ರಸ್ತೆ ಗುಂಡಿ ಹೆಸರಿನಲ್ಲಿ ಕೋಟ್ಯಂತರ ಹಣ ಪೋಲು: ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪ
ಬೆಂಗಳೂರು: ಬಿಜೆಪಿಗೆ ಕೇವಲ ದೂರುವುದಷ್ಟೇ ಗೊತ್ತು. ಅವರಿಗೆ ಆಡಳಿತ ಮಾಡುವುದು ಬರುವುದಿಲ್ಲ. ಅಭಿವೃದ್ಧಿ ಕೆಲಸ ಮಾಡುವುದು ಗೊತ್ತಿಲ್ಲ. ಅದಕ್ಕೆ ಬೆಂಗಳೂರಿನ ರಸ್ತೆ ದುಸ್ಥಿತಿಯೇ ಸಾಕ್ಷಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳು ಲೆಕ್ಕಕ್ಕೆ ಸಿಗದ ದುಸ್ಥಿತಿಗೆ ತಲುಪಿವೆ. 2008ರಿಂದ 2013ರವರೆಗೆ ಅಧಿಕಾರ ಮಾಡಿದ್ದ ಬಿಜೆಪಿ ನಗರದ ಪ್ರಮುಖ ರಸ್ತೆಗಳಲ್ಲಿ ಗುಂಡಿ ಬೀಳಿಸಿತ್ತು. 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ನಾನು ಬೆಂಗಳೂರು ಉಸ್ತುವಾರಿಯಾದ ನಂತರ ಎಲ್ಲ ರಸ್ತೆ ಗುಂಡಿಗಳನ್ನು ಮುಚ್ಚಿಸಿದ್ದೆವು ಎಂದರು.
ಈಗ ಅವರು ಮತ್ತೆ ಅಧಿಕಾರಕ್ಕೆ ಬಂದ ನಂತರ ರಸ್ತೆಗಳು ಮತ್ತೇ ದುಸ್ಥಿತಿ ತಲುಪಿವೆ. ಅವರಿಗೆ ಆಡಳಿತ ಮಾಡಲು ಬರುವುದಿಲ್ಲ. ಬೆಂಗಳೂರಿನ ರಸ್ತೆ ಸ್ಥಿತಿ ಕಂಡು ಹೈಕೋರ್ಟ್ ಛಿಮಾರಿ ಹಾಕುವಂತಾಗಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ರಸ್ತೆಗುಂಡಿಗಳು ಇದ್ದವು ಆದರೆ ಈ ರೀತಿ ಹೈಕೋರ್ಟ್ ನಿಂದ ಛಿಮಾರಿ ಹಾಕಿಸಿಕೊಳ್ಳುವ ಸ್ಥಿತಿಗೆ ಹೋಗಿರಲಿಲ್ಲ. ಆಗಿಂದ್ದಾಗೆ ನಾವು ರಸ್ತೆಗುಂಡಿ ಮುಚ್ಚಿಸುತ್ತಿದ್ದೆವು ಎಂದು ತಿಳಿಸಿದರು.
ಈಗ ರಸ್ತೆಗುಂಡಿಯಿಂದ ಅಪಘಾತ ಹೆಚ್ಚಾಗಿದ್ದು, ಜನ ಸಾಯುತ್ತಿದ್ದಾರೆ, ಗಾಯಗೊಳ್ಳುತ್ತಿದ್ದಾರೆ. ಜನ ರಸ್ತೆಯಲ್ಲಿ ಓಡಾಡಲು ಹೆದರುವಂತಾಗಿದೆ. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ಪಾಲಿಕೆ ಆಯುಕ್ತರು, ಸಚಿವ ಆರ್.ಅಶೋಕ್ ಸೇರಿದಂತೆ ಹಲವರು ಗುಂಡಿ ಮುಚ್ಚಲು ಗಡುವು ಕೊಟ್ಟರೂ ಇದುವರೆಗೂ ಗುಂಡಿಗಳು ಮುಚ್ಚಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದು 2 ವರ್ಷ 5 ತಿಂಗಳಾಗಿವೆ ಈ ಅವಧಿಯಲ್ಲಿ ಬೆಂಗಳೂರಿನ ಅಭಿವೃದ್ಧಿ ಕಡೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ನಮ್ಮ ಸರ್ಕಾರ ಇದ್ದಾಗ ಬೆಂಗಳೂರಿನ ರಸ್ತೆಗಳಿಗೆ ವಿಶೇಷ ಒತ್ತು ನೀಡಿದ್ದೆವು. ಉತ್ತಮ ಗುಣಮಟ್ಟದ ರಸ್ತೆ ನೀಡಬೇಕು ಎಂಬ ಉದ್ದೇಶದಿಂದ ನಾವು ಕಾಂಕ್ರೀಟ್ ರಸ್ತೆ ಮಾಡಲು ಮುಂದಾಗಿದ್ದೆವು. ಆದರೆ ಬಿಜೆಪಿಯವರು ಅದರಲ್ಲಿ ಅಕ್ರಮ ನಡೆದಿದೆ ಎಂದು ಬೊಬ್ಬೆ ಹಾಕಿದರು. ನಂತರ ತನಿಖಾ ಸಮಿತಿ ಯಾವುದೇ ಅಕ್ರಮ ಇಲ್ಲ ಎಂದು ವರದಿ ಕೊಟ್ಟಿದೆ ಎಂದರು.
