ಸುಳ್ಳು ಹೇಳಿ ಜನರನ್ನು ಯಾಮಾರಿಸೋದೆ ಪ್ರಧಾನಿ ಮೋದಿ ಕಾಯಕವಾಗಿದೆ: ಮಲ್ಲಿಕಾರ್ಜುನ ಖರ್ಗೆ
ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಒಬ್ಬ ಸುಳ್ಳಿನ ಸರದಾರ. ಪೆಟ್ರೋಲ್, ಡೀಸಲ್, ಗ್ಯಾಸ್ ದರ ಮಿತಿ ಮೀರಿದೆ. ನಿಯಂತ್ರಣಕ್ಕೆ ತರುವ ಬದಲಾಗಿ ಬರೀ ಸುಳ್ಳು ಹೇಳಿ ಜನರನ್ನು ಮರಳು ಮಾಡುವುದರಲ್ಲಿ ಮಾತ್ರ ಮೋದಿ ನಿಸ್ಸೀಮರು ಎಂದು ಮೋದಿ ವಿರುದ್ಧ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಕಲಬುರ್ಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದೆ ನಮ್ಮ ಕಾಲದಲ್ಲಿ ಕಚ್ಚಾ ತೈಲ ಬೆಲೆ ಬ್ಯಾರೆಲ್ ಗೆ 100 ರಿಂದ 130 ಡಾಲರ್ ಗೆ ಹೋಗಿತ್ತು. ಆಗ ನಾವು ಲೀಟರ ಪೆಟ್ರೋಲ್ ಗೆ 60 ರಿಂದ 70 ರೂ. ಗೆ ಕೊಟ್ಟಿದ್ವಿ. ಈಗ ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ 50 ರೂ. ಆಸುಪಾಸಿನಲ್ಲಿದೆ. ಆದರೂ ಪೆಟ್ರೋಲ್ ದರ ನೂರು ರೂಪಾಯಿ ದಾಟಿದೆ. ಬೆಲೆ ಏರಿಕೆ ಬಗ್ಗೆ ಲೋಕಸಭೆಯಲ್ಲಿ ಚರ್ಚೆಗೆ ಮೋದಿ ಒಂದೇ ಒಂದು ದಿನವೂ ತಯಾರಿಲ್ಲ ಎಂದು ಖರ್ಗೆ ಆಕ್ರೋಶವನ್ನು ವ್ಯಕ್ತಪಡಿಸಿದರು.
ಇದೆ ವೇಳೆ, ಜನ ವ್ಯಾಕ್ಸಿನ್ ತೊಗೊಂಡ್ರೆ ದುಷ್ಪರಿಣಾಮ ವಿಪಕ್ಷಗಳಿಗೆ ಆಗಿದೆ ಎಂಬ ಮೋದಿ ಟೀಕೆಗೆ ತೀರುಗೇಟು ನೀಡಿದ ಖರ್ಗೆ, ಮೋದಿ ಅವರದ್ದು ಚಿಲ್ಲರೇ ಮಾತು ಅಂತಹ ಚಿಲ್ಲರೆ ಮಾತುಗಳಿಗೆ ಜಾಸ್ತಿ ಮಹತ್ವ ಕೊಡಬೇಡಿ. ಅವರು ಸುಳ್ಳನ್ನೇ ಸಾವಿರ ಸಲ ಹೇಳಿ ಸತ್ಯ ಮಾಡಲು ಹೊರಟಿದ್ದಾರೆ. ಅಡ್ವಾನಿ ಅವರಂತ ಹಿರಿಯರು ಎದುರು ಬಂದ್ರೂ ನೋಡದೇ ಹೋಗುವ ಗುಣ ಮೋದಿಯದ್ದು ಅಂತ ಗುಡುಗಿದರು.