Life Guards:ಸಮುದ್ರ ತೀರದಲ್ಲಿ ಲೈಫ್ ಗಾರ್ಡ್ಗಳಿಲ್ಲದೆ ಹೆಚ್ಚುತ್ತಿರುವ ಸಾವಿನ ಪ್ರಕರಣ
ಕಾರವಾರ : ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಜಿಲ್ಲೆಯ ಸಮುದ್ರ ತೀರಗಳಿಗೆ ಆಗಮಿಸುವ ಪ್ರವಾಸಿಗರು ನೀರಿನಲ್ಲಿ ಇಳಿದು ಎಂಜಾಯ್ ಮಾಡುತ್ತಿದ್ದಾರೆ. ಹೀಗೆ ಮೋಜಿನಲ್ಲಿ ತೊಡಗಿಕೊಳ್ಳುವ ಪ್ರವಾಸಿಗರು ಸಮುದ್ರದ ಅಲೆಗಳಿಗೆ ಸಿಲುಕಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಕಡಲ ತೀರದಲ್ಲಿ ಈ ಹಿಂದೆ ಇದ್ದ ಲೈಫ್ಗಾರ್ಡ್ಗಳು ಕೊರೋನಾ ಬಳಿಕ ನೇಮಕಗೊಳ್ಳದಿರುವುದೇ ಪ್ರವಾಸಿಗರ ಸಾವಿಗೆ ಕಾರಣವಾಗಿದೆ.
ಹವಾಮಾನ ವೈಪರೀತ್ಯದಿಂದ ಸಮುದ್ರದಲ್ಲಿ ಕೆಲವೊಮ್ಮೆ ಭೀಕರ ಅಲೆಗಳು ಕಾಣಿಸಿಕೊಳ್ಳುತ್ತವೆ.ಇದರ ಅರಿವಿಲ್ಲದ ಪ್ರವಾಸಿಗರು ಸಮುದ್ರಕ್ಕೆ ಇಳಿದು ತಾವೇ ಸಂಕಷ್ಟ ತಂದುಕೊಳ್ಳುತ್ತಾರೆ. ಕಳೆದ ಮೂರು ತಿಂಗಳಲ್ಲಿ ಜಿಲ್ಲೆಯ ಹೊನ್ನಾವರ, ಕುಮಟಾ, ಅಂಕೋಲಾ, ಗೋಕರ್ಣ ಬೀಚ್ಗಳಲ್ಲಿ 10 ಜನರು ಸಾವನ್ನಪ್ಪಿದ್ದಾರೆ.
ಕಾರವಾರದಲ್ಲಿ ಇತ್ತೀಚೆಗೆ ನಡೆದ ಪ್ರಕರಣ ಸೇರಿ ಕೆಲವೆಡೆ ಸ್ಥಳೀಯ ಮೀನುಗಾರರು ಹಾಗೂ ನಿಗದಿತ ಕಡೆಗಳಲ್ಲಿ ನೇಮಿಸಿರುವ ಲೈಫ್ಗಾರ್ಡ್ಗಳು ಹಲವರ ಜೀವ ರಕ್ಷಣೆ ಮಾಡಿದ್ದಾರೆ. ಆದರೆ ಜಿಲ್ಲೆಯಲ್ಲಿ 10 ಕ್ಕೂ ಅಧಿಕ ಬೀಚ್ಗಳಿದ್ದರೂ ಎಲ್ಲಾ ಬೀಚ್ಗಳಲ್ಲಿ ಈವರೆಗೆ ಲೈಫ್ಗಾರ್ಡ್ಗಳ ನೇಮಕವಾಗಿಲ್ಲ.