ಬೆಂಗಳೂರಿನಲ್ಲಿ 7 ಸಚಿವರಿದ್ದಾರೆ, ಅವರ ಕೈಯಲ್ಲಿ ಈ ನಗರದ ನಿರ್ವಹಣೆ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಮುಖ್ಯಮಂತ್ರಿಗಳೇ ಬೆಂಗಳೂರು ಉಸ್ತುವಾರಿಯನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಈ ಜವಾಬ್ದಾರಿ ತಾವೇ ಇಟ್ಟುಕೊಂಡ ಮೇಲೆ ಅವರು ಸಿಟಿ ರೌಂಡ್ ಹಾಕಬೇಕು. ಎಲ್ಲಿ ಏನೇನು ಸಮಸ್ಯೆ ಇದೆ ಎಂದು ಪರಿಶೀಲನೆ ನಡೆಸಬೇಕು. ನಾನು ಬೆಂಗಳೂರು ಉಸ್ತುವಾರಿ ಸಚಿವನಾಗಿದ್ದ ಸಂದರ್ಭದಲ್ಲಿ ವಾರಕ್ಕೆ 3 ದಿನ ಸಿಟಿ ರೌಂಡ್ ಹಾಕುತ್ತಿದ್ದೆ. ಎಲ್ಲೆ ಸಮಸ್ಯೆ ಇದ್ದರೂ ಒಂದು ವಾರದ ಒಳಗಾಗಿ ಸರಿ ಪಡೆಸುವಂತೆ ನೋಡಿಕೊಳ್ಳುತ್ತಿದ್ದೆ. ಈಗ ಬೆಂಗಳೂರಿನಲ್ಲಿ ಹೇಳುವವರು ಕೇಳುವವರು ಇಲ್ಲದಂತಾಗಿದೆ. ಇತ್ತೀಚೆಗೆ ಅತಿಯಾದ ಮಳೆ ಸುರಿದಾಗ ಸಚಿವರು ತಮ್ಮ ಕ್ಷೇತ್ರ ಬಿಟ್ಟು ಹೊರಬರಲೇ ಇಲ್ಲ. ಅವರು ತಮ್ಮ ಕ್ಷೇತ್ರಕ್ಕೆ ಮಾತ್ರ ಸಚಿವರಾಗಿದ್ದಾರೆ ಎಂದು ಭಾವಿಸಿದಂತೆ ಕಾಣುತ್ತಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಬೆಂಗಳೂರು ಅಭಿವೃದ್ಧಿಗೆ 6 ಸಾವಿರ ಹಾಗೂ ಕುಮಾರಸ್ವಾಮಿ ಅವರು 1 ಸಾವಿರ ಕೋಟಿ ಕೊಟ್ಟಿದ್ದರು.ಒಟ್ಟು 7 ಸಾವಿರ ಕೋಟಿ ನೀಡಲಾಗಿತ್ತು. ಇದು ಹೊರತಾಗಿ ಕಳೆದ ಎರಡೂವರೆ ವರ್ಷದಲ್ಲಿ ಬಿಜೆಪಿ ಸರ್ಕಾರದಿಂದ ಯಾವುದೇ ಹಣ ಬಿಡುಗಡೆಯಾಗಿಲ್ಲ. 2019-20 ಸಾಲಿನಲ್ಲಿ ಬಿಬಿಎಂಪಿಯ 198 ವಾರ್ಡ ಗಳಿಗೆ ಒಂದು ರೂಪಾಯಿ ಅನುದಾನ ಕೊಟ್ಟಿಲ್ಲ. 2020-21ರಲ್ಲಿ ಬಿಬಿಎಂಪಿಯಿಂದ ಪ್ರತಿ ವಾರ್ಡಿಗೆ 60 ಲಕ್ಷ ಘೋಷಿಸಿದ್ದು, ಇದುವರೆಗೂ ಹಣ ಬಿಡುಗಡೆ ಮಾಡಿಲ್ಲ. ಅನುದಾನ ನೀಡದೇ ರಸ್ತೆ ಗುಂಡಿ ಮುಚ್ಚಿ ಎಂದರೆ ಹೇಗೆ ಮುಚ್ಚಲು ಸಾಧ್ಯ ಎಂದು ಪ್ರಶ್ನೆ ಮಾಡಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬೆಂಗಳೂರು ನಗರ ಅಭಿವೃದ್ಧಿಗೆ ಎಷ್ಟು ಅನುದಾನ ನೀಡಿದ್ದಾರೆ ಎಂದು ಮಾಹಿತಿ ನೀಡಲಿ. ಬೆಂಗಳೂರು ನಗರ ರಸ್ತೆಗುಂಡಿ ಮುಕ್ತ ನಗರವಾಗಬೇಕು ಎಂಬುದು ನಮ್ಮ ಆಗ್ರಹ. ಬೆಂಗಳೂರು ರಸ್ತೆ ಗುಂಡಿ ಮುಚ್ಚಿ ತಾತಾ ಎಂದು ಪುಟ್ಟ ಬಾಲಕಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಆದರೂ ಈ ಬಗ್ಗೆ ಸರ್ಕಾರ ಗಮನ ಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಬಿಬಿಎಂಪಿ ಮೂಲಕ ಮಂಗಳಮುಖಿಯರಿಗೆ ಪ್ರತಿ ವರ್ಷ 2 ಕೋಟಿ ಅನುದಾನ ಮೀಸಲಿಡಲಾಗಿತ್ತು. ಲಾಕ್ ಡೌನ್ ಸಮಯದಲ್ಲಿ ಅವರಿಗೆ ಯಾವುದೇ ರೀತಿಯ ಪರಿಹಾರ ನೀಡಲಾಗಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಿಬಿಎಂಪಿಯಲ್ಲಿ ಮಂಗಳಮುಖಿಯರಿಗೆ ನೀಡಲಾಗುತ್ತಿದ್ದ ಅನುದಾನ ನಿಂತಿದೆ. ಜತೆಗೆ ಸಮಾಜ ಕಲ್ಯಾಣ ಇಲಾಖೆ ಮೂಲಕ ನೀಡಲಾಗುತ್ತಿದ್ದ ಟೈಲರಿಂಗ್ ಯಂತ್ರ ನೀಡುವುದು, ಸೈಕಲ್ ನೀಡುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಸರ್ಕಾರ ಸಂಪೂರ್ಣವಾಗಿ ನಿಲ್ಲಿಸಿದೆ’ ಎಂದರು.
ಬಿಟ್ ಕಾಯಿನ್ ಪ್ರಕರಣದ ಮಾಹಿತಿ ಪ್ರಧಾನಿ ಕಚೇರಿಗೆ ಹೋಗಿದೆ. ಅದು ಹೊರಬಂದ್ರೆ ಸರ್ಕಾರಕ್ಕೆ ಕಂಟಕವಿದೆ. ಪ್ರಧಾನಿ ಕಚೇರಿಯಿಂದ ಟಿಪ್ಪಣಿ ಬಂದ ಬಳಿಕ ಶ್ರೀಕಿಯನ್ನು ಬಂಧಿಸಲಾಗಿದೆ. ಇದರಲ್ಲಿ ಪ್ರಭಾವಿ ನಾಯಕರು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಭಾವಿಗಳು ಅಂದ್ರೆ ಸಹಜವಾಗಿ ಆಡಳಿತ ಪಕ್ಷದವರೇ ಇರ್ತಾರೆ. ಈ ಕೇಸ್ನಲ್ಲಿ ಆಡಳಿತ ಪಕ್ಷದ ನಾಯಕರ ಹೆಸರು ಹೊರಬಂದರೆ ಬೊಮ್ಮಾಯಿ ಸರ್ಕಾರಕ್ಕೆ ಕಂಟಕವಾಗುತ್ತೆ ಎಂದು ಅಭಿಪ್ರಾಯಪಟ್ಟರು. ಬಿಟ್ ಕಾಯಿನ್ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು. ರಾಜ್ಯ ಸರ್ಕಾರ ನಡೆಸುವ ತನಿಖೆಯಲ್ಲಿ ನನಗೆ ನಂಬಿಕೆಯಿಲ್ಲ ಎಂದು ರಾಮಲಿಂಗಾರೆಡ್ಡಿ ನುಡಿದರು.