Latest

ಡಿ.ಕೆ. ಶಿವಕುಮಾರ್ ಉತ್ತಮ ಆಡಳಿತಗಾರ, ಜನಪರ ಚಿಂತನೆ ನಾಯಕ: ವಿ ಎಸ್ ಉಗ್ರಪ್ಪ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಉತ್ತಮ ಆಡಳಿತಗಾರ, ಜನಪರ ಚಿಂತನೆ ನಾಯಕ. ಅವರು ಸಂಪಾದಿಸಿರುವ ಹಣ ರಾಜಕಾರಣದಿಂದ ಅಲ್ಲ. ಅವರು ತಮ್ಮ ವ್ಯಾಪಾರ ವ್ಯವಹಾರಗಳಿಂದ ಸಂಪಾದನೆ ಮಾಡಿದ್ದಾರೆ. ಅವರು ಎಂದಿಗೂ ಪರ್ಸೆಂಟೇಜ್ ರಾಜಕಾರಣ ಮಾಡಿಲ್ಲ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.

ತಮ್ಮ ಹಾಗೂ ಪಕ್ಷದ ಮಾಧ್ಯಮ ಸಂಯೋಜಕ ಎಂ.ಎ.ಸಲೀಂ ನಡುವಿನ ಖಾಸಗಿ ಮಾತುಕತೆ ಮಾಧ್ಯಮಗಳಲ್ಲಿ ಬಹಿರಂಗವಾಗುತ್ತಿದ್ದಂತೆ ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ತುರ್ತು ಸುದ್ದಿಗೋಷ್ಠಿಯಲ್ಲಿ ಅವರು ಸ್ಪಷ್ಟೀಕರಣ ನೀಡಿದರು.

ಮಂಗಳವಾರ ಕೆಪಿಸಿಸಿ ಮಾಧ್ಯಮ ವಿಭಾಗದ ಸಹ ಸಂಚಾಲಕ ಸಲೀಂ ಅವರು, ನಾನು ಪತ್ರಿಕಾಗೋಷ್ಠಿಗೆ ಆಗಮಿಸಿದಾಗ ನನ್ನ ಕಿವಿಯಲ್ಲಿ ಜನ ಹೀಗೆ ಮಾತನಾಡುತ್ತಿದ್ದಾರೆ. ಈ ಮಧ್ಯೆ ನೀರಾವರಿ ಇಲಾಖೆ ಹಗರಣ ವಿಚಾರವಾಗಿ ಬಿಜೆಪಿ ಅವರು ನಮ್ಮ ಪಕ್ಷದ ನಾಯಕರ ವಿರುದ್ಧ ಗೂಬೆ ಕೂರಿಸಲು ಈ ರೀತಿ ಆರೋಪ ಮಾಡಿದ್ದಾರೆ ಎಂದು ಹೇಳಿದರು. ನಾನು ಅದನ್ನು ಅಲ್ಲಿಗೆ ನಿಲ್ಲಿಸಿ ಪತ್ರಿಕಾಗೋಷ್ಠಿ ನಡೆಸಿದೆ. ಅದನ್ನು ಮಾಧ್ಯಮಗಳು ಬೇರೆ ರೀತಿ ಬಿಂಬಿಸುತ್ತಿವೆ ಎಂದು ದೂರಿದರು.

ನೀರಾವರಿ ಹಗರಣಕ್ಕೆ ಸಂಬಂಧಿಸಿದಂತೆ ಆರೋಪ ಹೊತ್ತಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಸಹಾಯಕರಾಗಿದ್ದ ಆಯನೂರು ಉಮೇಶ್ ಅವರು ನನ್ನ ಜಿಲ್ಲೆಯವರು. ನಮ್ಮ ನಾಯಕರ ಮೇಲೆ ಆರೋಪ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಸಲೀಂ ಅವರು ತಮಗೆ ಹೇಳಲು ಮುಂದಾಗಿದ್ದರು. ನಮ್ಮ ಪಕ್ಷದ ಅಧ್ಯಕ್ಷರಾಗಲಿ, ನಾಯಕರಾಗಲಿ ಅಧಿಕಾರದಲ್ಲಿದ್ದಾಗ ಪರ್ಸೆಂಟೇಜ್ ಪಡೆಯುವ ಸಂಸ್ಕೃತಿ ಬೆಳೆಸಿಲ್ಲ. ಹೀಗಾಗಿ ಆ ಪಿಸುಗುತಟ್ಟಿದ ಮಾತು ವೈಭವೀಕರಣ ಮಾಡಿ ಬಿಂಬಿಸುವ ಕೆಲಸ ಮಾಧ್ಯಮ ಮೌಲ್ಯಗಳಿಗೆ ಸಮಂಜಸವಲ್ಲ. ಕಮಿಷನ್, ಭ್ರಷ್ಟಾಚಾರ ಕಾಂಗ್ರೆಸ್ ಗೆ ದೂರ. ಅದರಲ್ಲೂ ಪಕ್ಷದ ಅಧ್ಯಕ್ಷರು ಇನ್ನೂ ದೂರ ಎಂದು ಉಗ್ರಪ್ಪ ಹೇಳಿಕೊಂಡರು.

