ಶೋಲಾ ಕಾಡು ಕಬಳಿಕೆಗೆ ಸದ್ದಿಲ್ಲದೇ ಸಾಗಿದೆ ಮಂಜೂರಾತಿ ಕಾರ್ಯ?
ಚಿಕ್ಕಮಗಳೂರು: ವಿಶಿಷ್ಟ ಹುಲ್ಲುಗಾವಲು ಹೊಂದಿರುವ, ಶೋಲಾ ಕಾಡು ಪ್ರದೇಶದ ಮುಳ್ಳಯ್ಯನಗಿರಿ, ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಭೂ ಒತ್ತುವರಿ ನಡೆದಿದ್ದು, ಮಂಜೂರಾತಿ ನೀಡುವ ಕಾರ್ಯ ಸದ್ದಿಲ್ಲದಂತೆ ಸಾಗಿದೆ ಎನ್ನುವ ಆರೋಪ ಕೇಳಿಬಂದಿದೆ.
ಅಕ್ರಮ ಸಕ್ರಮ ಹೆಸರಲ್ಲಿ ಕೆಲವರು ಗಿರಿ ಪ್ರದೇಶದಲ್ಲಿ ಭೂ ಕಬಳಿಕೆಗೆ ಮಾಡಿ ಶೋಲಾ ಕಾಡನ್ನು ತಮ್ಮ ತೋಟಗಳಾಗಿ ಪರಿವರ್ತಿಸುತ್ತಿದ್ದಾರೆ. ಇನ್ನು ಕೆಲವರು ತಮ್ಮ ಖಾತೆ ಇರುವ ತೋಟಗಳ ಪಕ್ಕದ ಹುಲ್ಲುಗಾವಲನ್ನು ಒತ್ತುವರಿ ಮಾಡಿದ್ದಾರೆ ಎಂದು ಗೌರವ ವನ್ಯಜೀವಿ ಪರಿಪಾಲಕ ಜಿ ವೀರೇಶ್ ದೂರಿದ್ದಾರೆ.
ಶೋಲಾ ಕಾಡುಗಳು ಅತ್ಯಂತ ವಿಶಿಷ್ಟತೆಯಿಂದ ಕೂಡಿದೆ. ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹುಲ್ಲುಗಾವಲಿಗೆ ಇದೆ. ನೀರನ್ನು ಸಂಗ್ರಹಿಸಿ ಕಣಿವೆ ಪ್ರದೇಶದಲ್ಲಿ ಇರುವ ಶೋಲಾ ಕಾಡಿನಲ್ಲಿ ಜಲಮೂಲ ಸೃಷ್ಟಿಗೆ ಕಾರಣವಾಗುತ್ತದೆ ಎಂದಿದ್ದಾರೆ.
ಹೊನ್ನಮ್ಮನ ಹಳ್ಳ ಹೆಬ್ಬೆ ಹಳ್ಳ, ವೇದ ನದಿ, ಗೌರಿಹಳ್ಳ ಸೇರಿದಂತೆ ಅನೇಕ ನದಿಮೂಲಗಳು ಇವೆ. ನೈಸರ್ಗಿಕ ಕಾಡುಗಳು ಇಲ್ಲಿ ಕಾಫಿ ತೋಟಗಳಾಗಿ ಪರಿವರ್ತನೆ ಆದರೆ ಇಲ್ಲಿನ ಜಲ ಮೂಲಗಳ ಕಂಟಕ ತಪ್ಪಿದ್ದಲ್ಲ. ನೈಸರ್ಗಿಕ ಸೂಕ್ಷ್ಮ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಹೆಸರಿನಲಿ ಮಂಜೂರಾತಿ ನೀಡುವುದನ್ನು ನಿಲ್ಲಿಸಬೇಕು. ಮಂಜೂರಾತಿ ಕೊಡುವಾಗ ನೈಸರ್ಗಿಕ ಮಹತ್ವ ಇರುವ ಪ್ರದೇಶಗಳನ್ನು ಅರಣ್ಯ ಕಂದಾಯ ಇನ್ನಿತರೆ ಇಲಾಖೆಯೊಂದಿಗೆ ಜಂಟಿ ಸ್ಥಳ ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯದ ಅತೀ ಎತ್ತರ ಪ್ರದೇಶವಾಗಿರುವ ಮುಳ್ಳಯ್ಯನಗಿರಿ ಶ್ರೇಣಿ ಸಂರಕ್ಷಣೆ ಮಾಡಲೇಬೇಕಾದ ಅನಿವಾರ್ಯತೆಯಿದೆ. ಬಯಲು ಸೀಮೆಯ ಅಯ್ಯನಕೆರೆ, ಮದಗಾದಕೆರೆ ಸಹಿತ ವೇದಾವತಿ ವಾಣಿವಿಲಾಸ ಸಾಗರ ಅಣೆಕಟ್ಟು ಪ್ರದೇಶಗಳಿಗೆ, ಕಾವೇರಿ ಮತ್ತು ಕಷ್ಟ ಕೊಳ್ಳಗಳಿಗೆ ಗಿರಿ ಪ್ರದೇಶದಲ್ಲಿ ಹುಟ್ಟುವ ನೀರಿನ ಮೂಲಗಳಿಂದ ವರ್ಷಪೂರ್ತಿ ನೀರು ಸಿಗುತ್ತದೆ.ಲಕ್ಷಾಂತರ ರೈತರ ಜೀವನಾಡಿ ಈ ಚಂದ್ರದ್ರೋಣ ಪರ್ವತ ಶ್ರೇಣಿ. ನೈಸರ್ಗಿಕ ಮಹತ್ವ ಇರುವ ಇಂತಹ ಪ್ರದೇಶಗಳ ರಕ್ಷಣೆಗೆ ವಿಶೇಷ ಕ್ರಮ ಕೈಗೊಳ್ಳಬೇಕು. ಗಿರಿ ಶ್ರೇಣಿಯಲ್ಲಿ ಯಾವುದೇ ಅರಣ್ಯೇತರ ಚಟುವಟಿಕೆಗೆ ಅವಕಾಶ ನೀಡಬಾರದು ಎಂದಿದ್ದಾರೆ.