Latestಅಂಕಣಗಳು

ಲಖೀಂಪುರ ಖೇರಿಯಲ್ಲಿ ರೈತರ ಹತ್ಯೆ ಮತ್ತು ವರುಣ್ ಗಾಂಧಿ ಧ್ವನಿ

ಬಿಜೆಪಿಯೊಳಗಿನ ಸದ್ಯದ ಸನ್ನಿವೇಶ ವರುಣ್ ಗಾಂಧಿಗೆ ಪ್ರತಿಕೂಲವಾಗಿರುವುದು ಮತ್ತು ಅವರು ಪಕ್ಷದೊಳಗೆ ಮೂಲೆಗುಂಪಾಗಿರುವುದನ್ನು ಗಮನದಲ್ಲಿಟ್ಟುಕೊಂಡರೂ, ಆ ಕಾರಣಕ್ಕೆ ಮಾತ್ರವೇ ಅವರು ಗೋಡ್ಸೆವಾದಿಗಳ ವಿರುದ್ಧ ನಿಂತರೆಂದಾಗಲೀ, ರೈತರ ಪರವಾಗಿ ಮಾತನಾಡುತ್ತಿದ್ದಾರೆ ಎಂದಾಗಲೀ ಅಂದುಕೊಳ್ಳುವುದಕ್ಕಿಂತ, ಇಂಥ ಹೊತ್ತಲ್ಲಿ ಆ ಪಕ್ಷದೊಳಗಿಂದಲೇ ಬಂದಿರುವ ಒಂದು ಭಿನ್ನ ಧ್ವನಿ ಅದೆಂಬುದು ಮುಖ್ಯವೆನ್ನಿಸುತ್ತದೆ. ಈ ಮುಂಚೆಲ್ಲ ದ್ವೇಷಭಾಷಣವನ್ನೇ ಮಾಡಿಕೊಂಡು ಬಂದಿರುವ ವರುಣ್ ಗಾಂಧಿ ರಾಜಕೀಯ ನಡೆ ಏನೇ ಇದ್ದರೂ, ವರುಣ್ ಈಗಿನ ಮಾತನ್ನು ಬಿಜೆಪಿ ಅರಗಿಸಿಕೊಳ್ಳಲಾಗದು.

ತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ರೈತರನ್ನೇ ಕೊಲೆಗೈಯುವಂಥ ವಿಪರೀತವೊಂದು ನಡೆದಿರುವುದು ತಲ್ಲಣಕ್ಕೆ ಕಾರಣವಾಗಿದೆ. ಮತ್ತು ಇದರ ಹಿಂದೆ ಇರುವುದು ಆಡಳಿತಾರೂಢ ಬಿಜೆಪಿಯವರೇ ಎಂಬುದು ಬಯಲಾಗಿದೆ.

ಹಿಂಸಾಚಾರ ಪ್ರತಿಭಟನಾ ನಿರತ ರೈತರಿಂದಲೇ ಶುರುವಾಯಿತು ಎಂದು ಬಿಂಬಿಸುವ ಯತ್ನಗಳ ನಡುವೆಯೇ, ಶಾಂತ ರೀತಿಯಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ ರೈತರ ಮೇಲೆ ಕಾರು ಹರಿಸುವಂಥ ಪರಮ ನೀಚ ಕೃತ್ಯಕ್ಕೆ ಯಾರು ಮುಂದಾದರು ಮತ್ತು ಅದು ಶಾಂತಿಯುತ ಪ್ರತಿಭಟನೆಯಿಂದ ಹಿಂಸೆಗೆ ತಿರುಗುವಂತೆ ಹೇಗೆ ರೈತರನ್ನು ಕೆರಳಿಸಿತು ಎಂಬುದು ಕೂಡ ಈಗ ನಿಚ್ಚಳ.

