ಹೆಚ್ ಡಿ ಕುಮಾರಸ್ವಾಮಿ ವಿಧಾನಸಭೆ ಸದಸ್ಯತ್ವ ರದ್ದುಗೊಳಿಸಿ ಸ್ಪೀಕರ್ ಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಒತ್ತಾಯ
ಮೈಸೂರು : ಸಿದ್ದರಾಮಯ್ಯ ವಿರುದ್ಧ ಪುಟಗೋಸಿ ಎಂದು ಅಸಂಸದೀಯ ಪದ ಬಳಕೆ ಮಾಡಿರುವ ಹೆಚ್.ಡಿ.ಕುಮಾರಸ್ವಾಮಿ ಅವರ ವಿಧಾನಸಭಾ ಸದಸ್ಯತ್ವವನ್ನು ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರು ರದ್ದುಗೊಳಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾಜಿ ಸಿಎಂ ಕುಮಾರಸ್ವಾಮಿಯವರ ಸದಸ್ಯತ್ವ ರದ್ದುಗೊಳಿಸಬೇಕು ಹೆಚ್,ಡಿಕೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಸಂಸದೀಯ ಪದ ಬಳಕೆ ಮಾಡಿ ಟೀಕಿಸಿದ್ದಾರೆ. ಜೆಡಿಎಸ್ ಸ್ಥಿತಿ ಹೀನಾಯವಾಗಿರುವುದರಿಂದ ಪ್ರಚಾರಕ್ಕೋಸ್ಕರ ಅವರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವರಿಂದ ಸಮ್ಮಿಶ್ರ ಸರ್ಕಾರ ಬಿತ್ತು ಎಂದು ಆಗಲೇ ಏಕೆ ಹೇಳಲಿಲ್ಲ? ಈಗ ಏಕೆ ಹೇಳುತ್ತಿದ್ದೀರಿ? ವಿಧಾನಸಭೆ ಚುನಾವಣೆಗೆ ಒಂದೂವರೆ ವರ್ಷ ಇರುವಾಗ ಏಕೆ ಈ ರೀತಿ ಹೇಳುತ್ತಿದ್ದೀರಿ? ಚಾಮುಂಡಿ ಬೆಟ್ಟದ ಮೇಲೊಂದು ಹೇಳಿಕೆ, ಮೈಸೂರಿನಲ್ಲೊಂದು ಹೇಳಿಕೆ ಏಕೆ ನೀಡಿದ್ದೀರಿ ಎಂದು ಎಚ್ಡಿಕೆಗೆ ಪ್ರಶ್ನಿಸಿದರು.
ಸಿದ್ದರಾಮಯ್ಯ ಎಂದೂ ಕೂಡ ಥರ್ಡ್ ರೇಟೆಡ್ ಕೆಲಸ ಮಾಡಲ್ಲ. ಪ್ರತಿಪಕ್ಷದ ನಾಯಕ ಎಂದರೆ ಶ್ಯಾಡೊ ಮುಖ್ಯಮಂತ್ರಿ ಇದ್ದಂತೆ. ದೇವೇಗೌಡರು, ಯಡಿಯೂರಪ್ಪ, ನೀವು ಕೂಡ ಪ್ರತಿಪಕ್ಷದ ನಾಯಕರಾಗಿದ್ದವರು. ಇದು ನಿಮ್ಮ ತಂದೆಯ ನಡವಳಿಕೆಗೆ ಮಾಡಿದ ಅವಮಾನ. ನಿಮ್ಮ ತಂದೆಯನ್ನು ನೋಡಿ ನೀವು ಕಲಿತುಕೊಳ್ಳಿ ಎಂದು ಹೆಚ್,ಡಿಕೆ ವಿರುದ್ದ ಕಿಡಿಕಾರಿದರು.