ಬೆಳಗಾವಿ: ಮೃತರ ಕುಟುಂಬಸ್ಥರಿಗೆ ಪರಿಹಾರದ ಚೆಕ್ ವಿತರಿಸಿದ ಸಚಿವ ಕಾರಜೋಳ
ಬೆಳಗಾವಿ: ತಾಲೂಕಿನ ಬಡಾಲ ಅಂಕಲಗಿಯಲ್ಲಿ ನಡೆದ ಘನಘೋರ ದುರಂತದಲ್ಲಿ ಏಳು ಮಂದಿ ಸಾವನ್ನಪ್ಪಿರುವ ಹಿನ್ನೆಲೆ ಮೃತರ ಕುಟುಂಬಸ್ಥರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಲಸಂಪನ್ಮೂಲ ಸಚಿವರು ಆದ ಗೋವಿಂದ ಕಾರಜೋಳ ಅವರು ಸಾಂತ್ವನ ಹೇಳಿದ್ದಾರೆ.
ಬಡಾಲ ಅಂಕಲಗಿಯಲ್ಲಿ ನಡೆದ ದುರಂತ ನಿಜಕ್ಕೂ ಮಹಾ ದುರಂತ. ಮನೆ ಕುಸಿದು ಭೀಮಪ್ಪ ಖನಗಾವಿ ಕುಟುಂಬದ ಕುಟುಂಬದ ಆರು ಮಂದಿ ಮತ್ತು ಎದುರು ಮನೆಯ ಓರ್ವ ಬಾಲಕಿ ಸಾವನ್ನಪ್ಪಿದ್ದರಿಂದ ಇಡೀ ಗ್ರಾಮದಲ್ಲಿ ಸ್ಮಶಾನದ ವಾತಾವರಣ ನಿರ್ಮಾಣವಾಗಿದೆ. ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಕೂಡ ಸಂತಾಪ ಸೂಚಿಸಿದ್ದಾರೆ. ಗುರುವಾರ ಬೆಳಿಗ್ಗೆ ಬಡಾಲ ಅಂಕಲಗಿಯಲ್ಲಿ ಮೃತರ ಮನೆಗಳಿಗೆ ಭೇಟಿ ನೀಡಿದ ಸಚಿವ ಗೋವಿಂದ ಕಾರಜೋಳ ಅವರು ಸಾಂತ್ವನ ಹೇಳಿದರು. ಇದೇ ವೇಳೆ ಪರಿಹಾರದ ಚೆಕ್ನ್ನು ವಿತರಿಸಿದರು.
ಇದೇ ವೇಳೆ ಮಾತನಾಡಿದ ಗೋವಿಂದ ಕಾರಜೋಳ ಅವರು ಅಮವಾಸ್ಯೆ ದಿನ ಬಡವರ ಮನೆ ಬಿದ್ದು 7 ಜನರ ಸಾವು ಅತ್ಯಂತ ನೋವಿನ ಸಂಗತಿ. ಪರಿಹಾರ ಕೊಡಬಹುದು ಆದರೇ ಪ್ರಾಣ ಕೊಡಲು ಸಾಧ್ಯವಿಲ್ಲ. ಮೃತರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಅಲ್ಲದೇ ಪ್ರಧಾನಿ ಮೋದಿಯವರು ತಲಾ ಒಬ್ಬರಿಗೆ 2 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಮಕ್ಕಳ ಕಲ್ಯಾಣ ನಿಧಿಯಿಂದ ಮೂರು ಜನ ಮಕ್ಕಳಿಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಕುಟುಂಬಕ್ಕೆ ಆಗಿರೋ ನೋವಿನಲ್ಲಿ ನಾನು ಭಾಗಿ ಆಗುತ್ತೇನೆ. ಮನೆ ನಿರ್ಮಾಣಕ್ಕೆ 5 ಲಕ್ಷ ರೂಪಾಯಿ ನೀಡುತ್ತೇವೆ ಎಂದು ಭರವಸೆ ನೀಡಿದರು.
ಇನ್ನು ಬೆಳಗಾವಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಅಪಾಯದಲ್ಲಿ ಇರೋ ಮನೆಗಳ ಬಗ್ಗೆ ಸರ್ವೆ ಮಾಡಲು ಜಿಲ್ಲಾಧಿಕಾರಿ, ಸಿಇಓಗೆ ಸೂಚನೆ ನೀಡುತ್ತೇನೆ. ತಾತ್ಕಾಲಿಕವಾಗಿ ಶಿಫ್ಟ್ ಮಾಡಲು ಸೂಚನೆ ನೀಡಿದ್ದೇನೆ. ಗ್ರಾಮದಲ್ಲಿ ಪಿಡಿಓ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸರ್ವೇ ಮಾಡಲಾಗುವುದು. ಉತ್ತರ ಕರ್ನಾಟಕದಲ್ಲಿ ಕಲ್ಲು, ಮಣ್ಣನಿಂದ ಮನೆ ನಿರ್ಮಾಣ ಮಾಡಲಾಗುತ್ತದೆ. ಸರ್ಕಾರ ಮುಂದಿನ ದಿನದಲ್ಲಿ ಸಿಮೆಂಟ್ನಿಂದ ಮನೆ ನಿರ್ಮಾಣಕ್ಕೆ ಕ್ರಮ ವಹಿಸಲಿದೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ, ಜಿ.ಪಂ.ಸಿಇಓ ದರ್ಶನ್, ಡಿಸಿಪಿ ಡಾ.ವಿಕ್ರಮ್ ಆಮ್ಟೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.