ಅತ್ಯಂತ ಘೋರವೊಂದು ಹೀಗೆ ಯೋಗಿ ಆದಿತ್ಯನಾಥ್ ಸರ್ಕಾರವಿರುವ ಉತ್ತರ ಪ್ರದೇಶದಲ್ಲಿ ನಡೆದಾಗ, ಮಾರನೇ ದಿನ ಬೆಳಗ್ಗಿನಿಂದ ಹೊಣೆಗೇಡಿ ಮಾಧ್ಯಮಗಳು ಆ ವಿಚಾರ ಬದಿಗಿಟ್ಟು ಶಾರುಖ್ ಖಾನ್ ಮಗ ಡ್ರಗ್ ಕೇಸ್​ನಲ್ಲಿ ಬಂಧಿತನಾಗಿರುವ ವಿಚಾರವನ್ನು ಎತ್ತಿಕೊಂಡು ಕರ್ಕಶವಾಗಿ ಕಿರುಚುತ್ತಿದ್ದವು. ಇನ್ನೊಂದೆಡೆ ಪ್ರತಿಪಕ್ಷಗಳನ್ನು ಉತ್ತರ ಪ್ರದೇಶ ಸರ್ಕಾರ ಲಖೀಂಪುರ ಖೇರಿಗೆ ಹೋಗದಂತೆ ನಿರ್ಬಂಧಿಸಿತ್ತು. ಅಲ್ಲಿ ಇಂಟರ್​ನೆಟ್ ಸಂಪರ್ಕ ಕಡಿತಗೊಳಿಸಲಾಗಿತ್ತು.

ಹೀಗೆ ಲಖೀಂಪುರ ಖೇರಿಯಲ್ಲಿನ ಘನಘೋರ ಕೃತ್ಯವನ್ನು ರೈತರ ಕಾರಣದಿಂದ ಉಂಟಾದ ಹಿಂಸಾಚಾರ ಎಂದು ಮುಗಿಸಿಬಿಡುವ ಹುನ್ನಾರವೊಂದು ಒಳಗೊಳಗೇ ನಡೆದಿದ್ದಾಗ, ಆ ಒಂದು ಧ್ವನಿ ರೈತರ ಪರವಾಗಿ ಕೇಳಿಬಂತು. ಮತ್ತು ಆ ಧ್ವನಿ ಕರಾಳ ಘಟನೆ ನಡೆದ ಉತ್ತರ ಪ್ರದೇಶದಿಂದಲೇ ಬಂದಿತ್ತು; ಮಾತ್ರವಲ್ಲ, ಆಡಳಿತಾರೂಢ ಬಿಜೆಪಿಯ ಸಂಸದರೊಬ್ಬರ ಧ್ವನಿಯಾಗಿತ್ತು ಅದು. ಹಾಗೆ, ಇಡೀ ಬಿಜೆಪಿ ಒಂದು ಬಗೆಯಲ್ಲಿದ್ದರೆ ಭಿನ್ನ ಧ್ವನಿಯೆತ್ತಿ, ಇಡೀ ಘಟನೆಯ ಕರಾಳತೆಯ ಬಗ್ಗೆ ದೇಶದ ಗಮನ ಹರಿಯುವಂತೆ ಮಾಡಿದವರು ಸಂಸದ ವರುಣ್ ಗಾಂಧಿ.

