ನಾಳೆ ಕಾಂಗ್ರೆಸ್ ಪಾಲಿಗೆ ನಿರಾಶೆಯ ಫಲಿತಾಂಶ ಬರಲಿದೆ: ಸಚಿವ ಸುನೀಲ್ ಕುಮಾರ್
ಉಡುಪಿ: ನಾಳೆಯ ಉಪಚುನಾವಣೆ ಫಲಿತಾಂಶ ಬಿಜೆಪಿ ಪರ ಬರಲಿದ್ದು ರಾಜ್ಯದ ಜನರಿಗೆ ಆಶಾದಾಯಕವಾಗಲಿದೆ ಮತ್ತು ಕಾಂಗ್ರೆಸ್ ಪಾಲಿಗೆ ನಿರಾಶೆಯ ಫಲಿತಾಂಶ ಆಗಲಿದೆ ಎಂದು ಸಚಿವ ಸುನೀಲ್ ಕುಮಾರ್ ಭವಿಷ್ಯ ನುಡಿದಿದ್ದಾರೆ.
ರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಉಪಚುನಾವಣೆ ಬಗ್ಗೆ ಡಿ.ಕೆ ಶಿವಕುಮಾರ್ ಇದು ಮುಂದಿನ ಚುನಾವಣೆಯ ದಿಕ್ಸೂಚಿ ಅಲ್ಲ ಎಂದು ಹೇಳುವ ಮೂಲಕ ಪ್ರಾರಂಭದಲ್ಲೇ ಸೋಲನ್ನು ಒಪ್ಪಿಕೊಂಡಿದ್ದಾರೆ. ನಾವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದೇವೆ. ಎರಡೂ ಕಡೆ ನಮ್ಮ ಗೆಲುವು ನಿಶ್ಚಿತ ಎಂದರು.
ನಾಳೆಯ ಫಲಿತಾಂಶ ಮುಂದೆ ಬರಲಿರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯ ದಿಕ್ಸೂಚಿಯಾಗಲಿದೆ. ರಾಜ್ಯದ ಜನ ಬಿಜೆಪಿಯ ಎರಡು ವರ್ಷದ ಆಡಳಿತ ಮೆಚ್ಚಿ ಮತ ಹಾಕಿದ್ದು ಎರಡೂ ಕಡೆ ನಮ್ಮ ಪರ ಫಲಿತಾಂಶ ಬರಲಿದೆ ಎಂದು ಹೇಳಿದರು.
ಪುನೀತ್ ರಾಜಕುಮಾರ್ ನಿಧಾನ ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟ:
ಪುನೀತ್ ರಾಜಕುಮಾರ್ ನಿಧಾನ ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಸರಕಾರ ಎಲ್ಲಾ ಎಚ್ಚರಿಕೆಗಳ ತೆಗೆದುಕೊಂಡು ಶ್ರದ್ಧಾಂಜಲಿ ಅರ್ಪಿಸಿದೆ. ಪುನೀತ್ ರಾಜಕುಮಾರ್ ಗೆ ರಾಜ್ಯೋತ್ಸವ ಕೊಡಬೇಕು ಎಂಬ ಮಾತು ಎಲ್ಲಾ ಕಡೆಗಳಿಂದ ಕೇಳಿಬಂತು. ನಿಯಮಾವಳಿ ಮತ್ತು ಕೋರ್ಟ್ ಆದೇಶದ ಪ್ರಕಾರ ಮರಣೋತ್ತರ ಪ್ರಶಸ್ತಿಗೆ ಅವಕಾಶವಿಲ್ಲ. ಅವಕಾಶ ಇಲ್ಲದ ಕಾರಣ ಈ ಬೇಡಿಕೆ ಪರಿಗಣಿಸಲು ಸಾಧ್ಯವಾಗಿಲ್ಲ ಎಂದರು.
ಮುಂದಿನ ದಿನಗಳಲ್ಲಿ ಪುನೀತ್ ರಾಜಕುಮಾರ್ ಸೇವೆಯನ್ನ ಪರಿಗಣಿಸುತ್ತೇವೆ. ಯಾವ ರೀತಿಯ ಗೌರವ ಕೊಡಬೇಕು ಎಂದು ಸರ್ಕಾರ ತೀರ್ಮಾನ ಮಾಡುತ್ತದೆ. ಈಗಲೇ ಯಾವುದೇ ತರಾತುರಿಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ದೀಪಾವಳಿ ನಂತರ ಸಭೆ ನಡೆಸಿ ಗೌರವ ಸಲ್ಲಿಕೆ ಬಗ್ಗೆ ತೀರ್ಮಾನ ಮಾಡಲಿದೆ. ಪುನೀತ್ ಗೆ ವಿಶೇಷ ಗೌರವ ಕೊಡಲು ರಾಜ್ಯ ಸರ್ಕಾರ ಉತ್ಸುಕವಾಗಿದೆ ಎಂದು ತಿಳಿಸಿದರು.