ಬಿಜೆಪಿ ಭ್ರಷ್ಟಾಚಾರದ ಗಂಗೋತ್ರಿ:

ಭ್ರಷ್ಟಾಚಾರದ ಗಂಗೋತ್ರಿ ಹರಿಸುತ್ತಿರುವುದು ಬಿಜೆಪಿ ನಾಯಕರು ಎಂದು ಹರಿಹಾಯ್ದ ಉಗ್ರಪ್ಪ, ಕಳೆದ ಚುನಾವಣೆ ಸಂದರ್ಭದಲ್ಲಿ ಮೋದಿ ಅವರು ಸಿದ್ದರಾಮಯ್ಯ ಅವರನ್ನು ಕಮೀಷನ್ ರಾಮಯ್ಯ ಎಂದಾಗ ಮೋದಿ ಅವರ ವಿರುದ್ಧ ನೂರು ಕೋಟಿ ರೂ. ಮಾನಹಾನಿ ಕೇಸ್ ಹಾಕಲಾಯಿತು. ಅದಕ್ಕೆ ಮೋದಿ ಅವರು ಈವರೆಗೂ ಉತ್ತರಿಸಿಲ್ಲ ಎಂದರು.

ಇಡಿ ಹಾಗೂ ಆದಾಯ ತೆರಿಗೆ ಅಧಿಕಾರಿಗಳು ರಾಜ್ಯದಲ್ಲಿ ದಾಳಿ ನಡೆಸಿದ ನಂತರ ನಾವು ಆಗ್ರಹಪಡಿಸಿದಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿ 750 ಕೋಟಿ ಲೆಕ್ಕದ ವ್ಯತ್ಯಾಸವಿದೆ ಎಂದು ಹೇಳಿದ್ದಾರೆ. ಇದು ಯಾರ ಆಡಳಿತದಲ್ಲಿ ನಡೆದಿದೆ? ಇದಕ್ಕೆ ಹೊಣೆ ಯಾರು? ಈ ಬಗ್ಗೆ ಮೋದಿ ಮತ್ತು ಬಿಜೆಪಿ ಅವರು ಮಾತನಾಡುತ್ತಿಲ್ಲ ಯಾಕೆ ಎಂದು ಉಗ್ರಪ್ಪ ಪ್ರಶ್ನಿಸಿದರು.

ಭ್ರಷ್ಟಾಚಾರ ಯಾರೇ ಮಾಡಿದರೂ ತಪ್ಪೇ, ಯಡಿಯೂರಪ್ಪ ಮಾಡಿದರೂ ತಪ್ಪೇ, ಪ್ರಧಾನಿ ಮಾಡಿದರೂ ತಪ್ಪೇ. ನಮ್ಮ ಪಕ್ಷದವರು ಮಾಡಿದರೂ ತಪ್ಪೇ. ಭ್ರಷ್ಟಾಚಾರ ಮುಕ್ತ ರಾಜ್ಯ ಕಟ್ಟಲು ಕಾಂಗ್ರೆಸ್ ಬದ್ಧ. ಅದರಲ್ಲೂ ಡಿ.ಕೆ ಶಿವಕುಮಾರ್ ಅವರು ಬದ್ಧ. ಅವರು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಸಲೀಂ ಅವರ ಹೇಳಿಕೆ ತಿರುಚುವುದು ಬೇಡ. ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಎಲ್ಲ ನಾಯಕರು ಒಗ್ಗಟ್ಟಿನಿಂದ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವ ಪ್ರಾಮಾಣಿಕ ಪ್ರಯತ್ನದಲ್ಲಿ ತೊಡಗಿದ್ದಾರೆ ಎಂದರು.

Related Articles

Leave a Reply

Your email address will not be published. Required fields are marked *

Back to top button