Latest

ಕನ್ನಡ ನೆಲ, ಜಲ, ಭಾಷೆ ರಕ್ಷಣೆಗೆ ಸರ್ಕಾರ ಹೆಗಲು ಕೊಟ್ಟಿದೆ, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಬದ್ದ: ಸಚಿವ ನಾರಾಯಣಗೌಡ

ಮಂಡ್ಯ : ನಮ್ಮ ಮಂಡ್ಯ ಜಿಲ್ಲೆಯ ಜನರೆಲ್ಲರೂ ಕನ್ನಡವನ್ನೇ ಮಾತನಾಡುತ್ತಾರೆ. ಬೇರೆ ಯಾವುದೇ ಭಾಷೆಯ ಹಾವಳಿ ನಮ್ಮ ಜಿಲ್ಲೆಯಲ್ಲಿ ಇಲ್ಲ. ಇದು ನಮ್ಮ ಜಿಲ್ಲೆ ಕನ್ನಡಕ್ಕೆ ನೀಡಿದ ದೊಡ್ಡ ಕೊಡುಗೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಸಂತಸ ವ್ಯಕ್ತಪಡಿಸಿದರು.

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಅವರು, ಸರ್. ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದರು. ಅವರು ತೆರೆದ ವಾಹನದಲ್ಲಿ ಪರೇಡ್ ವೀಕ್ಷಣೆ ಹಾಗೂ ಪಥ ಸಂಚಲನದ ಬಳಿಕ ಜಿಲ್ಲೆಯ ಜನತೆಗೆ ಸಂದೇಶ ನೀಡಿದರು.

ಸಕ್ಕರೆ ನಾಡು ಮಂಡ್ಯ ಜಿಲ್ಲೆಗೆ ನಮ್ಮ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಿದ್ದು, ಕಾಮಗಾರಿ ತೀವ್ರಗತಿಯಲ್ಲಿ ಸಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 2,63,433 ರೈತ ಫಲಾನುಭವಿಗಳಿಗೆ ಒಟ್ಟು ರೂ. 394 ಕೋಟಿ ಸಹಾಯಧನ ಪಾವತಿಸಲಾಗಿದೆ. ಕೃಷಿ ಯಾಂತ್ರೀಕರಣ ಕಾರ್ಯಕ್ರಮದಡಿ 19,511 ರೈತರಿಗೆ ವಿವಿಧ ಯಂತ್ರೋಪಕರಣಗಳನ್ನು ವಿತರಿಸಲಾಗಿದೆ ಎಂದು ಸಚಿವರು ಹೇಳಿದರು.

ಮಂಡ್ಯ ಜಿಲ್ಲೆಯ 1204 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಯೋಜನೆ ‘ಜಲಧಾರೆ ಯೋಜನೆ’ಗೆ ರೂ.1791 ಕೋಟಿ ಮೊತ್ತದ ಕಾಮಗಾರಿ ಮಂಜೂರು ಮಾಡಲಾಗಿದ್ದು 2024 ರೊಳಗೆ ಕಾಮಗಾರಿ ಪೂರ್ಣಗೊಳಿಸುವ ವಿಶ್ವಾಸವಿದೆ. ಜಿಲ್ಲೆಯ ರೈತರ ಆರ್ಥಿಕ ಜೀವನಾಡಿಯಾಗಿರುವ ಮೈ ಷುಗರ್ ಸಕ್ಕರೆ ಕಾರ್ಖಾನೆಯನ್ನು ಸರ್ಕಾರವೇ ನಡೆಸಲು ಸಾಧ್ಯವಿರುವ ಎಲ್ಲಾ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಡಾ. ನಾರಾಯಣಗೌಡ ಅವರು ಹೇಳಿದರು.

ಅಲ್ಲದೇ, ಮುಖ್ಯಮಂತ್ರಿಗಳು ಘೋಷಿಸಿದ ಅಮೃತ ಮಹೋತ್ಸವ ಯೋಜನೆಯಡಿ ಜಿಲ್ಲೆಯ 27 ಗ್ರಾಮ ಪಂಚಾಯ್ತಿ, 27 ಗ್ರಾಮೀಣ ವಸತಿ ಯೋಜನೆ, 25 ಶಾಲಾ ಸೌಲಭ್ಯ ಯೋಜನೆ, 25 ಆರೋಗ್ಯ ಮೂಲ ಸೌಕರ್ಯ ಉನ್ನತ್ತೀಕರಣ, 25 ಅಂಗನವಾಡಿ ಕೇಂದ್ರಗಳು ಹಾಗೂ 325 ಸ್ವ ಸಹಾಯ ಕಿರು ಉದ್ದಿಮೆಗಳನ್ನು ಆಯ್ಕೆ ಮಾಡಲಾಗಿದೆ.
ಜನರ ಆರ್ಶಿವಾದದಿಂದ ಆಡಳಿತಕ್ಕೆ ಬಂದ ನಮ್ಮ ಸರ್ಕಾರ ಹಲವಾರು ಜನಪರ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಹೇಳಿದರು.

ನಮ್ಮ ಸರ್ಕಾರ ಕನ್ನಡದ ನೆಲ, ಜಲ, ಭಾಷೆಗೆ ಎಲ್ಲ ರೀತಿಯಲ್ಲು ಹೆಗಲು ಕೊಟ್ಟಿದೆ. ಮುಂದೆಯೂ ಕೊಡುತ್ತದೆ. ಕನ್ನಡ ನಮ್ಮ ಬದುಕು ಹಾಗೂ ಉಸಿರು. ಇದನ್ನು ಉಳಿಸೋಣ ಬೆಳೆಸೋಣ ಎಂದು ಸಚಿವ ಡಾ.ನಾರಾಯಣಗೌಡ ಅವರು ಕರೆ ನೀಡಿದರು.

ಇದೆ ವೇಳೆ ಕನ್ನಡ ರಾಜ್ಯೋತ್ಸವದ ರಾಜ್ಯ ಪ್ರಶಸ್ತಿಗೆ ಭಾಜನರಾದ ಮಂಡ್ಯ ಜಿಲ್ಲೆಯ ಡಾ. ರಾಮಕೃಷ್ಣೆಗೌಡ ಅವರಿಗೆ ಸಚಿವ ಡಾ.ನಾರಾಯಣಗೌಡ ಅವರು ಅಭಿನಂದಿಸಿ, ಸನ್ಮಾನಿಸಿದರು.

ಮಂಡ್ಯ ಶಾಸಕ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ, ವಿಧಾನಪರಿಷತ್ ಸದಸ್ಯ ಅಪ್ಪಾಜಿಗೌಡ, ನಗರಸಭೆ ಅಧ್ಯಕ್ಷ ಮಂಜು, ಜಿಲ್ಲಾಧಿಕಾರಿ ಅಶ್ವಥಿ ಸೇರಿದಂತೆ ಹಲವರು ಉಪಸ್ಥಿತರಿದ್ದರು .

Related Articles

Leave a Reply

Your email address will not be published.

Back to top button