ಎದೆ ನಡುಗಿಸುವಂಥ ವಿಡಿಯೋ ಅಲ್ಲಿತ್ತು

ಭಾನುವಾರ ನಡೆದ ರೈತರ ಹತ್ಯೆ ಘಟನೆ ಸಂಬಂಧ ಮಂಗಳವಾರ ಬೆಳಗ್ಗೆ ಇಡೀ ದೇಶವೇ ಬೆಚ್ಚಬೀಳುವಂಥ ವಿಡಿಯೋವೊಂದರ ಜೊತೆ ಬಿಜೆಪಿ ಸಂಸದ ವರುಣ್ ಗಾಂಧಿ ಟ್ವೀಟ್ ಮಾಡಿದ್ದರು. ಲಖೀಂಪುರ ಖೇರಿಯಲ್ಲಿ ಏನಾಯಿತೆಂಬುದುನ್ನು ಹೇಳುತ್ತಿದ್ದ ಆ ವಿಡಿಯೋವನ್ನು ಹಂಚಿಕೊಂಡಿದ್ದ ವರುಣ್ ಗಾಂಧಿ, ಯಾರದೇ ಎದೆ ನಡುಗಿಸುವಂಥ ದೃಶ್ಯ ಇದು ಎಂದು ಬರೆದಿದ್ದರು. ರೈತರ ಮೇಲೆ ಅಮಾನವೀಯವಾಗಿ ಕಾರು ಹರಿಸಲಾಗಿದ್ದ ದೃಶ್ಯವನ್ನು ತೋರಿಸುತ್ತಿತ್ತು ಆ ವಿಡಿಯೋ.

ರೈತರ ಮೇಲೆ ಕಾರು ಹರಿಸಿರುವ ಈ ವಿಡಿಯೋ ಯಾರ ಎದೆಯನ್ನೂ ನಡುಗಿಸುವಂತಿದೆ. ಪೊಲೀಸರು ಈ ವಿಡಿಯೋವನ್ನು ಗಮನಿಸಬೇಕು ಮತ್ತು ಅದರಲ್ಲಿರುವ ಕಾರಿನ ಮಾಲೀಕ ಯಾರೆಂಬುದನ್ನು ಪತ್ತೆ ಹಚ್ಚಬೇಕು. ಕಾರಿನಲ್ಲಿದ್ದವರು ಮತ್ತು ಘಟನೆಗೆ ಕಾರಣರಾದವರನ್ನು ತಕ್ಷಣವೇ ಬಂಧಿಸಬೇಕು. ಘಟನೆ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆಯಾಗಬೇಕು ಎಂದು ಹಿಂದಿಯಲ್ಲಿದ್ದ ಆ ಟ್ವೀಟ್​ನಲ್ಲಿ ಉತ್ತರ ಪ್ರದೇಶದ ಪಿಲಿಭಿಟ್​ನ ಸಂಸದ ವರುಣ್ ಗಾಂಧಿ ಒತ್ತಾಯಿಸಿದ್ದರು.

ಇಷ್ಟಾದ ಮೇಲೂ, ಲಖೀಂಪುರ ಖೇರಿಗೆ ಹೋಗಲು ಮುಂದಾದ ಪ್ರತಿಪಕ್ಷದವರನ್ನು ತಡೆಯಲಾಯಿತು ಮತ್ತು ಬಂಧಿಸಲಾಯಿತೇ ಹೊರತು, ಹಿಂಸಾಚಾರಕ್ಕೆ ಕಾರಣನಾಗಿದ್ದಾನೆ ಎನ್ನಲಾದ ಕೇಂದ್ರ ಗೃಹಖಾತೆ ರಾಜ್ಯ ಸಚಿವ ಅಜಯ್ ಶರ್ಮಾ ಪುತ್ರನನ್ನು ಉತ್ತರ ಪ್ರದೇಶ ಪೊಲೀಸರು ಇವತ್ತಿನವರೆಗೂ ಬಂಧಿಸಿಯೇ ಇಲ್ಲ. ಆತನ ವಿರುದ್ಧ ಕೊಲೆ ಕೇಸ್ ದಾಖಲಿಸುವ ನಾಟಕ ಮಾತ್ರ ನಡೆಯಿತು.

