾರ್ ಅವರಿಗೆ ಭಾರತರತ್ನ ಪ್ರಶಸ್ತಿ ನೀಡುವುದು ಅತ್ಯಂತ ಸೂಕ್ತವಾದುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ಚಿತ್ರರಂಗದ ಮೇರು ನಟರಾಗಿದ್ದ ವರನಟ ಡಾ.ರಾಜ್ ಕುಮಾರ್ ಅವರು ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದರು. ಪ್ರತಿಷ್ಠಿತ ಫಾಲ್ಕೆ ಪ್ರಶಸ್ತಿಯ ಜೊತೆಗೆ ಅಮೇರಿಕಾದ ಕೆಂಟುಕಿ ಕೊಲೊನಲ್ ಪ್ರಶಸ್ತಿ ಪಡೆದ ಏಕೈಕ ನಟರಾಗಿದ್ದಾರೆ. ಅವರ ಅಭಿನಯದ 33 ಚಿತ್ರಗಳು 7 ಚಿತ್ರಗಳು ಇತರೆ ಭಾಷೆಗಳಿಗೆ ‌55 ಬಾರಿ ಪುನರ್ ನಿರ್ಮಾಣಗೊಂಡಿವೆ‌. ಅಮೆರಿಕದ ಪ್ರತಿಷ್ಠಿತ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಅಣ್ಣಾವ್ರು ಅವರನ್ನು ನಿಧನದ ಬಳಿಕವೂ ಭಾರತದ ಸುಪ್ರಸಿದ್ಧ ನಟನೆಂದು ಬಣ್ಣಿಸಿದೆ ಎಂದು ಹೇಳಿದ್ದಾರೆ.

ಇದೇ ರೀತಿ ಅತೀ ಚಿಕ್ಕವಯಸ್ಸಿನಲ್ಲೇ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಆಪಾರ ಮನ್ನಣೆ ಗಳಿಸಿ ಕನ್ನಡ ಚಿತ್ರರಂಗಕ್ಕೆ ಹೆಸರು ತಂದು ಕೊಟ್ಟು, ಹಠಾತ್ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರಿಗೆ ಮರಣೋತ್ತರವಾಗಿ ಪ್ರತಿಷ್ಠಿತ ” ಪದ್ಮಶ್ರೀ ” ಪ್ರಶಸ್ತಿಯನ್ನು ನೀಡಿ ಗೌರವಿಸಬೇಕು ಎಂದು ಆಗ್ರಹಿಸಿದ್ದಾರೆ.

ಅಭಿಮಾನಿಗಳ ಪಾಲಿನ ಪವರ್ ಸ್ಟಾರ್ ಖ್ಯಾತಿಯ ಪುನೀತ್ ರಾಜ್‍ಕುಮಾರ್ ಅವರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂಬುದು ಕನ್ನಡ ಚಿತ್ರರಂಗ, ಸಾರ್ವಜನಿಕ ವಲಯ ಹಾಗೂ ಅಭಿಮಾನಿಗಳು ಪುನೀತ್ ರಾಜ್‍ಕುಮಾರ್ ಅವರಿಗೆ ಅತ್ಯುನ್ನತ ಪ್ರಶಸ್ತಿಯಾದ ಪದ್ಮಶ್ರೀಯನ್ನು ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಇದನ್ನು ಸಕಾರಾತ್ಮಕವಾಗಿ ಪರಿಗಣಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಕರ್ನಾಟಕ ಮಾತ್ರವಲ್ಲದೆ ದೇಶ-ವಿದೇಶದಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದ ವರನಟ ಡಾ. ರಾಜ್‍ಕುಮಾರ್ ಪುತ್ರರೂ ಆಗಿರುವ ಪುನೀತ್‍ರಾಜ್‍ಕುಮಾರ್‍ ರವರಿಗೆ ಪದ್ಮಶ್ರೀ ಪುರಸ್ಕಾರವನ್ನು ನೀಡುವ ಮೂಲಕ ಅಗಲಿದ ಮೇರುನಟನಿಗೆ ಗೌರವ ಸಲ್ಲಿಸಬೇಕೆಂಬುದು ಇಡೀ ಕರ್ನಾಟಕ ಜನತೆಯ ಒತ್ತಾಸೆಯಾಗಿದೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

