ಪ್ರತಿಭಟನೆ ನೆಪದಲ್ಲಿ ಸರ್ಕಾರವನ್ನ ನಿಂದಿಸಿದ ಎಂಇಎಸ್ ಕಾರ್ಯಕರ್ತರು
ಬೆಳಗಾವಿ: ನಗರದಲ್ಲಿ ಮತ್ತೆ ಎಂಇಎಸ್ ತನ್ನ ಚಾಳಿಯನ್ನು ಮುಂದುವರೆಸಿದ್ದು, ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳ ಮುಂದೆಯೇ ನಾಲಾಯಕ್ ಕರ್ನಾಟಕ ಸರಕಾರ ಎಂದು ಘೋಷಣೆ ಕೂಗಿದ್ದಾರೆ. ಚುನಾವಣಾ ನಂತರ ಹತಾಶೆಗೊಂಡಿರುವ ಎಂಇಎಸ್ ಕಾರ್ಯಕರ್ತರು ಅಧಿಕಾರಿಗಳ ಮುಂದೆ ತಮ್ಮ ನಾಲಗೆ ಹರಿಬಿಟ್ಟು ಪುಂಡಾಟಿಕೆ ಮೆರೆದು ಮತ್ತೆ ತನ್ನ ಉದ್ಧಟತನ ಪ್ರದರ್ಶಿಸಿದೆ.
ಬೆಳಗಾವಿಯಲ್ಲಿ ನಾಮಫಲಕಗಳಲ್ಲಿ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯ ಜೊತೆಗೆ ಮರಾಠಿ ಭಾಷೆ ಬಳಕೆ ಮಾಡಬೇಕು. ಪಾಲಿಕೆ ಮೇಲಿನ ಕನ್ನಡ ಧ್ವಜವನ್ನು ತೆಗೆದುಹಾಕಬೇಕು, ಇಲ್ಲವೇ ಪಾಲಿಕೆ ಮೇಲೆ ಭಗವಾ ಧ್ವಜ ಹಾಕಲು ಅವಕಾಶ ನೀಡಬೇಕು, ಕರಾಳ ದಿನ ಆಚರಣೆಗೆ ಅನುಮತಿ ನೀಡಬೇಕು ಎಂದು ಇಂದು ಮತ್ತೆ ಎಂಇಎಸ್ ತನ್ನ ಹಳೆ ಚಾಳಿ ಮುಂದಿವರೆಸಿದೆ.
ಬೆಳಗಾವಿಯ ನಗರದ ಸಂಭಾಜಿ ವೃತ್ತದಲ್ಲಿ ಸೇರಿದ್ದ ಎಂಇಎಸ್ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಕೂಗಾಟ ಹಾರಾಟ ನಡೆಸಿದರು, ಈ ವೇಳೆ ಡಿಸಿ ಕಚೇರಿಗೆ ಹೋಗಲು ಪ್ರಯತ್ನಿಸಿ ಕೊನೆಗೆ ರಸ್ತೆಯಲ್ಲೇ ಪ್ರತಿಭಟನೆಗೆ ಕುಳಿತರು ಈ ವೇಳೆ ಸ್ಥಳಕ್ಕೆ ಖುದ್ದಾಗಿ ಆಗಮಿಸಿದ ಅಪರ ಜಿಲ್ಲಾಧಿಕಾರಿ ಮನವಿ ಸ್ವೀಕರಿಸಿ ಪ್ರತಿಭಟನಾಕಾರರನ್ನ ತಿಳಿಗೊಳಿಸಿದರು.