ಮತ್ತೆ ವಿಡಿಯೋ ಹಂಚಿಕೊಂಡ ವರುಣ್

ಇಂದು ಅಂದರೆ ಗುರುವಾರ ಮತ್ತೆ ವರುಣ್ ಗಾಂಧಿ ಈ ವಿಚಾರವನ್ನೆತ್ತಿದ್ದಾರೆ. ವಿಡಿಯೋದ ಹೊಸ ತುಣುಕೊಂದನ್ನು ಹಂಚಿಕೊಂಡು ಟ್ವೀಟ್ ಮಾಡಿರುವ ಅವರು, ಅಮಾಯಕ ರೈತರ ನೆತ್ತರು ಹರಿದ ವಿಚಾರಕ್ಕೆ ಹೊಣೆ ಹೊರಬೇಕಿದೆ ಎಂದು ಆಗ್ರಹಿಸಿದ್ದಾರೆ.

ದೀರ್ಘವಾದ ಮತ್ತು ಉತ್ತಮ ಗುಣಮಟ್ಟದಲ್ಲಿರುವ ಈ ವಿಡಿಯೋ ಭಾನುವಾರ ಲಖೀಂಪುರ ಖೇರಿಯಲ್ಲಿ ಏನಾಯಿತೆಂಬುದನ್ನು ಸ್ಪಷ್ಟವಾಗಿ ತೋರಿಸುತ್ತಿದೆ. ಕಪ್ಪು ಬಣ್ಣದ ಎಸ್​ಯುವಿ ಕಾರು (ಅದರಲ್ಲಿ ಸಚಿವ ಅಜಯ್ ಮಿಶ್ರಾ ತಮ್ಮ ಕುಟುಂಬದೊಂದಿಗಿದ್ದರು ಎಂಬುದು ದೃಢವಾಗಿದೆ) ಶಾಂತಿಯುತ ಪ್ರತಿಭಟನೆಯಲ್ಲಿ ತೊಡಗಿದ್ದ ರೈತರ ಮೇಲೆ ಹರಿದ ದೃಶ್ಯ ಅದರಲ್ಲಿದೆ.

ಈ ವಿಡಿಯೋ ಅತ್ಯಂತ ಸ್ಪಷ್ಟವಾಗಿದೆ. ಕೊಲ್ಲುವ ಮೂಲಕ ಪ್ರತಿಭಟನಾ ನಿರತರ ದನಿಯನ್ನು ಅಡಗಿಸಲಾಗದು. ಅಮಾಯಕ ರೈತರ ನೆತ್ತರು ಹರಿದ ಘಟನೆಗೆ ಸಂಬಂಧಿಸಿ ಹೊಣೆ ಹೊರಬೇಕಿದೆ. ಪ್ರತಿಯೊಬ್ಬ ರೈತನ ಮನಸ್ಸಿನಲ್ಲಿಯೂ ಈ ಕರಾಳ ಘಟನೆಯ ಬಗೆಗಿರುವ ಆಕ್ರೋಶ ಕ್ರೂರ ರೂಪ ತಾಳುವ ಮೊದಲು ಅವರಿಗೆ ನ್ಯಾಯ ದೊರಕಬೇಕಿದೆ ಎಂದು ವರುಣ್ ಗಾಂಧಿ ಟ್ವೀಟ್​ನಲ್ಲಿ ಒತ್ತಾಯಿಸಿದ್ದಾರೆ.

ಲಖೀಂಪುರ ಖೇರಿಯಲ್ಲಿ ರೈತರನ್ನು ಕೊಲ್ಲಲಾದ ಘಟನೆಯನ್ನು ಉಗ್ರವಾಗಿ ಟೀಕಿಸುತ್ತಿರುವ ಬಿಜೆಪಿಯ ಏಕೈಕ ಸಂಸದ ವರುಣ್ ಗಾಂಧಿ ಎಂಬುದು ಗಮನಾರ್ಹ. ಪ್ರತಿಪಕ್ಷದವರ ದನಿಗಿಂತಲೂ ವರುಣ್ ದನಿಯಲ್ಲಿ ತೀವ್ರತೆಯಿರುವುದು ಕೂಡ ಅಷ್ಟೇ ನಿಚ್ಚಳ.

