ದಲಿತರ ಕಾಲನಿಯಲ್ಲಿ ಗೋಪೂಜೆಗೈದ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ
ಉಡುಪಿ: ರಾಜ್ಯದಲ್ಲೇ ಮೊದಲ ಬಾರಿಗೆ ಎಂಬಂತೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿಯವರು ಉಡುಪಿಯ ಪರಿಶಿಷ್ಟ ಪಂಗಡದವರ ಕಾಲೊನಿಯಲ್ಲಿ ಗೋಪೂಜೆ ನೆರವೇರಿಸಿ ಗಮನಸೆಳೆದರು.
ದೀಪಾವಳಿ ಪ್ರಯುಕ್ತ ಉಡುಪಿ ದೊಡ್ಡಣ ಗುಡ್ಡೆಯಲ್ಲಿರುವ ಅಂಬೇಡ್ಕರ್ ಕಾಲೋನಿಯಲ್ಲಿ ಕೇವಲ ಮೂರು ಸೆಂಟ್ಸ್ ಜಾಗದಲ್ಲಿ ಸುಮಾರು 60 ಶುದ್ಧ ದೇಶಿ ಹಸುಗಳನ್ನು ಯಾವುದೇ ಲಾಭದ ಉದ್ದೇಶವಿಲ್ಲದೇ ಪೋಷಿಸುತ್ತಿರುವ ದಲಿತ ವಿಧವೆ ಕಮಲಮ್ಮನ ಗೋಶಾಲೆಗೆ ಉಡುಪಿ ಶಾಸಕ ರಘುಪತಿ ಭಟ್ ಜೊತೆ ಆಗಮಿಸಿದ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿಯವರು ಗೋಪೂಜೆ ನೆರವೇರಿಸಿದರು.
ಗೋಪೂಜಾ ಸಂಕಲ್ಪ ವಿಧಿ ನೆರವೇರಿಸಿದ ಬಳಿಕ ಗೋವಿನ ಪದಕ್ಕೆ ನೀರೆರೆದು, ಹಣೆಗೆ ಅರಶಿನ ಕುಂಕುಮ ಹಚ್ಚಿ, ಮೈಮೇಲೆ ಸೀರೆ ರವಿಕೆ ಕಣ ಪುಷ್ಪ ಮಾಲೆ ಹಾಕಿ, ಅವಲಕ್ಕಿ, ಅರಳು ಮಿಶ್ರಿತ ಕಜ್ಜಾಯವನ್ನು ಅರ್ಪಿಸಿ ಮಂಗಳಾರತಿ ಬೆಳಗಿದರು. ಪುರೋಹಿತ ಪದ್ಮನಾಭ ಆಚಾರ್ಯರು ಪೂಜಾವಿಧಿ ನೆರವೇರಿಸಿದರು. ಉಳಿದ ಹಸುಗಳಿಗೂ ಗೋಗ್ರಾಸ ನೀಡಲಾಯಿತು. ಸಾಮೂಹಿಕ ಪ್ರಾರ್ಥನೆ ನಡೆಯಿತು.
ಬಳಿಕ ಇಲಾಕಜೆಯ ವತಿಯಿಂದ ಕಮಲಮ್ಮ ಮತ್ತು ಅವರ ಮಗನಿಗೆ ಸಚಿವರು ಹೊಸ ಬಟ್ಟೆ ಮತ್ತು ಸಹಿತಿಂಡಿಯನ್ನು ಹಾಗೂ ಹಸುಗಳಿಗೆ ಒಂದು ಕ್ವಿಂಟಾಲ್ ಹಿಂಡಿಯನ್ನು ಉಡುಗೊರೆಯಾಗಿ ನೀಡಿದರು.