Latest

ಚಾಮುಂಡಿ ಬೆಟ್ಟ ಭೂಕುಸಿತ ತಡೆಗೆ ಖಾಯಂ ಪರಿಹಾರ ಕೈಗೊಳ್ಳುವಂತೆ ಸರ್ಕಾರಕ್ಕೆ ಪತ್ರ

ಮೈಸೂರು : ಚಾಮುಂಡಿ ಬೆಟ್ಟ ಭೂಕುಸಿತ ತಡೆಗೆ ಖಾಯಂ ಪರಿಹಾರದ ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲರಿಗೆ ಪತ್ರದ ಮೂಲಕ ಮನವಿ ಮಾಡಲಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್​.ಟಿ.ಸೋಮಶೇಖರ್​ ತಿಳಿಸಿದ್ದಾರೆ.

ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ ವಿಶ್ವ ಪ್ರಸಿದ್ಧವಾಗಿದೆ. ದೇವಿಯ ದರ್ಶನಕ್ಕಾಗಿ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಅಪಾರ ಸಂಖ್ಯೆಯ ಭಕ್ತರು, ಪ್ರವಾಸಿಗರು ಆಗಮಿಸುತ್ತಾರೆ. ವಿಶೇಷ ದಿನಗಳಂದು ಸಹಸ್ರಾರು ಸಂಖ್ಯೆಯ ವಾಹನಗಳು ಬಂದು ಹೋಗುತ್ತವೆ. ಹೀಗಾಗಿ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ ಎಂದರು.

ಚಾಮುಂಡಿಬೆಟ್ಟದ ಹಸಿರು, ಪ್ರಾಕೃತಿಕ ಸೌಂದರ್ಯ ಸವಿಯಲು ಚಾರಣಪ್ರಿಯರು ಬರುತ್ತಾರೆ. ಹಲವು ವೈಶಿಷ್ಟ್ಯಗಳಿಂದ ಕೂಡಿರುವ ಈ ಬೆಟ್ಟದಲ್ಲಿ ಕಳೆದ ಮೂರು ವರ್ಷಗಳ ಅಂತರದಲ್ಲಿ ಎರಡು ಬಾರಿ ಭೂಕುಸಿತ ಉಂಟಾಗಿ ರಸ್ತೆ ಕುಸಿದು ತೀವ್ರ ಆತಂಕ ತಂದೊಡ್ಡಿದೆ. 2019ರಲ್ಲಿ ದೊಡ್ಡ ಪ್ರಮಾಣದಲ್ಲಿ ರಸ್ತೆ ಕುಸಿದಿತ್ತು. ರಿಟೇನಿಂಗ್ ಆರ್​ಸಿಸಿ ಗೋಡೆ ನಿರ್ಮಿಸಿ ಆ ರಸ್ತೆಯನ್ನು ದುರಸ್ಥಿಪಡಿಸಲಾಗಿದೆ.

ಆ ಘಟನೆ ನಡೆದ ಸುಮಾರು 100 ಮೀಟರ್ ಅಂತರದಲ್ಲಿ ಇತ್ತೀಚೆಗೆ ಅಕ್ಟೋಬರ್ 20 ರಂದು ಮತ್ತೊಮ್ಮೆ ಭಾರಿ ಪ್ರಮಾಣದಲ್ಲಿ ರಸ್ತೆ ಕುಸಿದು ಆತಂಕ ಉಂಟು ಮಾಡಿದೆ ಎಂದು ಸಚಿವರು ಪತ್ರದಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಈ ಸಮಸ್ಯೆಗೆ ಶಾಶ್ವತವಾದ ಪರಿಹಾರ ಕಂಡುಕೊಳ್ಳಬೇಕಾಗಿದೆ.

ಚಾಮುಂಡಿಬೆಟ್ಟದಲ್ಲಿ ಸುಮಾರು 8 ಕಿ.ಮೀ. ರಸ್ತೆ ಇದ್ದು, ಉದ್ದಕ್ಕೂ ರಿಟೇನಿಂಗ್ ಆರ್​ಸಿಸಿ ಗೋಡೆ ನಿರ್ಮಿಸಿ ರಸ್ತೆ ಅಭಿವೃದ್ಧಿಪಡಿಸುವುದರಿಂದ ಶಾಶ್ವತ ಪರಿಹಾರ ಕಂಡು ಕೊಳ್ಳಬಹುದಾಗಿದೆ. ಇದಕ್ಕಾಗಿ ಸುಮಾರು 150 ಕೋಟಿ ರೂ. ಅನುದಾನ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ ಎಂದು ಪತ್ರದಲ್ಲಿ ಸಚಿವರು ಉಲ್ಲೇಖಿಸಿದ್ದಾರೆ. ಚಾಮುಂಡಿಬೆಟ್ಟ ರಸ್ತೆಯ ಭೂಕುಸಿತಕ್ಕೆ ಶಾಶ್ವತವಾದ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಾವು ಅನುದಾನ ಒದಗಿಸಿ, ಬೇಗ ಕೆಲಸ ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಕೊಡುತ್ತೇನೆ.

ಪದೇ ಪದೇ ಭೂಕುಸಿತ ಉಂಟಾಗಿರುವುದರಿಂದ ಚಾಮುಂಡಿಬೆಟ್ಟದ ಮಣ್ಣಿನ ಪರೀಕ್ಷೆಯನ್ನು ಸಹ ಮಾಡುವುದು ಸೂಕ್ತವಾಗಿದ್ದು, ಇದಕ್ಕಾಗಿ ತಜ್ಞರ ಸಮಿತಿಯನ್ನೂ ಕೂಡಲೇ ಕಳುಹಿಸಬೇಕಾಗಿ ಕೋರುತ್ತೇನೆ ಎಂದು ಮನವಿ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button