ವರುಣ್ ಟ್ವಿಟರ್ ಹ್ಯಾಂಡಲ್​ನಲ್ಲಿ ಬಿಜೆಪಿ ಇಲ್ಲ

ಇನ್ನೂ ಒಂದು ವಿಚಾರವನ್ನು ಇಲ್ಲಿ ಗಮನಿಸಬೇಕು. ಲಖೀಂಪುರ ಖೇರಿ ಘಟನೆಯ ಬಗ್ಗೆ ಮೊದಲ ಟ್ವೀಟ್ ಮಾಡುವ ಮುಂಚಿನ ದಿನವೇ ಅಂದರೆ ಸೋಮವಾರವೇ ವರುಣ್ ಗಾಂಧಿ ತಮ್ಮ ಟ್ವಿಟರ್ ಹ್ಯಾಂಡಲ್​ನಿಂದ ಬಿಜೆಪಿ ಎಂಬುದನ್ನು ತೆಗೆದಿದ್ದಾರೆ. ಅದು, ಅವರು ಬಿಜೆಪಿ ತೊರೆಯಲಿದ್ದಾರೆ ಎಂಬ ದಟ್ಟ ವದಂತಿಯೊಂದು ಹಬ್ಬಲು ಕಾರಣವಾಗಿದೆ. ಅಲ್ಲದೆ, ರೈತರ ಪ್ರತಿಭಟನೆಯನ್ನು ಬೆಂಬಲಿಸುತ್ತಿರುವುದಕ್ಕಾಗಿ ಪಕ್ಷವೇ ಅವರನ್ನು ಉಚ್ಚಾಟಿಸಿದರೂ ಅಚ್ಚರಿಯಿಲ್ಲ ಎಂಬ ವಿಶ್ಲೇಷಣೆಗಳೂ ಇನ್ನೊಂದೆಡೆಗಿವೆ.

ಮಂಗಳವಾರದ ಟ್ವೀಟ್​ಗೂ ಮೊದಲು ಸೋಮವಾರ ಅವರು ಲಖೀಂಪುರ ಖೇರಿ ಘಟನೆಯಲ್ಲಿ ಸಾವಿಗೀಡಾದ ರೈತರಿಗೆ ಶ್ರದ್ಧಾಂಜಲಿ ಅರ್ಪಿಸಿ ಟ್ವೀಟ್ ಮಾಡಿದ್ದರು. ಕರುಳು ಹಿಂಡುವಂಥ ಘಟನೆಯಲ್ಲಿ ಹುತಾತ್ಮರಾದವರು ಎಂದು ರೈತರನ್ನು ಬಣ್ಣಿಸಿದ್ದ ವರುಣ್, ಕಠಿಣ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದರು. ಅನ್ನದಾತರಾಗಿರುವ ರೈತರ ಮೇಲೆ ವಾಹನ ಹರಿಸಿ ಕೊಂದಿರುವುದು ನಾಗರಿಕ ಸಮಾಜದಲ್ಲಿ ಅಕ್ಷಮ್ಯ ಎಂದು ಅವರು ಹೇಳಿದ್ದರು. ಪ್ರತಿಭಟನೆಯಲ್ಲಿ ತೊಡಗಿರುವ ರೈತರು ನಮ್ಮದೇ ನಾಗರಿಕರು. ರೈತರೊಂದಿಗೆ ನಾವು ಅತ್ಯಂತ ಸಹನೆಯಿಂದ ವರ್ತಿಸಬೇಕು. ಅತ್ಯಂತ ಸೂಕ್ಷ್ಮತೆಯಿಂದ, ಗಾಂಧಿವಾದ ಮತ್ತು ಪ್ರಜಾಸತ್ತಾತ್ಮಕ ನೆಲೆಯಲ್ಲಿ ಕಾನೂನಿನ ಚೌಕಟ್ಟು ದಾಟದೆ ರೈತರನ್ನು ನಡೆಸಿಕೊಳ್ಳಬೇಕು ಎಂದು ವರುಣ್ ಪ್ರತಿಪಾದಿಸಿದ್ದರು.