ಯಾವ ಪ್ರಶಸ್ತಿ ಗೌರವಗಳಿಗಿಂತಲೂ ಪುನೀತ್ ರಾಜ್ ಕುಮಾರ್ ಜನತೆಯಿಂದ ಗಳಿಸಿರುವ ಪ್ರೀತಿ- ಅಭಿಮಾನ ದೊಡ್ಡದು.ಪುನೀತ್ ರಾಜ್ ಕುಮಾರ್ ಬದುಕಿದ್ದರೆ ತನ್ನ ನಟನೆ ಮತ್ತು ಸಾಮಾಜಿಕ ಕಾಳಜಿಯಿಂದಾಗಿ ಖಂಡಿತ ಪಡೆಯುತ್ತಿದ್ದರು. ಪದ್ಮಶ್ರಿ ಪ್ರಶಸ್ತಿಯನ್ನು ಅವರಿಗೆ ಮರಣೋತ್ತರವಾಗಿ ನೀಡಬೇಕೇಂದು ಎಂದು ತಿಳಿಸಿದ್ದಾರೆ.

ಕೇವಲ ಸಿನಿಮಾ ಕ್ಷೇತ್ರಕ್ಕೆ ಗುರುತಿಸಿಕೊಳ್ಳದ ಪುನೀತ್ ರಾಜ್ ಕುಮಾರ್ ಅನೇಕ ಸಮಾಜ‌ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದರು. ನಿಜ ಜೀವನದಲ್ಲಿ ಪುನೀತ್ ರಾಜ್ ಕುಮಾರ್ ರಾಜಕುಮಾರನಾಗಿಯೇ ಮೆರೆದರು. ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ವೃದ್ಧರ ಮತ್ತು ಅನಾಥರ ಪೋಷಣೆ ಜತೆಗೆ ಹೆಣ್ಣು ಮಕ್ಕಳಿಗೆ ಶಿಕ್ಷಣ ಧಾರೆ ಎರೆದಿದ್ದರು. ತಾನು ಸಮಾಜಕ್ಕೆ ಈ ಕೊಡುಗೆ ಕೊಟ್ಟಿದ್ದೇನೆ ಎಂದು ಎಲ್ಲೂ ಬಹಿರಂಗಪಡಿಸದೇ ಸಮಾಜ ಸೇವೆ ಮಾಡುತ್ತಿದ್ದರು ಎಂದು ಹೇಳಿದ್ದಾರೆ.

ವೃದ್ಧರಿಗೆ ಅನಾಥಶಾಶ್ರಮಗಳಿಗೆ ಹಾಗೂ ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ನೆರವು ನೀಡುತ್ತಾ, ಅನೇಕ ಅನಾಥ ಮಕ್ಕಳ ಪೋಷಣೆ, ಗೋ ಶಾಲೆಗಳನ್ನು ಪೋಷಣೆ ಮಾಡುತ್ತಿದ್ದರು. ಎಲ್ಲಿಯೂ ನಾನು ಸಮಾಜ ಸೇವಕ ಎಂದು ಬಿಂಬಿಸಿಕೊಂಡಿರಲಿಲ್ಲ. ಈ ಮೂಲಕ ದೊಡ್ಡಮನೆಯ ದೊಡ್ಡತನ ಮೆರೆದಿದ್ದರೆಂದು ಕೊಂಡಾಡಿದ್ದಾರೆ.