ಕೇವಲ ನಾಲ್ಕು ಬೀಚ್ಗಳಲ್ಲಿ ಮಾತ್ರ 4-5 ಲೈಫ್ಗಾರ್ಡ್ಗಳನ್ನ ನೇಮಕ ಮಾಡಲಾಗಿದೆ. ಉಳಿದ ಬೀಚ್ಗಳಲ್ಲಿ ಪ್ರವಾಸಿಗರು ಸಂಕಷ್ಟಕ್ಕೀಡಾದರೆ ಜೀವ ರಕ್ಷಣೆಗೆ ಸ್ಥಳೀಯ ಮೀನುಗಾರರು ಹೊರತುಪಡಿಸಿ ಬೇರೆ ಯಾರೂ ಇಲ್ಲದಂತಾಗಿದೆ. ಆರ್ಥಿಕ ಸಮಸ್ಯೆಯಿಂದಾಗಿ ಜಿಲ್ಲಾಡಳಿತ ಲೈಫ್ ಗಾರ್ಡ್ಗಳ ನೇಮಕ ಮಾಡಿಲ್ಲ. ಇದರಿಂದ ಪ್ರವಾಸಿಗರು ಜೀವ ತೆರುವಂತಾಗಿದೆ.
ಪ್ರವಾಸಿಗರ ರಕ್ಷಣೆ ಹಾಗೂ ಪ್ರವಾಸೋದ್ಯಮದ ಅಭಿವೃದ್ಧಿ ವಿಚಾರವಾಗಿರುವ ಲೈಫ್ಗಾರ್ಡ್ ಸಮಸ್ಯೆ ಪರಿಹರಿಸಲು ಜಿಲ್ಲಾಡಳಿತ ಹೊಸ ಪ್ಲಾನ್ಗೆ ಮುಂದಾಗಿದೆ. ಕಡಲ ತೀರದ ಪ್ರವಾಸೋದ್ಯಮಕ್ಕೆ ಈ ಬಾರಿ ವರುಣ ಅಡ್ಡಿಯಾಗಿದ್ದು, ಈವರೆಗೆ ಸ್ಥಗಿತಗೊಂಡಿದ್ದ ಲೈಫ್ಗಾರ್ಡ್ ಸೇವೆ ಇದೀಗ ಕೆಲವೆಡೆ ಮತ್ತೆ ಪ್ರಾರಂಭಿಸಲಾಗಿದೆ. ತರಬೇತಿ,ಪ್ರಮಾಣ ಪತ್ರ ಸೇರಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಏನೆಲ್ಲಾ ತೊಡಕುಗಳು ಎದುರಾಗಿದ್ದವೋ ಅವುಗಳನ್ನು ಒಂದೊಂದಾಗಿ ನಿವಾರಣೆ ಮಾಡುತ್ತಾ ಬರುತ್ತಿದೆ.
ಹೊರಗಿನ ಜಿಲ್ಲೆಯಿಂದ ಬರುವವರಿಗೆ ಕಡಲಿನ ಸ್ಥಿತಿಗತಿಯ ಬಗ್ಗೆ ಸಂಪೂರ್ಣ ಅರಿವು ಇರುವುದಿಲ್ಲ.ಹೀಗಾಗಿ ಲೈಫ್ಗಾರ್ಡ್ಗಳ ಸೂಚನೆ ಮೀರಿ ಯಾರೂ ಸಮುದ್ರಕ್ಕಿಳಿಯದಂತೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ.
ಎಲ್ಲಾ ಬೀಚ್ಗಳಲ್ಲಿ ಲೈಫ್ಗಾರ್ಡ್ಗಳ ನೇಮಕ ಹಂತ-ಹಂತವಾಗಿ ಮಾತ್ರ ನಡೆಸಲು ಸಾಧ್ಯ. ಅವರಿಗೆ ವಿಶೇಷವಾಗಿ ವೇತನ ನೀಡುವ ವ್ಯವಸ್ಥೆಯಿಲ್ಲ. ಜಿಲ್ಲಾ ಪ್ರವಾಸೋದ್ಯಮ ಸಮಿತಿಯ ಆದಾಯದ ಮೇಲೆಯೇ ಅವರಿಗೆ ವೇತನ ನೀಡಲಾಗುತ್ತಿತ್ತು. ಮುಂದಿನ ದಿನಗಳಲ್ಲಿ ಸ್ಥಳೀಯವಾಗಿ ಇದನ್ನ ನಿರ್ವಹಿಸುವಂತೆ ವ್ಯವಸ್ಥೆ ಮಾಡಲಾಗುವುದೆಂದು ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ತಿಳಿಸಿದ್ದಾರೆ.