ಗೋಡ್ಸೆವಾದಿಗಳ ವಿರುದ್ಧ

ಇದೆಲ್ಲದಕ್ಕೂ ಮೊದಲು ಗಾಂಧಿ ಜಯಂತಿಯ ದಿನ ಕೂಡ ವರುಣ್ ಟ್ವೀಟ್ ಬಿಜೆಪಿ ಮತ್ತು ಆರ್​ಎಸ್​ಎಸ್​ ಧೋರಣೆಯನ್ನು ನೇರವಾಗಿಯೇ ಕುಟುಕುವ ಹಾಗಿತ್ತು. ಗಾಂಧಿ ಜಯಂತಿಯ ದಿನ ಗೋಡ್ಸೆ ಜಿಂದಾಬಾದ್ ಎಂದು ಟ್ವೀಟ್ ಮಾಡುವವರು ಹೊಣೆಗೇಡಿಗಳಾಗಿ ದೇಶವನ್ನು ಅಪಮಾನಿಸುತ್ತಿದ್ದಾರೆ ಎಂದು ಅಂದು ವರುಣ್ ಹೇಳಿದ್ದರು.

ಗಾಂಧಿ ಜಯಂತಿಯಂದು ನಾಥೂರಾಂ ಗೋಡ್ಸೆ ಜಿಂದಾಬಾದ್ ಎಂಬುದು ಟ್ವಿಟರ್​ನಲ್ಲಿ ಟ್ರೆಂಡಿಂಗ್​ ಆಗಿತ್ತು. ಅದಕ್ಕೆ ಪ್ರತಿಯಾಗಿ ವರುಣ್ ಮಾಡಿದ್ದ ಟ್ವೀಟ್ ಇದಾಗಿತ್ತು.

ಬಿಜೆಪಿಯೊಳಗಿನ ಸದ್ಯದ ಸನ್ನಿವೇಶ ವರುಣ್ ಗಾಂಧಿಗೆ ಪ್ರತಿಕೂಲವಾಗಿರುವುದು ಮತ್ತು ಅವರು ಪಕ್ಷದೊಳಗೆ ಮೂಲೆಗುಂಪಾಗಿರುವುದನ್ನು ಗಮನದಲ್ಲಿಟ್ಟುಕೊಂಡರೂ, ಆ ಕಾರಣಕ್ಕೆ ಮಾತ್ರವೇ ಅವರು ಗೋಡ್ಸೆವಾದಿಗಳ ವಿರುದ್ಧ ನಿಂತರೆಂದಾಗಲೀ, ರೈತರ ಪರವಾಗಿ ಮಾತನಾಡುತ್ತಿದ್ದಾರೆ ಎಂದಾಗಲೀ ಅಂದುಕೊಳ್ಳುವುದಕ್ಕಿಂತ, ಇಂಥ ಹೊತ್ತಲ್ಲಿ ಆ ಪಕ್ಷದೊಳಗಿಂದಲೇ ಬಂದಿರುವ ಒಂದು ಭಿನ್ನ ಧ್ವನಿ ಅದೆಂಬುದು ಮುಖ್ಯವೆನ್ನಿಸುತ್ತದೆ. ಈ ಮುಂಚೆಲ್ಲ ದ್ವೇಷಭಾಷಣವನ್ನೇ ಮಾಡಿಕೊಂಡು ಬಂದಿರುವ ವರುಣ್ ಗಾಂಧಿ ರಾಜಕೀಯ ನಡೆ ಏನೇ ಇದ್ದರೂ, ವರುಣ್ ಈಗಿನ ಮಾತನ್ನು ಬಿಜೆಪಿ ಅರಗಿಸಿಕೊಳ್ಳಲಾಗದು.

Related Articles

Leave a Reply

Your email address will not be published.

Back to top button