ಪುನೀತ್ ರಾಜ್ ಕುಮಾರ್ ಸುಮಾರು 26 ಕ್ಕಿಂತಲೂ ಹೆಚ್ಚು ಅನಾಥಾಶ್ರಮ, 19 ಗೋಶಾಲೆ, 16 ವೃದ್ಧಾಶ್ರಮಗಳನ್ನು ಪೋಷಣೆ ಮಾಡುತ್ತಿದ್ದರು. ಮಾತ್ರವಲ್ಲದೇ ಸುಮಾರು 45 ಕ್ಕೂ ಹೆಚ್ಚು ಹೆಚ್ಚು ಶಾಲಾ ಮಕ್ಕಳನ್ನು ಓದಿಸುತ್ತಿದ್ದರು. ಮಿಗಿಲಾಗಿ ಶಕ್ತಿಧಾಮ ಮೂಲಕ ಸಾವಿರಾರು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದರು. ಪುನೀತ್ ಮಾಡಿರುವ ಸೇವೆ, ಮೆರೆಯುತ್ತಿದ್ದ ಹೃದಯ ಶ್ರೀಮಂತಿಕೆ ಎಲ್ಲರಿಗೂ ಅನುಕರಣೀಯ ಎಂದು ತಿಳಿಸಿದ್ದಾರೆ.

ಒಟ್ಟು 29 ಕನ್ನಡ ಚಿತ್ರಗಳಲ್ಲಿ‌ ನಾಯಕ ನಟರಾಗಿ 26 ಚಿತ್ರಗಳಲ್ಲಿ ಬಾಲನಟನಾಗಿ ಸೇರಿದಂತೆ 46 ಸಿನಿಮಾಗಳಲ್ಲಿ ನಟಿಸಿ ಅತೀ ಚಿಕ್ಕವಯಸ್ಸಿನಲ್ಲೇ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದ ಹೆಗ್ಗಳಿಕೆಯೂ ಅವರದ್ದಾಗಿತ್ತು. ಅವರ ಈ ಎಲ್ಲಾ ಸಾಧನೆಯನ್ನು ಪರಿಗಣಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ತಕ್ಷಣವೇ ಘೋಷಣೆ ಮಾಡುವ ಮೂಲಕ ಕನ್ನಡಿಗರ ಆಸೆಯನ್ನು ‌ಈಡೇರಿಸಬೇಕು ಎಂದು ರೇಣುಕಾಚಾರ್ಯ ಅವರು ಮನವಿ ಮಾಡಿದ್ದಾರೆ.

ಸಮಾಜ ಸೇವೆಯಲ್ಲಿ ಕೈ ಜೋಡಿಸುವೆ:

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಮಾಜ ಸೇವೆಯಲ್ಲಿ ತಾವು ಕೂಡ ಕೈ ಜೋಡಿಸುವುದಾಗಿ ರೇಣುಕಾಚಾರ್ಯ ಅವರು ಆಶ್ವಾಸನೆ ನೀಡಿದರು.

ಬೆಂಗಳೂರಿನ ಸದಾಶಿವನಗರದಲ್ಲಿರುವ ಪುನೀತ್ ರಾಜ್ ಕುಮಾರ್ ನಿವಾಸಕ್ಕೆ ತಮ್ಮ ಕುಟುಂಬದವರ ಜೊತೆ ತೆರಳಿ ಸಾಂತ್ವನ ಹೇಳಿದರು. ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಹಾಗೂ ಮತ್ತಿತರರನ್ನು ಭೇಟಿಯಾದ ಅವರು, ಈಗಾಗಲೇ ತಾವು ಕೂಡ ಅನೇಕ ಸಮಾಜ‌ ಸೇವೆಗಳನ್ನು ಮಾಡುತ್ತಾ ಬಂದಿದ್ದೇನೆ. ಪುನೀತ್ ರಾಜ್ ಕುಮಾರ್ ಅವರ ಸಾಮಾಜಿಕ ಸೇವೆಗಳಲ್ಲಿ ತಾವು ಕೈ ಜೋಡಿಸಿ ಕೈಲಾದ ಸೇವೆ ಮಾಡುವ ಭರವಸೆ ನೀಡಿದರು. ಪುನೀತ್ ರಾಜ್ ಕುಮಾರ್ ರವರ ಕುಟುಂಬ ಅನುಮತಿ ನೀಡಿದಲ್ಲಿ, ಮೈಸೂರಿನ ಶಕ್ತಿಧಾಮದಲ್ಲಿ ಪುನೀತ್ ರಾಜ್ ಕುಮಾರ್ ನೆರವಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 1800 ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ನಮ್ಮ ಕುಟುಂಬದಿಂದಲೂ ಸಹ ಪ್ರತಿ ವರ್ಷ ನೆರವು ನೀಡಲಾಗುವುದು. ಇದೇ ರೀತಿ ಎಲ್ಲಾ ರಾಜಕಾರಣಿಗಳು ನೆರವು ನೀಡಲು ಮುಂದೆ ಬಂದಲ್ಲಿ, ಈ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬಾ ಅನುಕೂಲಕರವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಮರಣೋತ್ತರ ನೇತ್ರ ದಾನ:

ಕೋವಿಡ್ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಜನಸಾಮಾನ್ಯರ ರಕ್ಷಣೆಗಾಗಿ ಸೇವೆ ಮಾಡಿದ್ದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ-ನ್ಯಾಮತಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಇದೀಗ ಮತ್ತೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ಪ್ರತಿಭಾವಂತ ಯುವನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ನಿಧನರಾದ ಸಂದರ್ಭದಲ್ಲಿ ತಮ್ಮ ಕಣ್ಣುಗಳನ್ನು ಬೇರೊಬ್ಬರಿಗೆ ದಾನ ಮಾಡಿ ಬೆಳುಕು ನೀಡುವ ಮೂಲಕ ಸಾವಿನಲ್ಲಿ ಸಾರ್ಥಕ ಮೆರೆದಿದ್ದರು. ಈಗ ಇದರಿಂದ ಪ್ರೇರಣೆಗೊಂಡಿರುವ ಎಂ.ಪಿ.ರೇಣುಕಾಚಾರ್ಯ ಮತ್ತು ಅವರ ಕುಟುಂಬದವರು ಮರಣೋತ್ತರ ನಂತರ ತಮ್ಮ ನೇತ್ರಗಳನ್ನು ದಾನ ಮಾಡುವ ಮಹತ್ವದ ನಿರ್ಧಾರವನ್ನು ಇಂದು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನಲ್ಲಿ ಇಂದು ಸಂಜೆ 5 ಗಂಟೆಗೆ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದಲ್ಲಿ ರೇಣುಕಾಚಾರ್ಯ ಅವರ ಅಭಿಮಾನಿಗಳು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ಅವಳಿ ಕ್ಷೇತ್ರದ ವತಿಯಿಂದ ‌ಶ್ರದ್ದಾಂಜಲಿ ಹಾಗೂ ಸಂಗೀತ ನಮನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ವರನಟ ಡಾ.ರಾಜ್‍ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್ ಅವರ ನೂರಾರು ಅಭಿಮಾನಿಗಳು ತಮ್ಮ ನೇತ್ರಗಳನ್ನು ದಾನ ಮಾಡಲು ತಮ್ಮ ಹೆಸರುಗಳನ್ನು ನೋಂದಾಯಿಸುವ ಮಹತ್ವದ ನಿರ್ಧಾರವನ್ನು ಘೋಷಣೆ ಮಾಡಲಿದ್ದಾರೆ.

ಇಂದು ಸಂಜೆ ನಡೆಯುವ ಶ್ರದ್ದಾಂಜಲಿ ಹಾಗೂ ಸಂಗೀತ ನಮನ ಕಾರ್ಯಕ್ರಮವನ್ನು ನಟರಾಜ್ ಎಂಟ್ರನೈರ್ಸ್ ಸಾರಥ್ಯದಲ್ಲಿ ಖ್ಯಾತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್, ಕಲಾವಿದರಾದ ಹೊನ್ನವಳ್ಳಿ ಕೃಷ್ಣ ಹಾಗೂ ಟೆನ್ನಿಸ್ ಕೃಷ್ಣ ಭಾಗವಹಿಸಲಿದ್ದಾರೆ.

Related Articles

Leave a Reply

Your email address will not be published.

Back to top button